ನಿಪ್ಪಾಣಿ: ಕ್ಷೇತ್ರದಲ್ಲಿ ಕೆಲ ಶಾಶ್ವತ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಬಾಕಿ ಉಳಿದ ಕಾಮಗಾರಿಗಳು ಆದಷ್ಟು ಬೇಗ ಪೂರ್ಣಗೊಳ್ಳಲಿವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು. ತಾಲೂಕಿನ ಕೊಗನೊಳ್ಳಿಯಲ್ಲಿ 2.27 ಕೋಟಿ ರೂ. ಅನುದಾನದಲ್ಲಿ ಗುರುವಾರ ಎರಡು ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ವಿರೋಧಿಗಳಿಗೆ ಉತ್ತರ ಎಂದರು.
ಸಚಿವೆಯಾಗಿ ರಾಜ್ಯದ ಜವಾಬ್ದಾರಿಯೊಂದಿಗೆ ನನ್ನ ಕ್ಷೇತ್ರದಲ್ಲೂ ವಿವಿಧ ಇಲಾಖೆಯಡಿ ಕೋಟ್ಯಂತರ ರೂ. ಅನುದಾನ ತಂದು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ರಾಜ್ಯ ಸೇರಿ ಹೊರರಾಜ್ಯಗಳ ಧಾರ್ಮಿಕ ಕೇಂದ್ರಗಳಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.
ಲೋಕೋಪಯೋಗಿ ಇಲಾಖೆಯಿಂದ ಅನುಮೋದನೆಗೊಂಡ 1.90 ಕೋಟಿ ರೂ. ಅನುದಾನದಲ್ಲಿ ಕೊಗನೊಳ್ಳಿ ಗ್ರಾಮದಿಂದ ಆಡಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಪಿಆರ್‌ಇಡಿ ಇಲಾಖೆಯಡಿ ಅನುಮೋದನೆಗೊಂಡ 37.50 ಲಕ್ಷ ರೂ. ಅನುದಾನದಲ್ಲಿ ದಿನೇಶ ಪಾಟೀಲ ಅವರ ಜಮೀನಿನಿಂದ ಕಾಲುವೆವರೆಗಿನ ರಸ್ತೆಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಗ್ರಾಪಂ ಸದಸ್ಯೆ ವಿದ್ಯಾ ವಟಕರ, ಸುನೀಲ ಮಾನೆ, ಕೊಗನೊಳ್ಳಿ ಬಿಜೆಪಿ ಅಧ್ಯಕ್ಷ ಕುಮಾರ ಪಾಟೀಲ, ಅರುಣ ಪಾಟೀಲ, ವಿಜಯ ಪಾಟೀಲ, ಎಂ.ವೈ.ಹವಾಲ್ದಾರ ಇತರರಿದ್ದರು.