ಅಭಿವೃದ್ಧಿ ಕುರಿತ ಚರ್ಚಿಸದ ಬಿಜೆಪಿ ಅಭ್ಯರ್ಥಿಗಳು ಸೈನಿಕರ ಸಾಧನೆಯನ್ನು ಆಧರಿಸಿ ಮತ ಕೇಳುತ್ತಿದ್ದಾರೆ

ಚಾಮರಾಜನಗರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಏರ್‌ಸ್ಟ್ರೈಕ್ ಮತ್ತು ಯೋಧರು ಸತ್ತದ್ದನ್ನು ಬಂಡವಾಳ ಮಾಡಿಕೊಂಡು ಚುನಾವಣೆ ಎದುರಿಸಲು ಮುಂದಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವಾನ್‌ಡಿಸೋಜ ಅವರು ಆರೋಪಿಸಿದರು.

ಕೇಂದ್ರದಲ್ಲಿ ಅಧಿಕಾರ ನಡೆಸಿದ ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಅಭ್ಯರ್ಥಿಗಳು ಚರ್ಚಿಸುತ್ತಿಲ್ಲ. ದೇಶದ ಸೈನಿಕರು ತೆಗೆದುಕೊಂಡ ಕ್ರಮಗಳನ್ನು ಬಿಜೆಪಿ ಸರ್ಕಾರದ ಕ್ರಮ ಎಂದು ಹೇಳಿಕೊಂಡು ಮತಯಾಚನೆ ಮಾಡುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯದ ಉದ್ದಗಲಕ್ಕೂ ನಾನು ಪ್ರವಾಸ ಮಾಡಿದ್ದೇನೆ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ನ್ಯಾಯದ ಪರ ಕೆಲಸ ಮಾಡಲಿಲ್ಲ ನೀಡಿದ್ದ ಭರವಸೆಗಳನ್ನು ಈಡೇರಿಸಲಿಲ್ಲ ಅವರನ್ನು ಏಕೆ ಬೆಂಬಲಿಸಬೇಕು ಎಂದು ಮತದಾರರು ಪ್ರಶ್ನಿಸುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲು ಜನರು ಬಯಸುತ್ತಿದ್ದಾರೆ. ರೈತರ ಮತ್ತು ಜನರ ಖಾತೆಗೆ ಹಣ ಹಾಕಿದ್ದಾರೆಯೇ? ಮುದ್ರಾ ಯೋಜನೆಯಿಂದ ಲಾಭವಾಯಿತೇ ಎಂದು ಜನರನ್ನು ವಿಚಾರಿಸಿದರೆ ಯಾವುದೇ ಲಾಭವಾಗಿಲ್ಲ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಆಡಳಿತ ನಡೆಸಿದ ಕಡೆಗಳಲ್ಲಿ ತಾನು ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ಹಿಂದೆ ರಾಜ್ಯದಲ್ಲಿದ್ದ ಕಾಂಗ್ರೆಸ್ ಸರ್ಕಾರ ತನ್ನೆಲ್ಲ ಭರವಸೆಗಳನ್ನು ನೆರವೇರಿಸಿತ್ತು. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡ ರಾಜ್ಯಗಳಲ್ಲಿ ಕಾಂಗ್ರೆಸ್ ನೀಡಿದ ಆಶ್ವಾಸನೆಯಂತೆ ರೈತರ ಸಾಲ ಮನ್ನಾ ಮಾಡಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *