ಪ್ರತ್ಯೇಕ ಪ್ರಕರಣ: ಆನ್​ಲೈನ್ ವಂಚನೆ

ಶಿವಮೊಗ್ಗ: ಪ್ರತ್ಯೇಕ ಪ್ರಕರಣದಲ್ಲಿ ಎಟಿಎಂ ಕಾರ್ಡ್ ಬ್ಲಾಕ್ ಆಗಲಿದ್ದು, ಬದಲಿಸಿ ಕೊಡುವುದಾಗಿ ಎಸ್​ಬಿಐ ಹಾಗೂ ಸಿಂಡಿಕೇಟ್ ಬ್ಯಾಂಕ್​ನ ಅಧಿಕಾರಿಗಳ ಸೋಗಿನಲ್ಲಿ ದೂರವಾಣಿ ಕರೆ ಮಾಡಿ ಆನ್​ಲೈನ್ ಮೂಲಕ ಒಂದು ಲಕ್ಷ ರೂ. ಗೂ ಅಧಿಕ ಹಣ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹೊಸಮನೆ ಬಡಾವಣೆ ಸೌಮ್ಯ ನಾಯಕಿ ಹಾಗೂ ತೀರ್ಥಹಳ್ಳಿ ತಾಲೂಕಿನ ಮುದ್ದಿನ ಗದ್ದೆಯ ಎಚ್.ಟಿ.ಶಿವಾನಂದ ವಂಚನೆಗೆ ಒಳಗಾದವರು. ಸೌಮ್ಯಾ ನಾಯಕಿ ಅವರ ಮೊಬೈಲ್ ನಂಬರ್​ಗೆ ಗುರುವಾರ ಮಧ್ಯಾಹ್ನ +91-918167841181 ನಂಬರ್​ನಿಂದ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಎಟಿಎಂ ಕಾರ್ಡ್ ನವೀಕರಣ ಮಾಡಬೇಕಿದೆ ಎಂದು ನಂಬಿಸಿದ್ದಾರೆ. ವಂಚಕರ ಮಾತುಗಳನ್ನು ನಂಬಿದ ಸೌಮ್ಯಾ ಅವರು ಎಟಿಎಂ ಕಾರ್ಡ್ ನಂಬರ್ ಕೊಟ್ಟಿದ್ದಾರೆ. ನಂಬರ್ ಕೊಟ್ಟ ಕೆಲವೇ ಕ್ಷಣಗಳಲ್ಲಿ ಎಸ್​ಬಿಐ ಖಾತೆಯ ಅಕೌಂಟ್​ನಿಂದ 50 ಸಾವಿರ ರೂ. ಆನ್​ಲೈನ್ ಮೂಲಕ ಡ್ರಾ ಮಾಡಿಕೊಳ್ಳಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ತೀರ್ಥಹಳ್ಳಿ ತಾಲೂಕಿನ ಶಿವಾನಂದ ಅವರಿಗೆ +91 9581955631 ನಂಬರ್​ನಿಂದ ಕರೆ ಮಾಡಿದ್ದು, ಎಟಿಎಂ ಕಾರ್ಡ್ ಬ್ಲಾಕ್ ಆಗಲಿದೆ. ಹಾಗಾಗಿ ಎಟಿಎಂ ಕಾರ್ಡ್ ನಂಬರ್ ಹೇಳಿದರೆ ನಿಮ್ಮ ಕಾರ್ಡ್ ಸರಿ ಮಾಡುತ್ತೇವೆಂದು ನಂಬಿಸಿದ್ದಾರೆ. ಅವರ ಮಾತು ನಂಬಿದ ಶಿವಾನಂದ್ ಕೂಡ ಎಟಿಎಂ ಕಾರ್ಡ್ ನಂಬರ್ ನೀಡಿದ್ದಾರೆ. ಆನಂತರ ಕೋಣಂದೂರು ಸಿಂಡಿಕೇಟ್ ಬ್ಯಾಂಕ್​ನಲ್ಲಿ ಶಿವಾನಂದ್ ಖಾತೆಯಿಂದ 64,996 ರೂ. ಆನ್​ಲೈನ್ ಮೂಲಕ ಡ್ರಾ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಬೈಕ್ ಡಿಕ್ಕಿ: ಗಾಯಾಳು ಸಾವು: ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದ ಆನವಟ್ಟಿ ನಾಡಕಚೇರಿ ಗುತ್ತಿಗೆದಾರ, ಸೊರಬ ತಾಲೂಕಿನ ಹಿರೇಚೌಟಿ ಗ್ರಾಮದ ನರಸಪ್ಪ (68) ಅವರು ಗುರುವಾರ ಚಿಕಿತ್ಸೆ ಫಲಿಸದೇ ಭದ್ರಾವತಿಯಲ್ಲಿ ಮೃತಪಟ್ಟಿದ್ದಾರೆ.

ಫೆ.20ರಂದು ಆನವಟ್ಟಿ-ಹಾನಗಲ್ ಮುಖ್ಯ ರಸ್ತೆ ದಾಟುವಾಗ ಶಿಕಾರಿಪುರ ವಿನಾಯಕನಗರ 8ನೇ ಕ್ರಾಸ್​ನ ಇಬ್ರಾಹಿಂ ಎಂಬುವರ ಬೈಕ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಆನವಟ್ಟಿ ಸರ್ಕಾರಿ ಆಸ್ಪತ್ರೆ ದಾಖಲಿಸಲಾಗಿತ್ತು. ಆನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆ ಹಾಗೂ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮಂಗಳವಾರ ಮಧ್ಯಾಹ್ನ ಭದ್ರಾವತಿಯ ಅಳಿಯನ ಮನೆಗೆ ಕರೆತಂದಿದ್ದು, ಗುರುವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಈ ಬಗ್ಗೆ ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ: ಇಬ್ಬರ ಬಂಧನ: ಅಕ್ರಮ ಮದ್ಯ ಮಾರಾಟದ ಪ್ರತ್ಯೇಕ ಪ್ರಕರಣದಲ್ಲಿ ಕುಂಸಿ ಮತ್ತು ಗ್ರಾಮಾಂತರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸಿರಿಗೆರೆಯ ಕೃಷ್ಣಪ್ಪ ಹಾಗೂ ಸೋಮಿನಕೊಪ್ಪದ ರಂಗಪ್ಪ ಬಂಧಿತರು.

ಸಿರಿಗೆರೆ ಗ್ರಾಮದ ಕೃಷ್ಣಪ್ಪ ಅವರು ಕಿರಾಣಿ ಅಂಗಡಿಯಲ್ಲಿ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕುಂಸಿ ಪೊಲೀಸರು ದಾಳಿ ನಡೆಸಿದ್ದು, ಕೃಷ್ಣಪ್ಪನನ್ನು ಬಂಧಿಸಿ, 121 ರೂ. ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಸೋಮಿನಕೊಪ್ಪದ ರಂಗಪ್ಪ ಎಂಬುವರು ಮನೆ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವೆನೆಗೆ ಅವಕಾಶ ನೀಡಿದ್ದರು. ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು, 960 ರೂ. ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಗೃಹಿಣಿ ನಾಪತ್ತೆ: ದೂರು ದಾಖಲು: ತೀರ್ಥಹಳ್ಳಿ ತಾಲೂಕಿನ ಹರುಳಿ ಗ್ರಾಮದ ಗೃಹಿಣಿ ಮಂಜುಳಾ(27) ನಾಪತ್ತೆಯಾಗಿದ್ದಾರೆ. ಕಳೆದ ಮಂಗಳವಾರ ಕೆಲಸದ ನಿಮಿತ್ತ ಮನೆಯಿಂದ ಹೊರಹೋಗಿದ್ದು, ವಾಪಸ್ ಬಂದು ನೋಡಿದಾಗ ಮಂಜುಳಾ ಐದು ವರ್ಷದ ಮಗಳನ್ನು ಬಿಟ್ಟು, ತಾಳಿ ಹಾಗೂ ಕಾಲುಂಗರ ಕಳಚಿಟ್ಟು ಹೋಗಿದ್ದಾರೆ.

5.5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಮಾತನಾಡಬಲ್ಲರು. ಅದೇ ದಿನ ಹುರಳಿಯಿಂದ ನಾಲೂರಿಗೆ ಆಟೋದಲ್ಲಿ ಬಂದು ಅಲ್ಲಿಂದ ಅಪರಿಚಿತ ವ್ಯಕ್ತಿಯೊಂದಿಗೆ ಸ್ಕೂಟಿಯಲ್ಲಿ ತೆರಳಿದ್ದಾರೆ ಎನ್ನಲಾಗಿದೆ. ಆಕೆಯ ಮೊಬೈಲ್ ನಂಬರ್ ಸ್ವಿಚ್ ಆಫ್ ಇದ್ದು, ಪತ್ನಿಯನ್ನು ಹುಡುಕಿಕೊಡುವಂತೆ ಪತಿ ಯಜ್ಞನಾರಾಯಣ ಐತಾಳ್ ತೀರ್ಥಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.