ಅಭಿವೃದ್ಧಿ ಮಾಡಿದ್ದರೆ ಬಹಿರಂಗ ಪಡಿಸಿ

ವಿಜಯವಾಣಿ ಸುದ್ದಿಜಾಲ ಹಾಸನ
ಹತ್ತು ವರ್ಷಗಳಿಂದ ಅಭಿವೃದ್ಧಿಯಿಂದ ದೂರ ಉಳಿ ದಿದ್ದ ಜಿಲ್ಲೆ ಈಗ ಶಾಪ ವಿಮೋಚನೆಯಾಗಿದೆ ಎನ್ನು ತ್ತಿರುವ ಸಚಿವ ರೇವಣ್ಣ ಅಧಿಕಾರಕ್ಕೆ ಬಂದು 6 ತಿಂಗಳು ಗತಿಸಿದ್ದು, ಯಾವ ಕೆಲಸ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಮಾಜಿ ಸಚಿವ ಎ.ಮಂಜು ಸವಾಲು ಹಾಕಿದರು.


ರೇವಣ್ಣ, ಕಾಂಗ್ರೆಸ್ ಅವಧಿಯಲ್ಲಿ ಕೈಗೊಂಡಿರುವ ಕೆಲಸ ಮುಂದಿಟ್ಟುಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಕಾಮಗಾರಿ ಗಳನ್ನು ಮುಂದುವರಿ ಸಬೇಕೆಂದು ಸಮನ್ವಯ ಸಮಿತಿಯಲ್ಲಿ ತೀರ್ಮಾ ನವಾಗಿದ್ದರೂ ಕೆಲಸಕ್ಕೆ ತಮ್ಮ ಹೆಸರು ಇಟ್ಟುಕೊಳ್ಳುತ್ತಿದ್ದಾರೆ.


ನಾನು ಸಚಿವನಾಗಿದ್ದ ಸಂದ ರ್ಭದಲ್ಲಿ ಹಾಸನ ರೈಲ್ವೆ ಮೇಲ್ಸೇ ತುವೆಗೆ ಅನುದಾನ ಬಿಡುಗಡೆ ಯಾಗಿದೆ. ಅಮೃತ್ ಯೋಜನೆ ಜಾರಿಯಾಗಿರುವುದು ಕಾಂಗ್ರೆಸ್ ಆಡಳಿತಾವಧಿ ಯಲ್ಲಿ ಎಂಬ ಸತ್ಯ ಜಿಲ್ಲೆಯ ಜನರಿಗೆ ಗೊತ್ತು ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.


ಕೇವಲ ಎರಡೂವರೆ ವರ್ಷ ಸಚಿವನಾಗಿದ್ದ ನಾನು 2,500 ಕೋಟಿ ರೂ. ವೆಚ್ಚದಲ್ಲಿ ಅರಕಲಗೂಡು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದೇನೆ. ದೇಶಕ್ಕೆ ಪ್ರಧಾನಿ, ರಾಜ್ಯಕ್ಕೆ ಮುಖ್ಯಮಂತ್ರಿ ಹಾಗೂ ಜಿಲ್ಲೆಗೆ ಸಚಿವ ಸ್ಥಾನ ನೀಡಿದ ಹೊಳೆನರಸೀಪುರ ಕ್ಷೇತ್ರ ಇನ್ನೂ ಅಭಿವೃದ್ಧಿಯಾಗಿಲ್ಲವೇಕೆ ಎಂದು ಜರಿದರು.


ಹಾಸನದ ಬಿಎಂ ರಸ್ತೆ ಕಾಮಗಾರಿ ಹಿಂದಿನ ಸರ್ಕಾರದಲ್ಲಿ ನಡೆದಿತ್ತು. ಯಾವುದೇ ತೊಂದರೆಯಿಲ್ಲದ ರಸ್ತೆಯನ್ನು ಅಗೆದು ದುಡ್ಡು ಹೊಡೆಯಲು ಯತ್ನಿಸುತ್ತಿದ್ದಾರೆ. ಯಾವುದೇ ಒಂದು ರಸ್ತೆ ದುರಸ್ತಿ ಮಾಡಬೇಕಾದರೆ ಆ ರಸ್ತೆ ನಿರ್ಮಾಣವಾಗಿ ಐದು ವರ್ಷ ಪೂರ್ಣಗೊಂಡಿರಬೇಕು ಎಂಬ ನಿಯಮವಿದೆ. ಆದರೆ ಸಚಿವ ರೇವಣ್ಣ ಸರ್ಕಾರದ ಯಾವ ನಿಯಮವನ್ನೂ ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.


ಮದುವೆ ಮುಖ್ಯ:
ಯಾವ ಕಾಮಗಾರಿಗೆ ಯಾವ ವರ್ಷ ಅನುಮೋದನೆ ಸಿಕ್ಕಿದೆ ಎಂಬುದು ಮುಖ್ಯವೇ ಹೊರತು ಯಾವಾಗ ಪೂರ್ಣಗೊಂಡಿತು ಎಂಬುದಲ್ಲ. ಕುಟುಂಬಕ್ಕೆ ಮದುವೆ ದಿನ ಮುಖ್ಯವೇ ಹೊರತು ಮೂರು ವರ್ಷಗಳು ಬಿಟ್ಟು ಮಕ್ಕಳಾಗುವುದಲ್ಲ ಎಂದು ಸಚಿವ ರೇವಣ್ಣರ ಕಾಲೆಳೆದರು.


ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನ ತಪ್ಪಿಸಿರುವುದು ಪ್ರಜಾಪ್ರಭುತ್ವಕ್ಕೆ ಕಳಂಕ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ ಎಂಬ ಪ್ರಜ್ಞೆ ರೇವಣ್ಣ ಅವರಿಗೆ ಇನ್ನೂ ಬಂದಿಲ್ಲ. ಕಾಂಗ್ರೆಸ್ ಬೆಂಬಲ ನೀಡದಿದ್ದರೆ ರೇವಣ್ಣ ಸಚಿವರಾಗುತ್ತಿರಲಿಲ್ಲ. ಗೋಪಾಲಸ್ವಾಮಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ.ಜಿ.ಪರಮೇಶ್ವರ್ ಒಪ್ಪಿದರೂ ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಅಡ್ಡಗಾಲಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೆ ನೋವುಂಟು ಮಾಡುವ ಕೆಲಸವನ್ನು ಸಚಿವ ರೇವಣ್ಣ ಬಿಡಬೇಕು ಎಂದು ಕಿವಿಮಾತು ಹೇಳಿದರು.


ಹಾಸನ, ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಲಿ:
ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಸಶಕ್ತವಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಹಾಸನ ಅಥವಾ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕು ಎಂದು ಮಾಜಿ ಸಚಿವ ಎ. ಮಂಜು ಪುನರುಚ್ಚರಿಸಿದರು.
ಮೈತ್ರಿ ಮಾತುಕತೆ ಏನಾಗುತ್ತದೆ ಎಂಬುದರ ಕುರಿತು ನನಗೇನೂ ಗೊತ್ತಿಲ್ಲ. ಆದರೆ ಹಾಸನದಿಂದ ಸ್ಪರ್ಧಿಸಲು ನಾನು ಸಿದ್ಧನಿದ್ದೇನೆ. ಯಾವ ಯಾವ ಜಿಲ್ಲೆಯಲ್ಲಿ ಮೈತ್ರಿ ಆಗಲಿದೆ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. 12 ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೋರಿದ್ದಾರೆ. ಈ ಸಂಬಂಧ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು. ಜ.13ರಂದು ಕೆಪಿಸಿಸಿ ಅಧ್ಯಕ್ಷರ ಜತೆ ಸಭೆ ಏರ್ಪಡಿಸಿದ್ದು, ಅಲ್ಲಿ ಸೀಟು ಹಂಚಿಕೆಯ ಕುರಿತು ಚರ್ಚಿಸಲಾಗುವುದು. ಹೈಕಮಾಂಡ್ ನನಗೆ ಮೋಸ ಮಾಡುವುದಿಲ್ಲ ಎಂಬ ನಂಬಿಕೆಯಿದೆ. ಮಾಜಿ ಸಚಿವ ದಿ. ಅಂಬರೀಷ್ ಪುತ್ರ ಅಭಿಷೇಕ್‌ಗೆ ಮಂಡ್ಯದಿಂದ ಟಿಕೆಟ್ ನೀಡುವಂತೆ ಕೋರಲಾಗಿದೆ. ಒಂದು ವೇಳೆ ಹಾಸನ ಅಥವಾ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡದಿದ್ದರೆ ನನ್ನ ಮುಂದಿನ ನಿರ್ಧಾರವನ್ನು ಬಹಿರಂಗಪಡಿಸುತ್ತೇನೆ ಎಂದು ಎ.ಮಂಜು ಎಚ್ಚರಿಸಿದರು.


ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ:
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಬಿಜೆಪಿ ಸೇರುತ್ತೇನೆಂಬುದು ಕೇವಲ ವದಂತಿ. ಯಾವ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ. ಕಾಂಗ್ರೆಸ್‌ನ ಯಾವ ಶಾಸಕರೂ ಬೇರೆ ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ಮುನಿಸ್ವಾಮಿ, ಜಯರಾಂ ಇದ್ದರು.

ಸಾಲ ಮನ್ನಾ ವಿರೋಧಿಸಿಲ್ಲ
ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ರೈತರ ಸಾಲ ಮನ್ನಾ ನಿರ್ಧಾರಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ತಮ್ಮಲ್ಲಿಯೇ ಈ ಕುರಿತು ಸ್ಪಷ್ಟತೆ ಇಲ್ಲವಾಗಿದೆ ಎಂದು ಮಾಜಿ ಸಚಿವ ಎ.ಮಂಜು ವಾಗ್ದಾಳಿ ನಡೆಸಿದರು.
ರಾಷ್ಟ್ರೀಕೃತ ಬಾಂಕ್, ಸ್ತ್ರೀಶಕ್ತಿ ಸಂಘ ಹಾಗೂ ಕೈ ಸಾಲ ಸೇರಿ ಎಲ್ಲ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದರು. ಅಧಿಕಾರಕ್ಕೆ ಬಂದು 6 ತಿಂಗಳು ಕಳೆದರೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದರು.
ಸಚಿವ ರೇವಣ್ಣ ಯಾವುದೇ ಮಾತು ಆಡುವಾಗ ಭಾಷೆಯ ಮೇಲೆ ಹಿಡಿತ ಕಾಯ್ದುಕೊಳ್ಳಬೇಕು. ಸಚಿವರೊಬ್ಬರಿಗೆ ಪುಟಗೋಸಿ ಎಂಬ ಪದ ಬಳಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಅಗೌರವ ತೋರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *