ಅಭಿವೃದ್ಧಿ ನೆಪದಲ್ಲಿ ಪರಿಸರಕ್ಕೆ ಧಕ್ಕೆ

ಬ್ಯಾಡಗಿ: ಆಧುನಿಕ ಬೆಳವಣಿಗೆ ಹಾಗೂ ಅಭಿವೃದ್ಧಿಯ ನೆಪದಲ್ಲಿ ಪರಿಸರದ ಸಮತೋಲನ ಹಾಳಾಗುತ್ತಿದ್ದು, ಹಲವು ಆಘಾತಕಾರಿ ಘಟನೆಗಳಿಗೆ ನಾವೆಲ್ಲರೂ ಹೊಣೆ ಹೊರಬೇಕಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಇಬ್ರಾಹಿಂ ಮುಜಾವರ ಹೇಳಿದರು.

ಪಟ್ಟಣದ ನ್ಯಾಯಾಲಯ ಸಭಾಭವನದಲ್ಲಿ ಗುರುವಾರ ವಿಶ್ವ ಭೂಮಾತೆ ರಕ್ಷಿಸಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿದತ್ತವಾಗಿ ಬೆಳೆದಿದ್ದ ಬೆಟ್ಟಗುಡ್ಡ ಹಾಗೂ ಬೃಹತ್ ಮರಗಳನ್ನು ಮಾರಣಹೋಮ ಮಾಡುವ ಮೂಲಕ ನಾವು ಪರಿಸರಕ್ಕೆ ಧಕ್ಕೆ ಮಾಡಿದ್ದೇವೆ. ಪ್ರಾಕೃತಿಕವಾಗಿ ಭೂಮಿ ಹಾಗೂ ಜಲ ಸುರಕ್ಷಿತವಾಗಿತ್ತು. ಆದರೆ, ಮಾನವ ದುರಾಸೆಯ ಕೊಡಲಿ ಪೆಟ್ಟಿಗೆ ಸಿಲುಕಿದ ಪರಿಸರ ವ್ಯವಸ್ಥೆ ಗಂಭೀರವಾಗಿದೆ. ಮಳೆಪ್ರಮಾಣ ವಾರ್ಷಿಕವಾಗಿ ಇಳಿಮುಖ, ಮತ್ತೊಂದೆಡೆ ನೆರೆ ಹಾವಳಿ. ಭೂಮಿಯನ್ನು ರಕ್ಷಿಸದ ನಾವು ಜ್ವಲಂತ ಸಮಸ್ಯೆಗಳನ್ನು ಹುಟ್ಟು ಹಾಕಿದ್ದೇವೆ ಎಂದರು.

ನದಿಗಳ ಬದಿಯಲ್ಲಿ ಬೃಹತ್ ಕೈಗಾರಿಕೆಗಳು ಹುಟ್ಟಿಕೊಂಡು ನದಿಗಳಿಗೆ ರಾಸಾಯನಿಕ ಬಿಡುತ್ತಿವೆ. ರೈತರ ಬೆಳೆ ಹಾಗೂ ಕುಡಿಯಲು ಇಂತಹ ನೀರು ಅಯೋಗ್ಯವಾಗಿದೆ. ಹೀಗಾದರೆ ಪರಿಸರ ಉಳಿಯಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ನಾವೆಲ್ಲ ಮೊದಲು ಪರಿಸರ ಉಳಿಸುವ, ಭೂತಾಯಿ ಕಾಪಾಡುವ ಸಂಕಲ್ಪಕ್ಕೆ ಬದ್ಧರಾಗಬೇಕಿದೆ ಎಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ಭವಿಷ್ಯದಲ್ಲಿ ಪ್ರಾಕೃತಿಕ ಏರುಪೇರಿನಿಂದ ದೊಡ್ಡ ಸಮಸ್ಯೆಗಳು ಎದುರಾಗುವ ಭೀತಿಯಿದೆ. ಏರುತ್ತಿರುವ ಜನಸಂಖ್ಯೆಗೆ ಭೂಮಿಯ ಒಡಲಿಗೆ ನಾವು ವಿಷವುಣಿಸುವ ಅನಿವಾರ್ಯ ಪರಿಸ್ಥಿತಿ ಬಂದಿದೆ. ಅಂತರ್ಜಲ ಮಟ್ಟ ಸಾವಿರ ಅಡಿ ಆಳಕ್ಕಿಳಿದಿದೆ. ಉಷ್ಣಾಂಶ ಏರಿಕೆಯಾಗುತ್ತ ಹೊರಟಿದ್ದು, ನಾವು ಊಹಿಸಲಾರದ ಪ್ರಾಕೃತಿಕ ವೈಪರೀತ್ಯಗಳು ಅಪ್ಪಳಿಸುತ್ತಿವೆ ಎಂದರು.

1974 ರಿಂದಲೂ ಪರಿಸರ ರಕ್ಷಣೆಗೆ ವಿಶೇಷ ಕಾಯ್ದೆ ಜಾರಿಗೊಂಡಿದ್ದರೂ ಸಮರ್ಪಕವಾಗಿ ಅನುಷ್ಠಾನಗೊಳ್ಳದಿರುವುದು ಬಹುತೇಕ ಸಮಸ್ಯೆಗಳಿಗೆ ಕಾರಣವಾಗಿವೆ. ಪರಿಸರ ಕುರಿತು ಜಾಗೃತರಾಗದಿದ್ದಲ್ಲಿ ಪಶ್ಚಾತ್ತಾಪ ಪಡುವ ದಿನಗಳು ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಕಿರಿಯ ದಿವಾಣಿ ನ್ಯಾಯಾಧೀಶ ರಾಜೇಶ ಹೊಸಮನಿ, ವಕೀಲರಾದ ಸಿ.ಪಿ. ದೊಣ್ಣೇರ, ಎಂ.ಕೆ. ಕೋಡಿಹಳ್ಳಿ, ಪಿ.ಸಿ. ಶೀಗಿಹಳ್ಳಿ, ಆರ್.ಸಿ. ಶಿಡೇನೂರ, ಎಂ.ಎ. ಮುಲ್ಲಾ, ಎಸ್.ಎನ್. ರ್ಬಾ ಇತರರಿದ್ದರು.

Leave a Reply

Your email address will not be published. Required fields are marked *