Thursday, 13th December 2018  

Vijayavani

Breaking News

ಅಭಿವೃದ್ಧಿ ಒಪ್ಪಿದರೂ ಜಾತಿ ಬಿಡದ ಮತದಾರ!

Tuesday, 19.12.2017, 3:02 AM       No Comments

ಗುಜರಾತ್ ಫಲಿತಾಂಶ ಎಲ್ಲ ಪಕ್ಷಗಳಿಗೂ ಪಾಠ ಕಲಿಸಿದೆ, ಎಚ್ಚರಿಕೆಯ ಸಂದೇಶ ರವಾನಿಸಿದೆ. ಜಾತಿ ಸಮೀಕರಣಗಳನ್ನೇ ನಂಬಿಕೊಂಡ ಕಾಂಗ್ರೆಸ್ ಅಧಿಕಾರದ ಗದ್ದುಗೆ ತಲುಪುವಲ್ಲಿ ವಿಫಲವಾಗಿದ್ದರೆ, ಅಧಿಕಾರ ಉಳಿಸಿಕೊಂಡ ಬಿಜೆಪಿ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳನ್ನು ಪಡೆದುಕೊಂಡಿದೆ. ಮುಂದಿನ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೂ ಇದು ದಿಕ್ಸೂಚಿಯಾಗಲಿದೆ ಎಂದು ವಿಶ್ಲೇಷಿಸಲಾಗಿದ್ದು, ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳ ಪಾಲಿಗೆ ಅವಲೋಕನದ ಅವಶ್ಯಕತೆಯನ್ನು ಮತದಾರ ಮನದಟ್ಟು ಮಾಡಿಕೊಟ್ಟಿದ್ದಾನೆ. ಒಟ್ಟಾರೆ ಬಿಜೆಪಿ ಗೆದ್ದರೂ ಬೀಗದ, ಕಾಂಗ್ರೆಸ್ ಸೋತರೂ ನಿರಾಶೆಗೊಳ್ಳದ ಜನಾದೇಶವಿದು.

 22 ವರ್ಷಗಳ ನಿರಂತರ ಆಡಳಿತದಿಂದಾಗಿ ಸೃಷ್ಟಿಯಾದ ವಿರೋಧಿ ಅಲೆ, ನೋಟು ಅಮಾನ್ಯೀಕರಣ, ಜಿಎಸ್​ಟಿ ಜಾರಿ ಮತ್ತು ಹಾರ್ದಿಕ್-ಅಲ್ಪೇಶ್-ಜಿಗ್ನೇಶ್ ಒಳಗೊಂಡ ಕಾಂಗ್ರೆಸ್​ನ ಜಾತಿ ಸಮೀಕರಣದ ಸವಾಲುಗಳ ಮಧ್ಯೆಯೂ ಗುಜರಾತ್​ನಲ್ಲಿ ಬಿಜೆಪಿ ಮತ್ತೊಮ್ಮೆ ಗದ್ದುಗೆಯೇರುತ್ತಿರುವುದು ಗಮನಾರ್ಹ ಸಾಧನೆಯೇ ಸರಿ. ನರೇಂದ್ರ ಮೋದಿ ಪ್ರಧಾನಿಯಾಗಿ ಮತ್ತು ಅಮಿತ್ ಷಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ದೆಹಲಿಗೆ ಬಂದ ನಂತರ ಗುಜರಾತ್​ನಲ್ಲಿ ಇಬ್ಬರು ಮುಖ್ಯಮಂತ್ರಿಗಳ ಬದಲಾವಣೆಯಾಯಿತು. ಪಟೇಲರ ಮೀಸಲಾತಿ ಕೂಗಿನ ಜತೆಗೆ ಆನಂದಿಬೆನ್ ಪಟೇಲ್​ರನ್ನು ಸಿಎಂ ಗಾದಿಯಿಂದ ಕೆಳಗಿಳಿಸಿದ್ದು ಪಟೇಲರ ಆಕ್ರೋಶ ದುಪ್ಪಟ್ಟುಗೊಳಿಸಿತ್ತು. ಗುಜರಾತ್​ನಲ್ಲಿ ಮೋದಿ ವಿರೋಧಿಗಳೆಲ್ಲರೂ ಒಗ್ಗೂಡಿ ಸೋಲಿಸಲು ಪಣತೊಟ್ಟರೂ, ಅಂತಿಮವಾಗಿ ಬಿಜೆಪಿ ಸರಳ ಬಹುಮತ ಸಾಧಿಸಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್​ನದ್ದು ಈ ಬಾರಿ ಉತ್ತಮ ನಿರ್ವಹಣೆ. ರಾಹುಲ್ ಗಾಂಧಿ ನಾಯಕತ್ವಕ್ಕೆ ಹೊಸ ಶಕ್ತಿ ತುಂಬುವ ಮತ್ತು ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸುವ ಫಲಿತಾಂಶವಿದು. ಒಂದುವೇಳೆ ಕಾಂಗ್ರೆಸ್​ಗೆ ಇಲ್ಲಿ ಪ್ರಬಲ ರಾಜ್ಯ ನಾಯಕತ್ವವಿದ್ದಿದ್ದರೆ ಗೆಲ್ಲುವ ಸಾಧ್ಯತೆಗಳಿದ್ದವು. ಇದಲ್ಲದೆ ಕಾಂಗ್ರೆಸ್ ತೊರೆದ ಶಂಕರ್​ಸಿಂಗ್ ವಾಘೕಲಾ ತಮ್ಮೊಂದಿಗೆ 11 ಶಾಸಕರನ್ನು ಕರೆದುಕೊಂಡು ಬಂದದ್ದು ಕೂಡ ಬಿಜೆಪಿಗೆ ವರದಾನವಾಯಿತು. 22 ವರ್ಷಗಳಲ್ಲಿ ಬಿಜೆಪಿ ಎಷ್ಟೇ ಅಭಿವೃದ್ಧಿ ಕಾರ್ಯ ಕೈಗೊಂಡರೂ ಗುಜರಾತ್​ನ ಗ್ರಾಮೀಣ ಭಾಗದ ಜನರು ಕಾಂಗ್ರೆಸ್​ನ ಜಾತಿ ಸಮೀಕರಣಕ್ಕೆ ತಲೆಬಾಗಿರುವುದರಿಂದ ಮುಂದಿನ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಅಭಿವೃದ್ಧಿಗಿಂತ ಹೆಚ್ಚು ಜಾತಿ ಲೆಕ್ಕಾಚಾರಗಳೇ ವಿಜೃಂಭಿಸುವ ಸುಳಿವನ್ನು ಈ ಫಲಿತಾಂಶ ನೀಡಿದೆ.

ಸೌರಾಷ್ಟ್ರದಲ್ಲಿ ಕೈ ನೆಗೆತ

ಪಾಟಿದಾರ ಮತ್ತು ಹಿಂದುಳಿದ ವರ್ಗಗಳ ಮತಗಳು ಹೆಚ್ಚಿರುವ ಸೌರಾಷ್ಟ್ರದಲ್ಲಿ ಬಿಜೆಪಿ ಹಿನ್ನಡೆಯನ್ನು ಮೊದಲೇ ನಿರೀಕ್ಷಿಸಲಾಗಿತ್ತು. 2012ರಲ್ಲಿ ಸೌರಾಷ್ಟ್ರ ಮತ್ತು ಕಛ್​ನ 54 ಸೀಟುಗಳಲ್ಲಿ 35ನ್ನು ಬಿಜೆಪಿ ಗೆದ್ದಿತ್ತು. ಆದರೆ ಈ ಬಾರಿ ಕಾಂಗ್ರೆಸ್ 30 ಸೀಟನ್ನು ಗೆದ್ದಿದ್ದರೆ ಬಿಜೆಪಿ 23ರಲ್ಲಿ ಮಾತ್ರ ವಿಜಯಿಯಾಗಿದೆ. ಇತರರ ಸಂಖ್ಯೆ 3ರಿಂದ 1ಕ್ಕೆ ಇಳಿದಿದೆ. ಸೌರಾಷ್ಟ್ರ ವ್ಯಾಪ್ತಿಗೆ ಬರುವ ರಾಜ್​ಕೋಟ್​ನಲ್ಲಿ ಬಿಜೆಪಿ ಉತ್ತಮ ನಿರ್ವಹಣೆ ತೋರಿದ್ದು 8ರಲ್ಲಿ 6 ಸೀಟನ್ನು ತನ್ನದಾಗಿಸಿಕೊಂಡಿದೆ. ಆದರೆ ಸುರೇಂದ್ರ ನಗರದ 5ರಲ್ಲಿ ಬಿಜೆಪಿ 3 ಸೀಟನ್ನು ಕಳೆದುಕೊಂಡಿದ್ದು ಬಿಜೆಪಿಗಾದ ದೊಡ್ಡ ಹೊಡೆತ. ಸುರೇಂದ್ರ ನಗರದ ಕೆಲಭಾಗಗಳಿಗೆ ಸರ್ದಾರ್ ಸರೋವರ ಜಲಾಶಯದ ನೀರನ್ನು ಪೂರೈಸುವಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡರೂ, ಪಾಟಿದಾರರ ಮತಗಳು ಕಾಂಗ್ರೆಸ್ ಕಡೆ ವಾಲಿದವು. ಉಳಿದಂತೆ ದಕ್ಷಿಣ ಗುಜರಾತ್​ನಲ್ಲಿ ಬಿಜೆಪಿ 25, ಕಾಂಗ್ರೆಸ್ 10, ಉತ್ತರ ಗುಜರಾತ್​ನಲ್ಲಿ ಬಿಜೆಪಿ 29, ಕಾಂಗ್ರೆಸ್ 24, ಮಧ್ಯ ಗುಜರಾತ್​ನಲ್ಲಿ ಬಿಜೆಪಿ 22, ಕಾಂಗ್ರೆಸ್ 16 ಸ್ಥಾನಗಳನ್ನು ಗೆದ್ದುಕೊಂಡಿವೆ. ಉತ್ತರ ಗುಜರಾತ್​ನಲ್ಲಿ ಕಳೆದ ಬಾರಿ 32 ಸೀಟು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 24ಕ್ಕೆ ಕುಸಿದಿದೆ.

ಬಿಜೆಪಿಯನ್ನು ಗೆಲ್ಲಿಸಿದ್ದು ನಗರಗಳು

ಗುಜರಾತ್ ಗ್ರಾಮೀಣ ಮತದಾರರು ಬಿಜೆಪಿ ಮೇಲೆ ಅಸಮಾಧಾನಗೊಂಡಿದ್ದು ಈ ಚುನಾವಣೆಯಲ್ಲಿ ಸಾಬೀತಾಗಿದೆ. ‘ನಾವು ಅಭಿವೃದ್ಧಿಯ ಭಾಗವಾಗಿಲ್ಲ’ ಎಂಬ ಬಿಜೆಪಿ ಮೇಲಿನ ಅಸಮಾಧಾನ ಮತಗಳು ಕಾಂಗ್ರೆಸ್ ಪರ ವಾಲುವಂತೆ ಮಾಡಿದೆ. ಆದರೆ ನಗರಗಳಲ್ಲಿ ಹೆಚ್ಚು ಕ್ಷೇತ್ರಗಳನ್ನು ಗೆದ್ದುಕೊಂಡಿದ್ದರಿಂದ ಬಿಜೆಪಿ ಮ್ಯಾಜಿಕ್ ನಂಬರ್ (92) ದಾಟುವಂತಾಯಿತು. ಅಹ್ಮದಾಬಾದ್​ನ 21ರಲ್ಲಿ 15, ವಡೋದರದ (ಬರೋಡ) 10ರಲ್ಲಿ 9, ಸೂರತ್​ನ 16ರಲ್ಲಿ 15 ಸೀಟುಗಳು ಬಿಜೆಪಿಯನ್ನು ಅಪಾಯದಿಂದ ಪಾರು ಮಾಡಿವೆ. 2012ರಲ್ಲಿ ವಡೋದರದಲ್ಲಿ 10ಕ್ಕೆ 10 ಸೀಟುಗಳನ್ನು ಗೆದ್ದಿದ್ದ ಬಿಜೆಪಿಗೆ ಈ ಬಾರಿ 1 ಕ್ಷೇತ್ರದಲ್ಲದಷ್ಟೇ ಹಿನ್ನಡೆಯಾಗಿದೆ.

ಪಾಟಿದಾರರ ಬೆಂಬಲ

ಹಾರ್ದಿಕ್ ಪಟೇಲ್ ಕಾಂಗ್ರೆಸ್ ಜತೆ ಸೇರಿಕೊಂಡರೂ ಪಟೇಲರ ಜನಸಂಖ್ಯೆ ಹೆಚ್ಚಿರುವ 25 ಕ್ಷೇತ್ರಗಳಲ್ಲಿ ಬಿಜೆಪಿ 13ನ್ನು ಗೆದ್ದುಕೊಂಡಿದೆ. ಕಳೆದ ಬಾರಿ 14 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಕಳೆದುಕೊಂಡಿದ್ದು 1 ಸೀಟು ಮಾತ್ರ. ಕಾಂಗ್ರೆಸ್ ಇಲ್ಲಿ ತನ್ನ ಸೀಟುಗಳನ್ನು 10ರಿಂದ 12ಕ್ಕೇರಿಸಿಕೊಂಡಿದೆ. ಇಲ್ಲಿ ಗ್ರಾಮೀಣ ಪಟೇಲ್ ಮತದಾರ ಕಾಂಗ್ರೆಸ್ ಬೆಂಬಲಿಸಿದರೂ, ಅದು ಸೀಟುಗಳಾಗಿ ಪರಿವರ್ತನೆಯಾದಂತಿಲ್ಲ. ನಗರ ಪ್ರದೇಶದ ಪಟೇಲರೆಲ್ಲರೂ ಬಿಜೆಪಿಗೆ ಮತ ಹಾಕಿದ್ದರಿಂದ ಹಾರ್ದಿಕ್ ಪಟೇಲ್ ಆಂದೋಲನ ಬಿಜೆಪಿಯನ್ನು ವಿಪರೀತವಾಗಿ ಕಾಡಿದಂತಿಲ್ಲ.

ಮೋದಿ ತವರಲ್ಲೇ ಸೋಲು

ಪ್ರಧಾನಿ ಮೋದಿ ಹುಟ್ಟೂರು ವಡ್​ನಗರವಿರುವ, ಮೆಹಸಾನ ಜಿಲ್ಲೆಯ ಉಂಝಾ ಕ್ಷೇತ್ರ 22 ವರ್ಷಗಳ ಬಳಿಕ ಕಾಂಗ್ರೆಸ್ ತೆಕ್ಕೆಗೆ ಜಾರಿದೆ. ಮೋದಿ ಪ್ರಭಾವವಿರುವ ವಡ್​ನಗರದಲ್ಲಿ 30 ವರ್ಷಗಳ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ರ‍್ಯಾಲಿ ನಡೆಸಲಾಗಿತ್ತು. ಇದಕ್ಕೆ ಭಾರಿ ಜನಬೆಂಬಲವೂ ಸಿಕ್ಕಿತ್ತು. 1995ರಿಂದ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಲಲ್ಲೂದಾಸ್ ಪಟೇಲ್ ಈ ಬಾರಿ ಕಾಂಗ್ರೆಸಿನ ದ್ವಾರಕಾದಾಸ್ ಪಟೇಲ್ ಎದುರು ಸೋತಿದ್ದಾರೆ. ಪಾಟಿದಾರ ಆಂದೋಲನಕ್ಕೆ ಸಾಕ್ಷಿಯಾದ ಪ್ರಮುಖ ಜಿಲ್ಲೆಗಳಲ್ಲಿ ಮೆಹಸಾನವೂ ಒಂದು.

ಗೋಧ್ರಾದಲ್ಲಿ ಬಿಜೆಪಿ

ದೇಶದ ಸೂಕ್ಷ್ಮ ವಿಧಾನಸಭೆ ಗೋಧ್ರಾದಲ್ಲಿ ಬಿಜೆಪಿ 12 ವರ್ಷಗಳ ಬಳಿಕ ಗೆಲುವಿನ ನಗೆ ಬೀರಿದೆ. ಕಳೆದ ಬಾರಿ ಕಾಂಗ್ರೆಸ್​ನಿಂದ ಗೆದ್ದಿದ ಸಿ.ಕೆ. ರಾಹುಲ್ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ರಾಹುಲ್​ಗೆ 75,149 ಮತ ಬಂದರೆ, ಕಾಂಗ್ರೆಸ್​ನ ಪರ್ವರ್ ರಾಜೇಂದ್ರ ಸಿನ್ಹಾ 74,891 ಮತಗಳು ಪಡೆದಿದ್ದಾರೆ. ರಾಹುಲ್ ಕೇವಲ 258 ಮತಗಳ ಅಂತರದಲ್ಲಿ ಗೆಲುವಿನ ದಡ ಸೇರಿದ್ದಾರೆ!

ಇತರರ ಮತ ಕಾಂಗ್ರೆಸ್ ಕಡೆ

ಗುಜರಾತ್​ನ ಪ್ರತಿ ಚುನಾವಣೆಯಲ್ಲೂ ಶೇ.12ರಿಂದ 15 ಪ್ರತಿಶತ ಮತಗಳನ್ನು ಇತರರು(ಪಕ್ಷೇತರರು) ಬಾಚಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಕೇವಲ 3 ಸೀಟುಗಳನ್ನಷ್ಟೇ ಇತರರು ಗೆದ್ದುಕೊಂಡಿದ್ದು, ಶೇ.5ರಷ್ಟು ಮತಗಳು ಅವರ ಪಾಲಾಗಿವೆ. ಅಂದರೆ, ಉಳಿದ ಶೇ.9ರಿಂದ 10ರಷ್ಟು ಮತಗಳು ಕಾಂಗ್ರೆಸ್ ಕಡೆ ಶಿಫ್ಟ್ ಆಗಿರುವುದು ಕೂಡ ಸೀಟು ಹೆಚ್ಚಲು ಕಾರಣವಾಯಿತು

ಆಡ್ವಾಣಿ ಗೈರು

ಗಾಂಧಿನಗರದ 5 ಸೀಟುಗಳಲ್ಲಿ 3 ಕಾಂಗ್ರೆಸ್ ಪಾಲಾಗಿದೆ. ಕಳೆದ ಬಾರಿಯೂ ಕಾಂಗ್ರೆಸ್ ಇಲ್ಲಿ 3 ಸ್ಥಾನಗಳನ್ನು ಗೆದ್ದು ಮುನ್ನಡೆ ಕಾಯ್ದುಕೊಂಡಿತ್ತು. ಗಾಂಧಿನಗರದಿಂದ ಲೋಕಸಭಾ ಸದಸ್ಯರಾಗಿರುವ ಲಾಲಕೃಷ್ಣ ಆಡ್ವಾಣಿ ಪ್ರಚಾರಕ್ಕೆ ಬರಬೇಕಿತ್ತು ಎಂಬುದು ಅನೇಕ ಬಿಜೆಪಿ ಕಾರ್ಯಕರ್ತರ ಆಶಯವಾಗಿತ್ತು.

ಗೆದ್ದ ಜಿಗ್ನೇಶ್ ಮೆವಾನಿ

ಬನಸ್ಕಾಂತ ಜಿಲ್ಲೆಯ ವಗ್ದಾಮ್ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸಿದ್ದ ದಲಿತ ನಾಯಕ ಜಿಗ್ನೇಶ್ ಮೆವಾನಿ ಗೆದ್ದಿರುವುದು ಬಿಜೆಪಿ ಪಾಲಿಗೆ ಒಳ್ಳೆ ಬೆಳವಣಿಗೆಯಲ್ಲ. ಆದರೆ ಮೆವಾನಿ ಗೆಲುವಿನಿಂದ ಎಡಪಕ್ಷಗಳ ಉತ್ಸಾಹ ಹಿಗ್ಗಲಿದೆ. ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ವಗ್ದಾಮ್ ಕ್ಷೇತ್ರದಲ್ಲಿ ಮುಸ್ಲಿಂ ಮತ್ತು ಪಾಟಿದಾರರು ಒಗ್ಗೂಡಿ ಮೆವಾನಿಯನ್ನು ಗೆಲ್ಲಿಸಿದ್ದಾರೆ.

ಮೋದಿ-ರಾಹುಲ್ ಪ್ರಚಾರದ ಆರ್ಭಟ

# ಬಿಜೆಪಿ ಮತ್ತು ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಚುನಾವಣೆಯಾಗಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುಜರಾತಿನಲ್ಲಿ ಬಿರುಸಿನ ಪ್ರಚಾರ ನಡೆಸಿದರು. ನರೇಂದ್ರ ಮೋದಿ ಒಟ್ಟು 36 ಚುನಾವಣಾ ರ್ಯಾಲಿಗಳಲ್ಲಿ ಪಾಲ್ಗೊಂಡರೆ, ಐದು ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದರು. ಈ ಮೂಲಕ 15 ದಿನಗಳ ಅವಿರತ ಪ್ರಚಾರದಲ್ಲಿ 33 ಜಿಲ್ಲೆಗಳನ್ನು ತಲುಪಿದರು.

# ರಾಹುಲ್ ಗಾಂಧಿ 57 ರ್ಯಾಲಿಗಳಲ್ಲಿ ಪಾಲ್ಗೊಂಡರಲ್ಲದೆ, 27 ಮಂದಿರಗಳಿಗೆ ಭೇಟಿ ನೀಡಿದರು. ಚುನಾವಣೆ ಪ್ರಚಾರಕ್ಕಾಗಿ ರಾಹುಲ್ 8 ಬಾರಿ, ಮೋದಿ 7 ಬಾರಿ ಗುಜರಾತ್​ಗೆ ಆಗಮಿಸಿದರು.

# ಚುನಾವಣೆ ಘೋಷಣೆಯಾದ ಮೊದಲ 60 ದಿನಗಳಲ್ಲಿ ನಾಲ್ಕು ಮಹತ್ವದ ವಿಷಯಗಳು ಪ್ರತಿಧ್ವನಿಸಿದವು-ಜಿಎಸ್​ಟಿ, ನೋಟು ಅಮಾನ್ಯೀಕರಣ, ಗುಜರಾತ್​ನಲ್ಲಿ ಅಭಿವೃದ್ಧಿ ಮತ್ತು ಮೀಸಲಾತಿ. ಕೊನೆಯ ದಿನಗಳಲ್ಲಿ 4 ವಿಷಯಗಳು ಪ್ರಮುಖವಾಗಿ ಪ್ರಸ್ತಾಪಿಸಲ್ಪಟ್ಟವು-ಹಿಂದುತ್ವ, ಮಂದಿರ, ಗುಜರಾತ್ ಅಸ್ಮಿತೆ, ಪಾಕಿಸ್ತಾನ.

 

ಪಕ್ಷಗಳಿಗೆ ಗುಜರಾತಿಗರ ಪಾಠ

ಬಿಜೆಪಿ

# ಜಿಎಸ್​ಟಿ ಅಡ್ಡಪರಿಣಾಮಗಳ ಸುಧಾರಣೆ ತ್ವರಿತ ಗತಿ ಪಡೆಯಬೇಕು.

# ಗುಜರಾತ್ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಬೇಕು.

# ಬೆಳೆಗೆ ಸೂಕ್ತ ಬೆಲೆ ಸಿಗದ ಮಾರುಕಟ್ಟೆ ಪ್ರಭಾವದಿಂದ ರೈತರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು.

ಕಾಂಗ್ರೆಸ್​

# ಗ್ರಾಮೀಣ ಮತದಾರರ ಸೆಳೆಯುವ ಯೋಜನೆಗಳಿಗೆ ಹೆಚ್ಚು ಒತ್ತು.

# ಜಾತಿ ಮತಗಳ ಓಲೈಕೆ ನಿರ್ಲಕ್ಷಿಸಿ, ಮತದಾರ ಸ್ನೇಹಿ ಪಕ್ಷಗಳೊಂದಿಗೆ ಮೈತ್ರಿ.

# ಮುಂಚೂಣಿ ರಾಜ್ಯ ನಾಯಕರ ಪಡೆ ನಿರ್ವಣ, ಬೂತ್​ವುಟ್ಟದಿಂದ ವಿಶ್ವಾಸಾರ್ಹ ಮುಖಗಳೊಂದಿಗೆ ಸಂಘಟನೆ ಅಗತ್ಯ.

# ಸಾಮಾಜಿಕ ಜಾಲತಾಣಗಳಿಂದ ಆಚೆಗಿನ ಜನರೊಂದಿಗೆ ನಿಕಟ ಸಂಪರ್ಕ, ಸಮಸ್ಯೆಗೆ ಸ್ಪಂದನೆ.

 

ಆತ್ಮೀಯ ಬಿಜೆಪಿ, ಗುಜರಾತ್​ನಲ್ಲಿನ ದುರ್ಬಲ ಪ್ರದರ್ಶನಕ್ಕೆ 2019ರೊಳಗೆ ಆಧಾರ್ ಜೋಡಣೆ ಮಾಡುವುದನ್ನು ಮರೆಯಬೇಡಿ.

| ಪರೇಶ್ ರಾವಲ್ , @Babu_Bhaiyaa 

 

# ಅಮಿತ್ ಷಾ ಟಾರ್ಗೆಟ್ – 150

# ಶೇ.28 ಜಿಎಸ್​ಟಿ – 51

# ಗುಜರಾತಿಗರು ಕೊಟ್ಟಿದ್ದು – 99

| ಸೈತಾನ್ ಖೋಪ್ಡಿ, @shaitaankhopdi 

 

ಭಾರತದಲ್ಲಿ ಪಂದ್ಯ ಗೆಲ್ಲುವವರು

3. ಧೋನಿ 2. ಕೊಹ್ಲಿ 1. ವಿಕಾಸ್

| ಡಿಕೆ @itsdhruvism

 

ನಮ್ಮ ಆಂತರಿಕ ಸಮೀಕ್ಷೆಯಂತೆ ಆಮ್ ಆದ್ಮಿ ಪಕ್ಷ ಗುಜರಾತ್​ನಲ್ಲಿ 200 ಸೀಟುಗಳಲ್ಲಿ ಮುನ್ನಡೆಯಲ್ಲಿದೆ. ನೈತಿಕ ಹೊಣೆ ಹೊತ್ತು ಪ್ರಧಾನಿ ಮೋದಿ ರಾಜೀನಾಮೆ ಕೊಡಬೇಕು.

| ಕೇಜ್ರೀ @TroluKejri

 

2017ರಲ್ಲಿ ಬಿಜೆಪಿ ಪಾಲಾದ ರಾಜ್ಯಗಳು

# ಗೋವಾ # ಉತ್ತರ ಪ್ರದೇಶ # ಹಿಮಾಚಲ ಪ್ರದೇಶ # ಗುಜರಾತ್

2018ರಲ್ಲಿ ಬಿಜೆಪಿ ಎದುರಿನ ಸವಾಲು

# ಕರ್ನಾಟಕ #ಮಿಜೋರಾಂ # ಮೇಘಾಲಯ # ನಾಗಾಲ್ಯಾಂಡ್ # ತ್ರಿಪುರಾ # ಮಧ್ಯಪ್ರದೇಶ # ಛತ್ತೀಸ್​ಗಢ # ರಾಜಸ್ಥಾನ

 

ಸೋಲಿನಲ್ಲೂ ಸಮಾಧಾನ ಕಂಡ ಕಾಂಗ್ರೆಸ್

22 ವರ್ಷಗಳ ಆಡಳಿತ ವಿರೋಧಿ ಅಲೆಯ ಲಾಭ ಪಡೆಯುವಲ್ಲಿ ರಾಹುಲ್ ಎಡವಿರುವುದು ಗುಜರಾತ್ ಜನಾದೇಶದಿಂದ ಸ್ಪಷ್ಟವಾಗಿ ಕಾಣಿಸುತ್ತಿದ್ದರೂ, ಸೀಟುಗಳ ಲೆಕ್ಕಾಚಾರದಲ್ಲಿ ಕಾಂಗ್ರೆಸ್​ಗೆ ಲಾಭವಾಗಿದ್ದು ಮಾತ್ರ ಸಮಾಧಾನದ ಸಂಗತಿ. ಅಸಲಿಗೆ ಕಾಂಗ್ರೆಸ್ ಸ್ವಸಾಮರ್ಥ್ಯದ ಮೇಲೆ ಚುನಾವಣೆ ಎದುರಿಸಲೇ ಇಲ್ಲ. ಪಾಟಿದಾರ್ ನಾಯಕ ಹಾರ್ದಿಕ ಪಟೇಲ್, ಒಬಿಸಿ ಮಂಚ್ ನಾಯಕ ಅಲ್ಪೇಶ್ ಠಾಕೂರ್ ಮತ್ತು ದಲಿತ ಯುವ ನಾಯಕ ಜಿಗ್ನೇಶ್ ಮೆವಾನಿ ಜನಪ್ರಿಯತೆ ಕೈಗೆ ತನ್ನ ಹಣೆಬರಹವನ್ನು ಚುನಾವಣೆ ಆರಂಭದಲ್ಲಿಯೇ ವಹಿಸಿಬಿಟ್ಟಿತ್ತು ಕಾಂಗ್ರೆಸ್. ಉಳಿದಂತೆ ನವಸರ್ಜನ್ ಯಾತ್ರೆ ಹೆಸರಲ್ಲಿ ದಕ್ಷಿಣ, ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ಪ್ರಾಂತ್ಯಗಳಲ್ಲಿ ಹಿಂದು ದೇವಾಲಯಗಳಿಗೆ ಭೇಟಿ ನೀಡಿದ್ದು ಬಿಟ್ಟರೆ ಸಿಎಂ ಅಭ್ಯರ್ಥಿ ಘೋಷಣೆ ಗೋಜಿಗೆ ಹೋಗಲಿಲ್ಲ. ಒಂದುವೇಳೆ ಜನಾದೇಶದಲ್ಲಿ ಕಾಂಗ್ರೆಸ್ ಒಕ್ಕೂಟಕ್ಕೆ ಬಹುಮತ ಸಿಕ್ಕಿದ್ದರೆ ಸಿಎಂ ಅಭ್ಯರ್ಥಿ ಹುಡುಕಾಟದಲ್ಲಿ ಅಧ್ಯಕ್ಷ ರಾಹುಲ್ ಗಾಂಧಿ ಹೈರಾಣ ಆಗಿಹೋಗುತ್ತಿದ್ದರು ಎಂದು ಗುಜರಾತ್ ಮತದಾರ ಮುಂಚೆಯೇ ತಿಳಿದಿದ್ದ ಎಂಬುದು ಖಾತರಿಯಾಗಿದೆ. ಜಾತಿ ಸಮೀಕರಣ, ಮೋದಿ ವಿರುದ್ಧ ಟೀಕೆ, ರಾಜ್ಯ ಸರ್ಕಾರದ ನೀತಿಗಳನ್ನು ಖಂಡಿಸುವುದನ್ನೇ ಪ್ರಬಲ ಅಸ್ತ್ರವಾಗಿಸಿದ ಕಾಂಗ್ರೆಸ್​ಗೆ 2012ಕ್ಕೆ ಹೋಲಿಸಿದರೆ 19 ಸೀಟುಗಳು ಹೆಚ್ಚಿಗೆ ಸಿಕ್ಕಿವೆಯಾದರೂ, ಸರಳ ಬಹುಮತ ತಲುಪಲು ಸಾಧ್ಯವಾಗಿಲ್ಲ. ಮೂವರು ಜಾತಿ ನಾಯಕರ ಓಲೈಕೆ ಮಂತ್ರ ಬಹುಮತ ತಂದುಕೊಡುತ್ತದೆ ಎಂಬ ರಾಹುಲ್ ರಣತಂತ್ರ ವಿಫಲವಾಗಿದೆ.

ಮತಗಳಿಕೆ ಪ್ರಮಾಣದಲ್ಲಿ ಏರಿಕೆ

2007ರಿಂದಲೂ ಮತಗಳಿಕೆ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವ ಕಾಂಗ್ರೆಸ್ ಪರವಾಗಿ ಗುಜರಾತ್ ಮತದಾರ ಬಯಸುತ್ತಿರುವುದೇನು ಎಂಬುನ್ನು ಅರಿಯುವಲ್ಲಿ ಅಧ್ಯಕ್ಷ ರಾಹುಲ್ ಗಾಂಧಿ ಎಡವಿರುವುದು ಸ್ಪಷ್ಟವಾಗಿದೆ. 2007ರಲ್ಲಿ ಶೇ. 38ರಷ್ಟಿದ್ದ ಕಾಂಗ್ರೆಸ್ ಮತಗಳಿಕೆ ಪ್ರಮಾಣ, 2012ಕ್ಕೆ ಶೇ. 0.93 ಚೇತರಿಕೆ ಕಂಡಿತ್ತು. ಪ್ರಸ್ತುತ 80 ಸೀಟುಗಳ ಗಳಿಕೆಯಿಂದ ಮತಗಳಿಕೆ ಶೇ. 42ಕ್ಕೆ ತಲುಪಿದೆ.

ವೈಫಲ್ಯಕ್ಕೆ 3 ಕಾರಣಗಳು

# ಗುಜರಾತ್​ನಲ್ಲಿ ಕಾಂಗ್ರೆಸ್​ಗೆ ರಾಜ್ಯ ನಾಯಕತ್ವ ಇಲ್ಲದಿರುವುದು, ಪ್ರಭಾವಿ ಮುಖಂಡರು ಇಲ್ಲದಿರುವುದು.

# ಚುನಾವಣೆ ಹೊಸ್ತಿಲಲ್ಲಿ ಜಾತಿ ನಾಯಕರ ಬೆಂಬಲ, ಒಳಮೈತ್ರಿಗೆ ಒತ್ತುಕೊಟ್ಟಿದ್ದು. ಮೂರು ದಶಕಗಳ ಠಾಕೂರ್ ಮತ್ತು ಪಟೇಲ್ ನಡುವಿನ ಆಂತರಿಕ ಕದನ ಅರಿಯದೆ ಈ ಇಬ್ಬರನ್ನು ನೆಚ್ಚಿಕೂತಿದ್ದು.

# ಮೋದಿ ತೆಗಳುವಿಕೆ ಅಥವಾ ಜಾತಿ ಓಲೈಕೆ ಮತದಾರನ ಸಮಸ್ಯೆಗೆ ಪರಿಹಾರವಲ್ಲ ಎಂಬುದನ್ನು ಅರಿಯುವಲ್ಲಿ ಎಡವಿದ್ದು. ಕಾಂಗ್ರೆಸ್ ನಿಲುವು ಕೊನೆವರೆಗೂ ಮತದಾರನಿಗೆ ಅಸ್ಪಷ್ಟವಾಗಿರಿಸಿದ್ದು.

 

ಭಾವನೆಗಳ ತಂತಿ ಮೀಂಟಬೇಕು!

ಚುನಾವಣೆ ಸಂದರ್ಭದಲ್ಲಿ ಮತದಾರರ ಮನಗೆಲ್ಲುವುದಕ್ಕೆ ಸರ್ಕಾರದ ಸಾಧನೆಗಳನ್ನಷ್ಟೇ ಪ್ರಚಾರಕ್ಕೆ ಬಳಸಿದರೆ ಸಾಲದು. ಭಾವನಾತ್ಮಕವಾಗಿ ಅವರ ಮನಸ್ಸನ್ನು ತಟ್ಟಬೇಕಾದ ಕಾರಣ ‘ಭಾವನೆಗಳ ತಂತಿ’ ಮೀಟಬೇಕು ಎಂಬುದನ್ನು ನರೇಂದ್ರ ಮೋದಿ ಚೆನ್ನಾಗಿ ಅರ್ಥಮಾಡಿಕೊಂಡು ಅಳವಡಿಸಿಕೊಂಡಿದ್ದಾರೆ. ರಾಮ ಮಂದಿರ ವಿಚಾರವಾಗಿ ಕಪಿಲ್ ಸಿಬಲ್ ಕೋರ್ಟ್​ನಲ್ಲಿ ನೀಡಿದ ಹೇಳಿಕೆ, ಮಣಿಶಂಕರ್ ಅಯ್ಯರ್ ಅವರ ‘ನೀಚ್ ಆದ್ಮಿ’ ಹೇಳಿಕೆಗಳನ್ನು ಗುಜರಾತಿಗಳ ‘ಭಾವನೆಗಳ ತಂತಿ’ ಮೀಂಟುವುದಕ್ಕೆ ಮೋದಿ ಬಳಸಿಕೊಂಡರು.

ಸರ್ಕಾರದ ಮುಂದಿನ ಸವಾಲುಗಳು

ಪ್ರಯಾಸದ ಗೆಲುವಿನ ಬಳಿಕ ಬಿಜೆಪಿ ಗುಜರಾತ್​ನಲ್ಲಿ ಉತ್ತಮ ಆಡಳಿತ ನಿರ್ವಹಣೆಯ ದಾಖಲೆಯನ್ನು ಇನ್ನಷ್ಟು ಉತ್ತಮಗೊಳಿಸಬೇಕಾದ ಸವಾಲನ್ನು ಎದುರಿಸುತ್ತಿದೆ. ನಿರುದ್ಯೋಗ ಸಮಸ್ಯೆ ಮತ್ತು ಗ್ರಾಮೀಣ ಜನರ ಸಂಕಷ್ಟಕ್ಕೆ ಪರಿಹಾರ ಒದಗಿಸಬೇಕಾಗಿದೆ. ಗ್ರಾಮೀಣ ಮತ್ತು ಅರೆ ಪಟ್ಟಣ ಪ್ರದೇಶದ ಯುವಜನರು ಉದ್ಯೋಗವಕಾಶಗಳ ಕೊರತೆ ಎದುರಿಸುತ್ತಿದ್ದಾರೆ. ಅವರೆಲ್ಲರೂ ಇಂದಿಗೂ ಸರ್ಕಾರಿ ಉದ್ಯೋಗವನ್ನೇ ಬಯಸುತ್ತಿದ್ದು, ಮೀಸಲಾತಿ ಕೋರುತ್ತಿದ್ದಾರೆ. ಒಂದೊಮ್ಮೆ ಇದು ಸಾಧ್ಯವಾಗದೇ ಹೋದರೆ, ಖಾಸಗಿ ವಲಯದಲ್ಲಿ ಉದ್ಯೋಗ ಸ್ಥಿರತೆ ಖಾತ್ರಿಪಡಿಸುವಂತೆ ಮನವಿ ಮಾಡುತ್ತಿದ್ದಾರೆ. ಗುಜರಾತ್​ನಲ್ಲಿ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಉತ್ತೇಜನ ಸಿಗುತ್ತಿದೆಯಾದರೂ, ಗ್ರಾಮೀಣ ಯುವಜನರನ್ನು ಔದ್ಯೋಗಿಕ ಮುಖ್ಯವಾಹಿನಿಗೆ ಸೇರ್ಪಡೆಗೊಳಿಸುವಲ್ಲಿ ಹಿನ್ನಡೆಯಾಗಿದೆ. ಈ ವಿಚಾರವಾಗಿ ಸ್ಪಷ್ಟನೀತಿ ರೂಪಿಸುವ ಸವಾಲು ಸರ್ಕಾರದ ಎದುರಿದೆ.

 ಸಿಕ್ಕಾಪಟ್ಟೆ ಸದ್ದು ಮಾಡಿದ ವಿವಾದಗಳು

ಹಾರ್ದಿಕ್ ಸೆಕ್ಸ್ ಸಿಡಿ

ಹೋಟೆಲ್ ಕೋಣೆಯಲ್ಲಿ ಮಹಿಳೆಯೊಂದಿಗೆ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಇದ್ದ ವಿಡಿಯೋವೊಂದನ್ನು ಸ್ಥಳೀಯ ಟಿವಿ ಚಾನಲ್ ಪ್ರಸಾರಮಾಡಿ ವಿವಾದದ ಕಿಡಿ ಹೊತ್ತಿಸಿತು. ‘ಮಾರ್ಪಡಿಸಲಾದ ವಿಡಿಯೋಗಳನ್ನು ಹರಿಬಿಟ್ಟು ಬಿಜೆಪಿ ಮಾನಹಾನಿಗೆ ಯತ್ನಿಸುತ್ತಿದೆ. ಅನೈತಿಕ ರಾಜಕಾರಣದಿಂದ ಅಧಿಕಾರ ಹಿಡಿಯಲು ಯತ್ನಿಸಿದೆ’ ಎಂದು ಹಾರ್ದಿಕ್ ಅಸಮಾಧಾನ ವ್ಯಕ್ತಪಡಿಸಿದ್ದರು.

ಹಿಂದುಯೇತರನಾದ ರಾಹುಲ್

ರಾಹುಲ್ ಗಾಂಧಿ ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಸಂದರ್ಶಕರ ಪುಸ್ತಕದಲ್ಲಿ ಹಿಂದುಯೇತರರ ಸಾಲಿನಲ್ಲಿ ಸಹಿ ಮಾಡಿ ವಿವಾದ ಹುಟ್ಟುಹಾಕಿದ್ದರು. ರಾಹುಲ್ ಧಾರ್ವಿುಕ ಅಸ್ಮಿತೆಯನ್ನು ಬಿಜೆಪಿ ಪ್ರಶ್ನಿಸಿತು. ಈ ವಿವಾದದಿಂದ ಭಾರಿ ಹಿನ್ನಡೆ ಉಂಟಾಗುವುದನ್ನು ಅರಿತು- ‘ಕಾಂಗ್ರೆಸ್ ಮಾಧ್ಯಮ ವಕ್ತಾರನಿಂದ ಆದ ಪ್ರಮಾದ’ ಎಂದು ಸಮಜಾಯಿಷಿ ನೀಡಲಾಯಿತು. ಅಲ್ಲದೆ, ಹಿಂದು ಸಂಪ್ರದಾಯ ಪಾಲಿಸುವ ರಾಹುಲ್ ಭಾವಚಿತ್ರಗಳನ್ನು ಬಿಡುಗಡೆ ಮಾಡಲಾಯಿತು.

ಪಾಕಿಸ್ತಾನದ ಕನಸು

ರ್ಯಾಲಿಯೊಂದರಲ್ಲಿ ಮೋದಿ ‘ಪಾಕಿಸ್ತಾನ ಸೇನೆ ಮುಖ್ಯಸ್ಥ ರಫೀಕ್ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಗುಜರಾತ್ ಸಿಎಂ ಆಗುಬೇಕೆಂದು ಬಯಸಿದ್ದರು’ ಎಂದು ಕಿಡಿಕಾರಿದ್ದರು. ಮಣಿಶಂಕರ್ ಅಯ್ಯರ್ ನಿವಾಸದಲ್ಲಿ ಪಾಕ್ ಅಧಿಕಾರಿಗಳು ಔತಣಕೂಟದಲ್ಲಿ ಭಾಗಿಯಾಗಿ ಗುಜರಾತ್ ಚುನಾವಣೆಯಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ವಿವಾದ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿ ಪರಿಣಮಿಸಿತು.

ಜಾತಿ v/s ಅಸ್ಮಿತೆ

ಬಿಜೆಪಿ ಭದ್ರಕೋಟೆ ಗುಜರಾತ್​ನಲ್ಲಿ ಜಾತಿ ಸಮೀಕರಣದಿಂದಷ್ಟೇ ಗೆಲ್ಲಬಹುದು ಎಂದುಕೊಂಡ ಕಾಂಗ್ರೆಸ್, ಪಟೇಲರಿಗೆ ಮೀಸಲಾತಿ ನೀಡುತ್ತೇವೆ ಎಂದು ಹುಲಿ ಮೇಲೆ ಸವಾರಿ ಮಾಡಿತು. ಇದಕ್ಕೆ ಪ್ರತಿಯಾಗಿ ಬಿಜೆಪಿ ಗುಜರಾತ್ ಸ್ವಾಭಿಮಾನದ ಬ್ರಹ್ಮಾಸ್ತ್ರ ಪ್ರಯೋಗಿಸಿತು. ತಮ್ಮನ್ನು ‘ಗುಜರಾತ್ ಅಸ್ಮಿತೆ’ ಎಂದೇ ಸಾರಿದ ನರೇಂದ್ರ ಮೋದಿ, ಭಾವನಾತ್ಮಕವಾಗಿ ಮತದಾರರನ್ನು ಸೆಳೆದರು. ಕಾಂಗ್ರೆಸ್ ಬೆಂಬಲಿಸುವ ಮತದಾರರು ಮತ್ತು ಮುಖ್ಯವಾಗಿ ಮುಸ್ಲಿಮರು ಕೂಡ ಗುಜರಾತ್​ನಲ್ಲಿ ಅಭಿವೃದ್ಧಿಯಾಗಿದೆ ಎಂಬುದನ್ನು ಒಪ್ಪಿಕೊಂಡರೂ ಜನರಲ್ಲಿ ‘ಜಾತಿ ಜಾಗೃತಿ’ ಹೆಚ್ಚಾಗಿದ್ದರಿಂದ ಚುನಾವಣೆ ಹೊತ್ತಲ್ಲಿ ಬಿಜೆಪಿ ಚಿಂತೆಗೊಳಗಾಗಿದ್ದು ಸುಳ್ಳಲ್ಲ.

 ಗೆಲುವಿನ ಪಂಚ ತಂತ್ರ

ನಮೋ ಜನಪ್ರಿಯತೆ

ಪ್ರಧಾನಮಂತ್ರಿಯಾದ ಬಳಿಕವೂ ನರೇಂದ್ರ ಮೋದಿ ಜನಪ್ರಿಯತೆ ಗುಜರಾತ್​ನಲ್ಲಿ ಕಡಿಮೆಯಾಗಿಲ್ಲ. ಗುಜರಾತ್​ನಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದ್ದರೂ ಅದನ್ನು ನಿಭಾಯಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. 36 ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪಕ್ಷವನ್ನು ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ಏರಿಸಿದರು.

ಚತುರ ತಂತ್ರಗಾರಿಕೆ

ಕಾಂಗ್ರೆಸ್ ಪಕ್ಷದ ಲೋಪದೋಷಗಳನ್ನು ಎಲ್ಲೆಲ್ಲಿ ಬಳಸಿಕೊಳ್ಳಬಹುದೋ ಅಲ್ಲೆಲ್ಲ ರಾಜಕೀಯ ತಂತ್ರಗಾರಿಕೆಗಳು ಬಳಸಲ್ಪಟ್ಟಿದ್ದವು. ಅಭ್ಯರ್ಥಿಗಳ ಆಯ್ಕೆಯಲ್ಲೂ ಜಾಗರೂಕತೆ ವಹಿಸಿದ ಬಿಜೆಪಿ ವರಿಷ್ಠರು, ಮೂರನೇ ಒಂದಂಶ ಶಾಸಕರು ವಿಶೇಷವಾಗಿ ಕೆಲಸ ಮಾಡದವರಿಗೆ ಟಿಕೆಟ್ ನಿರಾಕರಿಸಿತು. ಬಿಜೆಪಿನಿಷ್ಠ ಪಟೇಲ್ ಸಮುದಾಯದ ಮತಗಳ ಮೇಲೆ ಈ ಬಾರಿ ಹೆಚ್ಚು ಅವಲಂಬಿಸುವಂತಿಲ್ಲ ಎಂಬುದು ಅರಿವಿಗೆ ಬರುತ್ತಲೇ, ವರಿಷ್ಠರು ಇತರೆ ಹಿಂದುಳಿದ ವರ್ಗಗಳ ಕಡೆಗೆ ಗಮನ ಹರಿಸಿದರು. ಕೊನೆಕೊನೆಗೆ ಅಭಿವೃದ್ಧಿ ವಿಷಯದಿಂದ ಗುಜರಾತ್​ನ ಅಸ್ಮಿತೆ ಮತ್ತು ದೇಶಭಕ್ತಿ ಕಡೆಗೆ ಜನರ ಗಮನ ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಯಿತು.

ಜಿಎಸ್​ಟಿ ಜಾರಿ ನಿರ್ವಹಣೆ

ಜಿಎಸ್​ಟಿ ಜಾರಿಗೊಳಿಸುವಾಗ ಆಗಿರುವ ತೊಂದರೆಗಳಿಂದಾಗಿ ಕೈಗಾರಿಕೆ, ವ್ಯಾಪಾರೋದ್ಯಮ ವಲಯದಲ್ಲಿ ಅಸಮಾಧಾನ ಕಂಡುಬಂದಿತ್ತು. ಹಾಗಾಗಿ, ವ್ಯಾಪಾರೋದ್ಯಮಿಗಳನ್ನು ಓಲೈಸುವ ಕೆಲಸಕ್ಕೆ ಆಡಳಿತ ಪಕ್ಷ ಕಸರತ್ತು ನಡೆಸಿತು. ಕೆಲವು ವಸ್ತುಗಳ ಜಿಎಸ್​ಟಿ ದರವನ್ನು ಕಡಿತಗೊಳಿಸಿತು. ಪರಿಣಾಮ, ಜಿಎಸ್​ಟಿ ವಿರೋಧಿ ಪ್ರತಿಭಟನೆ ಜೋರಾಗಿದ್ದ ಸೂರತ್​ನಲ್ಲೂ ಬಿಜೆಪಿ ಗೆಲುವಿನ ನಗೆ ಬೀರುವುದು ಸಾಧ್ಯವಾಗಿದೆ.

ನೆರವಿನ ಹಸ್ತ

ಪ್ರಧಾನಿ ಮೋದಿಯವರನ್ನು ಟೀಕಿಸುತ್ತ ಮಾಜಿ ಕೇಂದ್ರ ಸಚಿವ ಮಣಿಶಂಕರ ಅಯ್ಯರ್ ನೀಡಿದ ‘ನೀಚ್ ಆದ್ಮಿ’ ಹೇಳಿಕೆ ಬಿಜೆಪಿಗೆ ವರದಾನವಾಯಿತು. ಪ್ರಧಾನಿ ಮೋದಿ ಕೂಡಲೇ ಅದನ್ನು ಗುಜರಾತಿನ ‘ಅಸ್ಮಿತೆ’ಗೆ ಜೋಡಿಸಿದರು. ಇದು ಹಿಂದುಳಿದ ವರ್ಗಕ್ಕಾದ ಅವಮಾನ ಎಂದು ಬಿಜೆಪಿಯ ಚುನಾವಣಾ ತಂತ್ರಗಾರಿಕೆ ತಂಡ ಬಿಂಬಿಸಿತು.

ಸಂಘಟನಾ ಶಕ್ತಿ

ಬಿಜೆಪಿಯ ಸಂಘಟನಾ ಶಕ್ತಿ ಕಾಂಗ್ರೆಸ್​ಗಿಂತ ಶಕ್ತಿಶಾಲಿಯಾಗಿದೆ. ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತ ಬಂದಿದ್ದು, ಅದನ್ನು ಸುಸ್ಥಿತಿಯಲ್ಲಿ ಇರಿಸಿದೆ ಕೂಡ. ಹೀಗಾಗಿ ಯಾವುದೇ ಸಂದೇಶ ವರಿಷ್ಠರಿಂದ ಬಂದರೆ ಅದು ಕೂಡಲೇ ತಳಮಟ್ಟಕ್ಕೆ ಕ್ಷಣಮಾತ್ರದಲ್ಲಿ ತಲುಪಿಬಿಡುತ್ತದೆ. ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಬಿಜೆಪಿ ಅಚ್ಚುಕಟ್ಟಾಗಿ ಬಳಸಿಕೊಂಡಿದೆ.

 

ಶಂಕರ್ ಸಿಂಗ್ ವಾಘೇಲಾ ಕೊಟ್ಟ ಪೆಟ್ಟೇನು?

ಗುಜರಾತ್​ನಲ್ಲಿ ಕಾಂಗ್ರೆಸ್ ಎಂದರೆ ಶಂಕರ್ ಸಿಂಗ್ ವಾಘೇಲಾ ಎಂಬ ಮಾತಿತ್ತು. ಅಂಥ ಮುಖಂಡ ಜುಲೈನಲ್ಲಿ ಕಾಂಗ್ರೆಸ್ ತೊರೆದು ಜನವಿಕಲ್ಪ್ ಮೋರ್ಚಾ ಸ್ಥಾಪಿಸಿದರು. ಉತ್ತರ ಗುಜರಾತ್​ನಲ್ಲಿ ವಾಘೇಲಾ ಅನುಪಸ್ಥಿತಿಯಲ್ಲಿ ನಡೆದ ಕಾಂಗ್ರೆಸ್ ರ್ಯಾಲಿಗಳು ಮತದಾರರ ಅಸಮಾಧಾನಕ್ಕೆ ಕಾರಣವಾದವು ಎಂದು ವಿಶ್ಲೇಷಿಸಲಾಗಿದೆ. ವಾಘೇಲಾ ಕಣಕ್ಕಿಳಿಸಿದ್ದು 76 ಅಭ್ಯರ್ಥಿಗಳನ್ನು ಮಾತ್ರ. ಆದರೂ ವಾಘೇಲಾ ಪಕ್ಷ ಕಾಂಗ್ರೆಸ್ ಮತಬ್ಯಾಂಕನ್ನು ಒಂದಿಷ್ಟು ಕಸಿದುಕೊಂಡಿತು.

Leave a Reply

Your email address will not be published. Required fields are marked *

Back To Top