ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜನ ತೋರುತ್ತಿರುವ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿ ಎಂದು ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಹೇಳಿದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಿ.ಮಲ್ಲಿಗೆರೆ ಗ್ರಾಪಂ ವ್ಯಾಪ್ತಿಯ ಆನುಕುಪ್ಪೆ ಗ್ರಾಮದ ಆನುಕುಪ್ಪಮ್ಮದೇವಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ದುದ್ದ ಹೋಬಳಿಯ ಗ್ರಾಮಗಳಲ್ಲಿ ಬೈಕ್ ರ‌್ಯಾಲಿ ಮೂಲಕ ಮತಯಾಚಿಸಿ ಮಾತನಾಡಿದರು.
ಕ್ಷೇತ್ರದ ಜನರ ಆಶೀರ್ವಾದದಿಂದ ಮೂರು ಬಾರಿ ಶಾಸಕ, ಸಚಿವ ಹಾಗೂ ಸಂಸದನ್ನಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ನನ್ನ ಗೆಲುವಿಗೆ ಶ್ರೀರಕ್ಷೆ ಎಂದರು.
ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನ ಬಳಿ ಹರಿಯುವ ಕಾವೇರಿ ನದಿಯಿಂದ 69 ಕಿಮೀ ಪೈಪ್‌ಲೈನ್ ಅಳವಡಿಸಿ ಏತನೀರಾವರಿ ಮೂಲಕ ದುದ್ದ ಭಾಗದ ಎಲ್ಲ ಗ್ರಾಮಗಳ ಕೆರೆಕಟ್ಟೆಗಳನ್ನು ತುಂಬಿಸುವ ಯೋಜನೆ ಮುಕ್ತಾಯ ಹಂತದಲ್ಲಿದೆ. ತಾಲೂಕಿನ ಬಳಘಟ್ಟ ಏತ ನೀರಾವರಿಗೆ ಚಾಲನೆ ದೊರೆತಿದ್ದು, ಈಗಾಗಲೇ ಅದರ ಪ್ರಯೋಜನವನ್ನು ರೈತರು ಪಡೆದುಕೊಳ್ಳುತ್ತಿದ್ದಾರೆ ಎಂದರು.
ನುಡಿದಂತೆ ನಡೆದು ಉತ್ತಮ ಸರ್ಕಾರ ನೀಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 2023ಕ್ಕೆ ಮುಖ್ಯಮಂತ್ರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದೇ ರೀತಿ ಅವರ ನೇತೃತ್ವದ ಸರ್ಕಾರದಲ್ಲಿ ನಾನು ಸಚಿವನಾಗುತ್ತೇನೆ. ಆದ್ದರಿಂದ ಕ್ಷೇತ್ರದ ಮತದಾರರು ಆಶೀರ್ವಾದ ಮಾಡಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕೋರಿದರು.
ಮತ ಪ್ರಚಾರ ವೇಳೆ ನೂರಾರು ಯುವಕರು ಬೈಕ್ ರ‌್ಯಾಲಿ ನಡೆಸಿ ಜೈಕಾರ ಕೂಗಿದರು. ಮಹಿಳೆಯರು ಆರತಿ ಬೆಳಗಿ ಶುಭ ಹಾರೈಸಿದರು. ದುದ್ದ ಹೋಬಳಿಯ ಜೆಡಿಎಸ್ ಮುಖಂಡರು ಹಾಗೂ ಅಭಿಮಾನಿಗಳು ಇದ್ದರು.