ಅಭಿವೃದ್ಧಿ ಕನಸುಗಳಿಲ್ಲದ ರಾಷ್ಟ್ರನಾಯಕರು!

ಬೆಂಗಳೂರು: ಬಹುದೊಡ್ಡ ಪರಂಪರೆ ಹೊಂದಿರುವ ರಾಷ್ಟ್ರದಲ್ಲಿ ಹಗುರವಾಗಿ ಮಾತನಾಡುವವರ ಸಂಖ್ಯೆ ಅಧಿಕ ವಾಗಿರುವುದು ದುರಂತ ಎಂದು ಹಿರಿಯ ಸಾಹಿತಿ ಡಾ. ಗೊ.ರು. ಚನ್ನಬಸಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ಸಿ. ವೀರಣ್ಣ ಮರು ನಿರೂಪಣೆ ಮಾಡಿದ ‘ದೇವಚಂದ್ರನ ರಾಜಾವಳಿಯ ಜನಪದ ಕತೆಗಳು’, ಪ್ರೊ. ಸಂಪಿಗೆ ತೋಂಟದಾರ್ಯ ರಚಿಸಿದ ‘ಬೆಳಕು ಬಿತ್ತುವ ಬದುಕು’ ನಾಟಕ ಹಾಗೂ ಡಾ. ಸಿ.ವಿ. ವೇಣುಗೋಪಾಲ್ ಅನುವಾದ ಮಾಡಿರುವ ‘ಲೈಫ್ ದಟ್ ಸ್ಪ್ರೆಡ್ಸ್ ಲೈಟ್’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲೋಕಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷಗಳ ನಾಯಕರು ಬರಿ ಮಾತನಾಡಿದರು. ರಾಷ್ಟ್ರದ ಅಭಿವೃದ್ಧಿ, ಮುಂದಿನ ಭವಿಷ್ಯದ ಬಗ್ಗೆ ಯಾರೂ ಚಕಾರ ಎತ್ತಲಿಲ್ಲ. ಇಡೀ ಜನತಂತ್ರಕ್ಕೆ ಈಗ ಗರ ಬಡಿದಿದೆ. ಇದು ಹೀಗೆಯೇ ಮುಂದುವರಿದರೆ ರಾಷ್ಟ್ರದ ಭವಿಷ್ಯ ಮಸುಕಾಗುತ್ತದೆ ಎಂದರು.

‘ದೇವಚಂದ್ರನ ರಾಜಾವಳಿಯ ಜನಪದ ಕತೆಗಳು’, ‘ಬೆಳಕು ಬಿತ್ತುವ ಬದುಕು’, ‘ಲೈಫ್ ದಟ್ ಸ್ಪ್ರೆಡ್ಸ್ ಲೈಟ್’ ಪುಸ್ತಕಗಳು ಉತ್ತಮವಾಗಿವೆ. ಇವುಗಳ ಅಧ್ಯಯನದಿಂದ ಜ್ಞಾನ ವೃದ್ಧಿಸುತ್ತದೆ ಎಂದರು.

ಕರ್ನಾಟಕ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಸಿ.ವಿ. ವೇಣುಗೋಪಾಲ್ ಮತ್ತಿತರರಿದ್ದರು.

ಬೆಳಕು ಬಿತ್ತುವ ಬದುಕು ನಾಟಕದಲ್ಲಿ ಉಪನಿಷತ್​ನ ಹಲವು ಶ್ಲೋಕಗಳನ್ನು ಬಳಸಿಕೊಂಡಿದ್ದೇನೆ. ಈ ಶ್ಲೋಕಗಳು ಉತ್ತಮವಾಗಿರುವುದರಿಂದ ನಾಟಕದ ವಸ್ತುವಿಗೆ ಹೊಂದಿಕೊಳ್ಳುತ್ತವೆ. ಭೌತವಿಜ್ಞಾನದ ಬೆಳಕಿನಲ್ಲಿ ಸಮಾಜಕ್ಕೆ ಅಗತ್ಯವಾದ ಶಿಕ್ಷಣ ನೀಡುವ ವಸ್ತುವನ್ನು ಕೃತಿ ಹೊಂದಿದೆ.

| ಪ್ರೊ. ಸಂಪಿಗೆ ತೋಂಟದಾರ್ಯ,  ಲೇಖಕ

ನಾಟಕದಿಂದ ಜಾಗತಿಕ ಚರ್ಚೆ

ಪ್ರೊ.ಸಂಪಿಗೆ ತೋಂಟದಾರ್ಯ ರಚಿಸಿರುವ ‘ಬೆಳಕ ಬಿತ್ತುವ ಬದುಕು’ ನಾಟಕ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುವಂಥ ಕಥಾವಸ್ತು ಹೊಂದಿದೆ. ಶಿಕ್ಷಣದ ಅನಿವಾರ್ಯತೆಯನ್ನು ನಾಟಕ ಬಿಂಬಿಸುತ್ತದೆ ಎಂದು ರಾಜ್ಯ ನಾಟಕ ಅಕಾಡೆಮಿ ಸದಸ್ಯ ಆರ್. ವೆಂಕಟರಾಜು ಹೇಳಿದರು. ಶ್ರೇಣಿಕೃತ ಸಮಾಜ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾಟಕ ತೋರಿಸುತ್ತದೆ ಎಂದರು.

Leave a Reply

Your email address will not be published. Required fields are marked *