More

  ಅಭಿವೃದ್ಧಿ ಕಾಮಗಾರಿಗಳಿಗೆ ಅಡಚಣೆ

  ರಾಣೆಬೆನ್ನೂರ: ಇಲ್ಲಿಯ ನಗರಸಭೆ ಚುನಾವಣೆ ನಡೆದು ಬರೋಬ್ಬರಿ ಒಂದು ವರ್ಷ ಐದು ತಿಂಗಳು ಕಳೆದಿದೆ. ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ, ನಗರಸಭೆಯಲ್ಲಿ ಈಗಾಗಲೇ ಅಧ್ಯಕ್ಷ, ಉಪಾಧ್ಯಕ್ಷರ ದರ್ಬಾರು ಶುರುವಾಗಬೇಕಿತ್ತು. ಆದರೆ, ಚುನಾಯಿತ ಸದಸ್ಯರಿಗೆ ಇನ್ನೂ ಅಧಿಕಾರ ಭಾಗ್ಯ ಲಭಿಸಲಿಲ್ಲ.

  ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗದ ಕಾರಣ ಒಂದೆಡೆ ಅಧಿಕಾರವಿಲ್ಲದೆ ಸದಸ್ಯರು ಹಲ್ಲಿಲ್ಲದ ಹಾವಿನಂತಾಗಿದ್ದರೆ, ಮತ್ತೊಂದೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಭಾರಿ ಹಿನ್ನಡೆ ಉಂಟಾಗಿದೆ. ಈ ನಡುವೆ ಸದಸ್ಯರ ಕೈಗೆ ಆಡಳಿತ ನೀಡಬೇಕಿರುವ ರಾಜ್ಯ ಸರ್ಕಾರ ಮಾತ್ರ ನಿದ್ದೆಗೆ ಜಾರಿದಂತಿದೆ.

  35 ವಾರ್ಡ್ ಇರುವ ನಗರಸಭೆಗೆ 31-8-2018ರಂದು ಚುನಾವಣೆ ನಡೆದಿದ್ದು, 3-9-2018ರಂದು ಫಲಿತಾಂಶ ಪ್ರಕಟವಾಗಿದೆ. ಬಿಜೆಪಿಯಿಂದ 15, ಕೆಪಿಜೆಪಿಯಿಂದ 10, ಕಾಂಗ್ರೆಸ್​ನಿಂದ 9, ಪಕ್ಷೇತರವಾಗಿ ಒಬ್ಬರು ಆಯ್ಕೆಯಾಗಿದ್ದಾರೆ. ಇದೇ ದಿನ ರಾಜ್ಯ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದ್ದು, ಅಧ್ಯಕ್ಷ ಸ್ಥಾನ ‘ಹಿಂದುಳಿದ ಅ-ವರ್ಗ ಮಹಿಳೆ’ ಹಾಗೂ ಉಪಾಧ್ಯಕ್ಷ ಸ್ಥಾನ ‘ಸಾಮಾನ್ಯ’ಕ್ಕೆ ಮೀಸಲಾತಿ ನೀಡಿದೆ.

  ವಿಳಂಬವೇಕೆ?: ಸರ್ಕಾರದ ಮೀಸಲಾತಿ ಪ್ರಶ್ನಿಸಿ ಸದಸ್ಯ ಪ್ರಕಾಶ ಬುರಡಿಕಟ್ಟಿ ಅವರು ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಇದೇ ರೀತಿ ಬಳ್ಳಾರಿ, ರಾಯಚೂರು ಸೇರಿ ಮೂರ್ನಾಲ್ಕು ನಗರಸಭೆಯ ಮೀಸಲಾತಿ ಪ್ರಶ್ನಿಸಿ ಬೆಂಗಳೂರು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಅವುಗಳು ವಿಚಾರಣೆ ಮುಗಿದಿದ್ದು ಮೀಸಲಾತಿ ಪ್ರಕಟಣೆ ವಿಚಾರ ಇದೀಗ ಪೌರಾಡಳಿತ ಸಚಿವಾಲಯದ ಅಂಗಳದಲ್ಲಿದೆ. ಆದರೆ, ಪೌರಾಡಳಿತ ಸಚಿವಾಲಯ ಈವರೆಗೂ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ದಿನಾಂಕ ಘೊಷಿಸಿಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

  ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆ: ಸದ್ಯ ನಗರಸಭೆ ಆಡಳಿತಾಧಿಕಾರಿ ಸ್ಥಾನವನ್ನು ಜಿಲ್ಲಾಧಿಕಾರಿ ವಹಿಸಿಕೊಂಡಿದ್ದಾರೆ. ನಗರಸಭೆ ಆಯುಕ್ತರಿಗೆ 5 ಲಕ್ಷ ರೂ.ವರೆಗಿನ ಕಾಮಗಾರಿ ಮಂಜೂರಾತಿ ನೀಡಲು ಅವಕಾಶವಿದೆ. 5 ಲಕ್ಷ ರೂ. ಮೇಲ್ಪಟ್ಟ ಕಾಮಗಾರಿಗಳಿಗೆ ಜಿಲ್ಲಾಧಿಕಾರಿ ಅನುಮೋದನೆ ಪಡೆಯಬೇಕು. ಹೀಗಾಗಿ, 35 ವಾರ್ಡ್​ಗಳಲ್ಲಿಯೂ ರಸ್ತೆ ಸುಧಾರಣೆ, ಚರಂಡಿ, ಬೀದಿ ದೀಪ ಅಳವಡಿಕೆ, ಕುಡಿಯುವ ನೀರಿನ ಪೈಪ್​ಲೈನ್ ಅಳವಡಿಕೆ, ನೀರು ಪೂರೈಕೆ ಸೇರಿ ಕೋಟ್ಯಂತರ ರೂ. ಮೊತ್ತದ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ.

  ಈ ಹಿಂದಿದ್ದ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಅವರು ಯಾವುದೇ ಕಾಮಗಾರಿಗಳಿಗೆ ಅನುಮೋದನೆ ನೀಡಿಲ್ಲ ಎನ್ನುವ ಆರೋಪವಿದೆ. ಸದ್ಯ ಕೃಷ್ಣ ಬಾಜಪೈ ಜಿಲ್ಲಾಧಿಕಾರಿ ಸ್ಥಾನದಲ್ಲಿದ್ದಾರೆ. ಆದರೆ, ಅವರು ನಗರಸಭೆಗೆ ಒಮ್ಮೆಯೂ ಭೇಟಿ ನೀಡಿಲ್ಲ, ಸಮಸ್ಯೆ ಕುರಿತು ಆಲಿಸಿಲ್ಲ ಎಂಬುದು ಜನರ ಆರೋಪವಾಗಿದೆ.

  ರಾಜ್ಯ ಸರ್ಕಾರ ಕೂಡಲೆ ಈ ಕುರಿತು ಸೂಕ್ತ ಕ್ರಮ ಕೈಗೊಂಡು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ದಿನಾಂಕ ಘೊಷಿಸಬೇಕಿದೆ. ಇಲ್ಲವಾದರೆ, ಅಭಿವೃದ್ಧಿ ಕಾರ್ಯಗಳಿಗೆ ಇನ್ನೂ ಹೆಚ್ಚಿನ ಹಿನ್ನಡೆ ಉಂಟಾಗಿ, ಸಾರ್ವಜನಿಕರು ನಗರಸಭೆ ವಿರುದ್ಧ ಹೋರಾಟ ಹಾದಿ ಹಿಡಿಯಬೇಕಾಗುತ್ತದೆ ಎಂಬುದು ನಗರಸಭೆ ಸದಸ್ಯರ ಎಚ್ಚರಿಕೆಯಾಗಿದೆ.

  ಆದಾಯಕ್ಕೂ ಕೊಕ್ಕೆ: ನಗರಸಭೆ ಆಡಳಿತ ಮಂಡಳಿ ರಚನೆಯಾಗದ ಕಾರಣ ಆದಾಯಕ್ಕೂ ಕೊಕ್ಕೆ ಬಿದ್ದಿದೆ. ಎಂ.ಜಿ. ರಸ್ತೆಯಲ್ಲಿ ನಗರಸಭೆಯಿಂದ ನಿರ್ವಿುಸಿದ ವಾಣಿಜ್ಯ ಮಳಿಗೆಗಳನ್ನು ಹರಾಜು ಮಾಡಲು 2019ರ ಆರಂಭದಲ್ಲಿಯೇ ಟೆಂಡರ್ ಕರೆಯಲಾಗಿತ್ತು. ಆದರೆ, ಈ ಹಿಂದಿದ್ದ ವ್ಯಾಪಾರಸ್ಥರು ನೂತನ ಮಳಿಗೆಗಳನ್ನು ತಮಗೆ ನೀಡಬೇಕು ಎಂದು ಆಗ್ರಹಿಸಿದರು. ಅದರಂತೆ, ಬೇರೆ ಬೇರೆ ವ್ಯಾಪಾರಸ್ಥರು ಎಲ್ಲ ಮಳಿಗೆಗಳನ್ನು ಹೊಸದಾಗಿ ಬಹಿರಂಗ ಹರಾಜು ಮಾಡಬೇಕು ಎಂದು ಪಟ್ಟುಹಿಡಿದರು. ಈ ಕುರಿತು ಜಿಲ್ಲಾಧಿಕಾರಿ ಸೂಕ್ತ ನಿರ್ಣಯ ತೆಗೆದುಕೊಳ್ಳದ ಕಾರಣ ಹಾಗೂ ಮುಂದಿನ ಕ್ರಮದ ಕುರಿತು ರಾಜ್ಯ ಸರ್ಕಾರದ ಅಭಿಪ್ರಾಯ ತೆಗೆದುಕೊಳ್ಳಬೇಕಾಗಿರುವುದರಿಂದ ಮಳಿಗೆ ಹರಾಜು ಮುಂದೂಡಲಾಗಿದೆ. ನಗರಸಭೆ ಆಡಳಿತ ಮಂಡಳಿ ಇದ್ದಿದ್ದರೆ, ಈ ಕುರಿತು ಒಮ್ಮತದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತಿತ್ತು. ಇದೀಗ ಮಳಿಗೆ ನಿರ್ವಣವಾಗಿ ಒಂದೂವರೆ ವರ್ಷ ಕಳೆದರೂ ಇನ್ನೂ ಬಾಡಿಗೆಗೆ ನೀಡಿದ ಕಾರಣ ನಗರಸಭೆಯ ಆದಾಯಕ್ಕೂ ಕೋಟ್ಯಂತರ ರೂ. ಕೊಕ್ಕೆ ಬಿದ್ದಂತಾಗಿದೆ.

  ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಶ್ನಿಸಿ ರಾಜ್ಯದ ವಿವಿಧ ನಗರಸಭೆ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೀಗ ಎಲ್ಲ ಪ್ರಕರಣಗಳು ಇತ್ಯರ್ಥಗೊಂಡಿವೆ. ಆದ್ದರಿಂದ ರಾಜ್ಯ ಸರ್ಕಾರ ತಡ ಮಾಡದೇ ಸೂಕ್ತ ಕ್ರಮ ಕೈಗೊಂಡು ಸರಿಯಾದ ರೀತಿಯಲ್ಲಿ ಮೀಸಲಾತಿ ಪ್ರಕಟಿಸಿ, ನಗರಸಭೆ ಆಡಳಿತ ಮಂಡಳಿ ರಚನೆಗೆ ಅವಕಾಶ ನೀಡಬೇಕು. ಇದರಿಂದ ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳಿಗೆ ಅನುಕೂಲವಾಗಲಿದೆ.

  | ಪ್ರಕಾಶ ಬುರಡಿಕಟ್ಟಿ, ನಗರಸಭೆ ಸದಸ್ಯ

  ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಸಲುವಾಗಿ ನ್ಯಾಯಾಲಯದಲ್ಲಿದ್ದ ಪ್ರಕರಣಗಳು ಇತ್ಯರ್ಥಗೊಂಡಿವೆ. ಇನ್ನೆರಡು ದಿನದಲ್ಲಿ ಮೀಸಲಾತಿ ಪ್ರಕಟವಾಗುವ ಸಾಧ್ಯತೆಯಿದೆ. ನಂತರ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ದಿನಾಂಕ ನಿಗದಿಪಡಿಸಲಾಗುವುದು.

  | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts