More

  ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರ್ಕಾರ – ಮಾಜಿ ಸಚಿವ ರೇಣುಕಾಚಾರ್ಯ ಕಿಡಿ 

  ದಾವಣಗೆರೆ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಗ್ಯಾರಂಟಿ ಯೋಜನೆಗಳೂ ಸಮರ್ಪಕ ಜಾರಿಯಾಗುತ್ತಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ದೂರಿದರು.
  ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಸರ್ಕಾರ ಬರಪೀಡಿತ ತಾಲ್ಲೂಕುಗಳನ್ನು ಘೋಷಿಸಿದ್ದರೂ, ಇದುವರೆಗೂ ರೈತರ ಖಾತೆಗೆ ನಯಾಪೈಸೆ ಬ ಪರಿಹಾರದ ಹಣ ವರ್ಗಾವಣೆ ಮಾಡಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
  ವರ್ಗಾವಣೆ ದಂಧೆಯಲ್ಲಿ ತೊಡಗಿರುವ ಕಾಂಗ್ರೆಸ್ ಸರ್ಕಾರ, ಇದುವರೆಗೂ ಟೇಕಾಫ್ ಆಗಿಲ್ಲ. ಅಭಿವೃದ್ಧಿ ಯೋಜನೆಗಳಿಗೆ ಹಣ ನೀಡದ ಸರ್ಕಾರ ಮದ್ಯ, ವಿದ್ಯುತ್ ಸೇರಿ ಎಲ್ಲದರ ದರವನ್ನೂ ಹೆಚ್ಚಿಸಿದೆ ಎಂದು ಕಿಡಿಕಾರಿದರು.
  ರೈತರು ತಲಾ ಎಕರೆಗೆ 20ರಿಂದ 25 ಸಾವಿರ ವೆಚ್ಚ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಕರೆಗೆ 2 ಸಾವಿರ ರೂ. ಮಾತ್ರ ನೀಡುವುದಾಗಿ ಹೇಳಿರುವುದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಕೂಡಲೆ ರೈತರ ಖಾತೆಗೆ ಬರ ಪರಿಹಾರದ ಮೊತ್ತ ಹಾಕಬೇಕು ಎಂದು ಆಗ್ರಹಿಸಿದರು.
  ಆರು ತಿಂಗಳಷ್ಟೇ ಪೂರೈಸಿದ ರಾಜ್ಯ ಸರ್ಕಾರದಲ್ಲಿ, ಶಾಸಕರಿಗೆ 50 ಲಕ್ಷ ರೂ. ಅನುದಾನವಷ್ಟೇ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಶಾಸಕರೇ ಜಗಳವಾಡಿಕೊಂಡು ಸರ್ಕಾರ ಪತನಗೊಳಿಸುತ್ತಾರೆ ಎಂದರು.
  ಜಾತಿಗಣತಿ ವರದಿಗೆ ನಮ್ಮ ವಿರೋಧವಿಲ್ಲ. ಆದರೆ, ವೈಜ್ಞಾನಿಕವಾಗಿ ಇರಬೇಕು. ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಬೇಕು. ಆ ನಂತರ ವರದಿ ಬಿಡುಗಡೆ ಮಾಡಲಿ ಎಂದು ಸಲಹೆ ನೀಡಿದರು.
  ಮುಖಂಡರಾದ ಕೆ.ಎಲ್.ಬಸವರಾಜ್, ಜಯರುದ್ರೇಶ್, ಬಸವರಾಜ, ವೆಂಕಟೇಶ್, ಅಣಜಿ ಬಸವರಾಜ್, ಮಂಜುನಾಥ್, ಕಲ್ಲಿಂಗಪ್ಪ ಕೆ.ಪಿ., ಪ್ರವೀಣ್, ಪಿ.ಎಸ್.ರಾಜು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts