More

  ಅಭಿವೃದ್ಧಿ ಮಾನದಂಡ ತಂದ ಗೆಲುವು- ಎಸ್ಸೆಸ್ಸೆಂಗೆ ಮತ್ತೆ ಉತ್ತರದಾಯಿತ್ವ

  ದಾವಣಗೆರೆ: ಹತ್ತು ವರ್ಷ ಹಿಂದಿನ ಅಭಿವೃದ್ಧಿ ಕಾರ್ಯಗಳ ಮಾನದಂಡ, ಕಳೆದ ಬಾರಿಯ ಅತ್ಯಲ್ಪ ಮತಗಳ ಸೋಲಿನ ಅನುಕಂಪ, ಕರಾರುವಕ್ಕಾದ ಪ್ರಚಾರ ತಂತ್ರ ಇವೆಲ್ಲದರ ಪರಿಣಾಮವಾಗಿ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಮತ್ತೆ ಎಸ್.ಎಸ್.ಮಲ್ಲಿಕಾರ್ಜುನ ಚುನಾಯಿತರಾಗಿದ್ದಾರೆ.
  ಕಳೆದ ಸಲ 4071 ಮತಗಳ ಅಂತರದಿಂದ ಸೋತಿದ್ದ ಎಸ್ಸೆಸ್ಸೆಂ, ಈ ಬಾರಿ 24472 ಮತಗಳ ಅಂತರದ ಜಯ ಗಳಿಸಿದ್ದಾರೆ. ಒಟ್ಟು ನಾಲ್ಕನೇ ಬಾರಿಗೆ ಶಾಸಕರಾಗಿದ್ದಾರೆ. (1998ರ ಉಪಚುನಾವಣೆ ಬಿಟ್ಟರೆ) 1999 ಮತ್ತು 2013ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಾಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಈಗ ಅವರು ಗೆದ್ದಾಗಲೂ ಇದೇ ಇತಿಹಾಸ ಮರುಕಳಿಸಿದೆ. ಹೀಗಾಗಿ ಅವರು ಅದೃಷ್ಟದ ನಾಯಕರೂ ಆಗಿದ್ದಾರೆ. ಮೂರನೇ ಬಾರಿಗೆ ಸಚಿವರಾಗುವ ಯೋಗಾಯೋಗ ಬಂದಿದೆ.
  ಬಿಜೆಪಿ ಶಾಸಕ ಎಸ್.ಎ.ರವೀಂದ್ರನಾಥ್ ಚುನಾವಣಾ ನಿವೃತ್ತಿ ಘೋಷಿಸಿದ ಬಳಿಕ, ರೈತ ಮೋರ್ಚಾದ ಜಿಲ್ಲಾಧ್ಯಕ್ಷರಾಗಿದ್ದ ಯುವ ಮುಖಂಡ ಲೋಕಿಕೆರೆ ನಾಗರಾಜ ಅವರನ್ನು ಕಣಕ್ಕಿಳಿಸಲಾಗಿತ್ತು. ಹೊಸ ಮುಖವಾಗಿಯೂ ಮಲ್ಲಿಕಾರ್ಜುನ್ ವಿರುದ್ಧ ಪ್ರಬಲ ಪೈಪೋಟಿ ನೀಡಿದ್ದರೂ ಆಡಳಿತ ವಿರೋಧಿ ಅಲೆ, ಬೆಲೆಯೇರಿಕೆ ವಿಚಾರಗಳು ಅಲ್ಲಲ್ಲಿ ಮತ ಗಳಿಕೆಗೆ ಹಿನ್ನಡೆಯಾದವು.
  ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮ ಕಾರ್ಯಕ್ರಮ ದಾವಣಗೆರೆ ಉತ್ತರ ಕ್ಷೇತ್ರ ಭಾಗದಲ್ಲಿ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಹೋದರೂ ಮತಗಳಾಗಿ ಪರಿವರ್ತನೆ ಆಗಲಿಲ್ಲ. ಲಿಂಗಾಯತ ಪ್ರಾಬಲ್ಯದ ಈ ಕೋಟೆಯಲ್ಲಿ ಇಬ್ಬರೂ ಅಭ್ಯರ್ಥಿಗಳು ಒಂದೇ ಸಮುದಾಯದವರಾಗಿದ್ದರಿಂದಲೂ ಮತಗಳು ಚದುರಿದವು.
  ಕಳೆದ ಬಾರಿ ಆರು ಮಂದಿ ಬಿಜೆಪಿ ಶಾಸಕರಿದ್ದರೂ ಜಿಲ್ಲಾ ಸಚಿವ ಸ್ಥಾನ ಇತರೆ ಜಿಲ್ಲೆಯವರಿಗೆ ನೀಡಿದ್ದರಿಂದ ಜನಸಾಮಾನ್ಯರು ಸಂಪರ್ಕ ಸಾಧಿಸುವುದು ಕಷ್ಟವಾಗಿತ್ತು. ಇದು ಕೂಡ ಪರಿಣಾಮ ಬೀರಿರುವ ಸಾಧ್ಯತೆ ಇಲ್ಲದಿಲ್ಲ. ಬಿಎಸ್‌ವೈ ಕಡೆಗಣನೆಯಿಂದ ವೀರಶೈವರ ಮತಬುಟ್ಟಿ ಕೈಗೆ ಪ್ಲಸ್ ಆಯಿತು. ಕಾಂಗ್ರೆಸ್‌ನ ಗ್ಯಾರಂಟಿ ಘೋಷಣೆಗಳು ಕೂಡ ಮತದಾರರ ಆಕರ್ಷಣೆ ಹೆಚ್ಚಿಸಿದ್ದು ಕೂಡ ಕ್ಷೇತ್ರದಲ್ಲಿ ಬಿಜೆಪಿಗೆ ಮುಳುವಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts