ಅಭಿವೃದ್ಧಿಗೆ ಸಹಕಾರ ಅಗತ್ಯ

ಕೋಲಾರ: ದೇಶಕ್ಕೆ ಅನ್ನ ನೀಡುವ ರೈತ ಅವಲಂಬಿಸಿರುವ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಸರ್ಕಾರ ಮತ್ತು ಇಲಾಖೆಗಳ ಮೇಲಿದ್ದು, ಜವಾಬ್ದಾರಿಯುತವಾಗಿ ನಿಭಾಯಿಸಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಪಶುಪಲನಾ ಇಲಾಖೆಯಿಂದ ಟಮಕದಲ್ಲಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತ ದೇಶದ ಬೆನ್ನೆಲುಬು. ರೈತರು ಹೈನೋದ್ಯಮ ಅವಲಂಬಿಸಿ ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಯೋಜನೆಗಳನ್ನು ರೈತರಿಗೆ ತಲುಪಿಸಲು ಇಲಾಖೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ದೇಶದಲ್ಲಿ 13 ಕೋಟಿಗೂ ಅಧಿಕ ಜಾನುವಾರುಗಳಿದ್ದು, ತಗುಲುವ ರೋಗಗಳನ್ನು ಏಕ ಕಾಲದಲ್ಲಿ ನಿಯಂತ್ರಿಸಬೇಕೆಂಬ ಉದ್ದೇಶದಿಂದ ಪ್ರಧಾನಿ ಮೋದಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ವರ್ಷದಲ್ಲಿ ಎರಡು ಬಾರಿ ನಡೆಯುತ್ತಿದ್ದ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕಾ ಅಭಿಯಾನ ಶೇ.100ರಷ್ಟು ಸಾಧನೆಯಾದ ಮಾತ್ರಕ್ಕೆ ರೋಗ ನಿಯಂತ್ರಣಕ್ಕೆ ಬರುವುದಿಲ್ಲ. ನಿರಂತರವಾಗಿ ನಡೆಯಬೇಕು ಎಂದರು.

ಬರದ ಪರಿಸ್ಥಿತಿಯಲ್ಲೂ ಹಾಲು ಉತ್ಪಾದನೆ ಹೆಚ್ಚಾಗುತ್ತಿದೆ. ಅದೇ ರೋಗ ನಿಯಂತ್ರಣ ಕಾರ್ಯಕ್ರಮ ನಿರಂತರ ಆದಾಗ ಶೇ.20ರಷ್ಟು ಹೆಚ್ಚಳವಾಗುತ್ತದೆ. ರೈತರು ಯೋಜನೆಗಳ ಪ್ರಯೋಜನ ಪಡೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ವರ್ಷಕ್ಕೆ ಎರಡು ಬಾರಿ ಲಸಿಕಾ ಅಭಿಯಾನ ರಾಷ್ಟ್ರಾದ್ಯಂತ ಏಕ ಕಾಲದಲ್ಲಿ ನಡೆಯುತ್ತದೆ. ದೇಶದಲ್ಲಿ 700ಕ್ಕೂ ಹೆಚ್ಚು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಕುರಿತು ತರಬೇತಿ ನೀಡಲಾಗುತ್ತಿದ್ದು, ರೈತರು ತರಬೇತಿಯ ಪ್ರಯೋಜನ ಪಡೆದು ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ 113 ಪಶು ಆಸ್ಪತ್ರೆಗಳಿದ್ದು, ರೋಗ ನಿಯಂತ್ರಣ ಕುರಿತು ಸಮರ್ಪಕವಾಗಿ ರೈತರಿಗೆ ಮಾಹಿತಿ ನೀಡಬೇಕು. ಲಸಿಕೆ ಹಾಕಿಸುವುದರಿಂದ ಹಾಲಿನ ಉತ್ಪಾದನೆ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ಅರಿವು ಮೂಡಿಸಬೇಕು ಎಂದರು.
ಪಶುಪಲಾನೆ ಇಲಾಖೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಮಧುಸೂದನ್ ರೆಡ್ಡಿ, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಪ್ರೊ.ಬಿ.ಜಿ.ಪ್ರಕಾಶ್, ಸಹ ವಿಸ್ತರಣಾ ನಿರ್ದೇಶಕ ಟಿ.ಬಿ.ಬಸವರಾಜು, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ವಿಷಯ ತಜ್ಞರಾದ ಡಾ.ಗೌತಮ್, ಡಾ.ನಟರಾಜ್ ಹಾಜರಿದ್ದರು.

ಜಿಲ್ಲೆಯಲ್ಲಿ 15 ಸುತ್ತು ಕಾಲುಬಾಯಿ ಜರ‌್ವ ನಿಯಂತ್ರಣ ಲಸಿಕಾ ಕಾರ್ಯಕ್ರಮ ನಡೆದಿದ್ದು, 16ನೇ ಸುತ್ತಿಗೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಜಾನುವಾರುಗಳ ಜತೆಗೆ ಕುರಿ, ಮೇಕೆ, ಹಂದಿಗಳಿಗೂ ಲಸಿಕೆ ಹಾಕುವ ಚಿಂತನೆಯಿದೆ. 2019ರಲ್ಲಿ ಕಾಲುಬಾಯಿ ಜ್ವರ ಪ್ರಕರಣ ಪತ್ತೆಯಾಗಿಲ್ಲ.
ಡಾ.ಆಂಜನೇಯರೆಡ್ಡಿ, ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ

Leave a Reply

Your email address will not be published. Required fields are marked *