ಅಭ್ಯಾಸದ ವೇಳೆ ಮುರಿದ ಕುತ್ತಿಗೆ ಯುವ ಜಿಮ್ನಾಸ್ಟ್ ಬ್ರಿಜೇಶ್ ಸಾವು

ನವದೆಹಲಿ: ಅಭ್ಯಾಸದ ವೇಳೆ ಕುತ್ತಿಗೆ ಮುರಿದುಕೊಂಡಿದ್ದ 17 ವರ್ಷದ ಯುವ ಜಿಮ್ನಾಸ್ಟ್ ಬ್ರಿಜೇಶ್ ಯಾದವ್ ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಕಳೆದ ಅಕ್ಟೋಬರ್ 11ರಂದು ಆಗ್ರಾದಲ್ಲಿ ಅಭ್ಯಾಸ ನಡೆಸುವ ವೇಳೆ ‘ಡಬಲ್ ಫ್ರಂಟ್’ ಮಾಡುವ ಯತ್ನದಲ್ಲಿ ಎಡವಿದ್ದರು. ತಮ್ಮ ಕುತ್ತಿಗೆಯ ಮೂಲಕ ಲ್ಯಾಂಡಿಂಗ್ ಮಾಡಿದ್ದ ಬ್ರಿಜೇಶ್, ಕೋಮಾಕ್ಕೆ ಜಾರಿದ್ದರು. ರಾಷ್ಟ್ರಮಟ್ಟದ ಜಿಮ್ನಾಸ್ಟ್ ಆಗುವ ಎಲ್ಲ ನಿರೀಕ್ಷೆ ಮೂಡಿಸಿದ್ದ ಬ್ರಿಜೇಶ್, ಆಗ್ರಾದಲ್ಲಿಯೇ ನಡೆದಿದ್ದ ರಾಷ್ಟ್ರೀಯ ಶಾಲಾ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಎರಡು ತಿಂಗಳ ಕಾಲ ಕೋಮಾದಲ್ಲಿದ್ದ ಯುವ ಅಥ್ಲೀಟ್ ಭಾನುವಾರ ನಿಧನರಾದರು ಎಂದು ಅವರ ಕೋಚ್ ರಾಹುಲ್ ಚೋಪ್ರಾ ತಿಳಿಸಿದ್ದಾರೆ. ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಮರುದಿನವೇ ಅವರನ್ನು ಗುರುಗ್ರಾಮದ ಪರಾಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಅಕ್ಟೋಬರ್ನಲ್ಲಿಯೇ 2 ಶಸ್ತ್ರಚಿಕಿತ್ಸೆಯನ್ನು ಬ್ರಿಜೇಶ್ಗೆ ಮಾಡಲಾಗಿತ್ತು. ಆದರೆ, ಅವರ ಉಸಿರಾಟದ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗಿರಲಿಲ್ಲ. ‘ಸಾಮಾನ್ಯವಾಗಿ ಇಂಥ ಸ್ಥಿತಿಯಲ್ಲಿದ್ದ ಯಾರೇ ಆದರೂ ಸ್ಥಳದಲ್ಲೇ ಮೃತರಾಗುತ್ತಾರೆ. ಆದರೆ, ಅಂದಾಜು 50 ದಿನಗಳ ಕಾಲ ಬದುಕಿಗಾಗಿ ಹೋರಾಡಿದರೂ ಬ್ರಿಜೇಶ್ರನ್ನು ಬದುಕಿಸಲು ಸಾಧ್ಯವಾಗಲಿಲ್ಲ’ ಎಂದು ಪರಾಸ್ ಆಸ್ಪತ್ರೆಯ ಸ್ಪೈನ್ ಸರ್ಜರಿ ಮುಖ್ಯಸ್ಥ ಡಾ. ಅರುಣ್ ಭಾನೋಟ್ ಹೇಳಿದ್ದಾರೆ. -ಏಜೆನ್ಸೀಸ್

Leave a Reply

Your email address will not be published. Required fields are marked *