ಅಭಿವೃದ್ಧಿ ಕೆಲಸಗಳಿಗೆ ಜನ ಮೆಚ್ಚುಗೆ

ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜು ಮುಂಭಾಗ ಮತ್ತು ಪ್ರತಿ ವಿಧಾನಸಭೆ ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು. ಪರಸ್ಪರ ಸಿಹಿ ತಿನಿಸಿಕೊಂಡು ಸಂಭ್ರಮಿಸಿದರು. ಪಕ್ಷದ ಅಭ್ಯರ್ಥಿಯ ಗೆಲುವು ಖಚಿತವಾಗುತ್ತಿದ್ದಂತೆ ಮತ ಎಣಿಕೆ ಕೇಂದ್ರದಲ್ಲಿ ಜಮಾಯಿಸಿದ ಕಾರ್ಯಕರ್ತರು ಬಚ್ಚೇಗೌಡ ಮತ್ತು ಅವರ ಪುತ್ರ ಶರತ್ ಬಚ್ಚೇಗೌಡರನ್ನು ಎತ್ತಿಕೊಂಡು ಘೊಷಣೆಗಳೊಂದಿಗೆ ಸಾಗಿದರು.

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಪಕ್ಷ ಗೆಲುವು ಸಾಧಿಸಿರುವುದು ಖುಷಿಯ ವಿಚಾರ. ಕೇಂದ್ರದಲ್ಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಪಕ್ಷ ಬಹುಮತ ಹೊಂದಿದೆ. ಹಿಂದಿನ ಅಭಿವೃದ್ಧಿ ಕೆಲಸಗಳನ್ನು ಜನರು ಮೆಚ್ಚಿ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಸುಳ್ಳು ಆರೋಪಗಳ ಮೂಲಕ ದಿಕ್ಕು ತಪ್ಪಿಸಲು ಯತ್ನಿಸಿದ ವಿಪಕ್ಷಗಳಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ ಜಿ.ವಿ.ಮಂಜುನಾಥ್ ತಿಳಿಸಿದ್ದಾರೆ. ಮುಖಂಡರಾದ ಅಗಲಗುರ್ಕಿ ಚಂದ್ರಶೇಖರ್, ಲಕ್ಷ್ಮೀನಾರಾಯಣ ಗುಪ್ತ, ಲಕ್ಷ್ಮೀಪತಿ, ಮಂಜುನಾಥ್ ಮತ್ತಿತರರಿದ್ದರು.

ನಿಷೇಧಾಜ್ಞೆ ಘೊಷಣೆ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವಂತಿಲ್ಲ. ನಿಯಮವನ್ನು ಉಲ್ಲಂಘಿಸಿದಲ್ಲಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿತ್ತು. ಇದರ ನಡುವೆಯೂ ಮತ ಎಣಿಕೆ ಕೇಂದ್ರ ಮತ್ತು ಪ್ರಮುಖ ರಸ್ತೆಗಳಲ್ಲಿ ಪಟಾಕಿ ಸಿಡಿಸಲಾಯಿತು.

ಬಲಮುರಿ ವೃತ್ತದಲ್ಲೂ ಸಂಭ್ರಮ: ಚಿಕ್ಕಬಳ್ಳಾಪುರದ ಬಲಮುರಿ ವೃತ್ತದಲ್ಲಿ ಬಿಜೆಪಿ ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮುಖಂಡರಾದ ಎ.ವಿ.ಭೈರೇಗೌಡ, ಪ್ರೇಮಲೀಲಾ ವೆಂಕಟೇಶ್, ವಿಜಯಮ್ಮ, ವಿ.ಶ್ರೀನಿವಾಸ್, ಸುಗ್ಗರಾಜು ಮತ್ತಿತರರಿದ್ದರು.

 

 

Leave a Reply

Your email address will not be published. Required fields are marked *