ಅಭಿಮಾನಿಗಳಿಗೆ ಧ್ರುವ ಸಿಹಿಸುದ್ದಿ

ಬೆಂಗಳೂರು: ನಂದ ಕಿಶೋರ್ ನಿರ್ದೇಶನ ಮಾಡುತ್ತಿರುವ ‘ಪೊಗರು’ ಚಿತ್ರದ ಕೆಲಸಗಳಲ್ಲಿ ಬಿಜಿ ಇದ್ದಾರೆ ನಟ ಧ್ರುವ ಸರ್ಜಾ. ಸದ್ಯ ಉದಯ್ ಮೆಹ್ತಾ ನಿರ್ಮಾಣ ಮಾಡುತ್ತಿರುವ ಚಿತ್ರದಲ್ಲೂ ಅವರು ನಟಿಸಲಿದ್ದಾರೆ. ಅದರ ಮಧ್ಯೆಯೇ ಧ್ರುವ ಹೊಸ ಸಿನಿಮಾ ಒಪ್ಪಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ‘ಜಗ್ಗು ದಾದಾ’ ಚಿತ್ರವನ್ನು ನಿರ್ಮಾಣ ಮಾಡುವುದರ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡು ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದ ರಾಘವೇಂದ್ರ ಹೆಗಡೆ, ಈಗ ಧ್ರುವಗೆ ಆಕ್ಷನ್-ಕಟ್ ಹೇಳಲಿದ್ದಾರೆ ಎನ್ನುತ್ತಿವೆ ಮೂಲಗಳು. ಇಬ್ಬರೂ ಈಗಾಗಲೇ ಕಥೆ ಕೂಡ ಫೈನಲ್ ಮಾಡಿದ್ದಾರಂತೆ. ಅಂದಹಾಗೆ, ರಾಘವೇಂದ್ರ ಅವರೇ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಆದರೆ ಚಿತ್ರ ಸೆಟ್ಟೇರುವುದು ಕೊಂಚ ವಿಳಂಬವಾಗಲಿದೆಯಂತೆ. ಶೀಘ್ರದಲ್ಲೇ ಈ ಪ್ರಾಜೆಕ್ಟ್​ನ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ರಾಘವೇಂದ್ರ ತೊಡಗಿಕೊಳ್ಳಲಿದ್ದಾರೆ. ಧ್ರುವ ಕೈಯಲ್ಲಿರುವ ಎರಡು ಸಿನಿಮಾಗಳ ಕೆಲಸ ಮುಗಿಸಿಕೊಂಡ ನಂತರ ಹೊಸ ಚಿತ್ರದ ಕೆಲಸಗಳತ್ತ ಅವರು ಗಮನ ಹರಿಸಲಿದ್ದಾರಂತೆ. ಹಾಗಾಗಿ ಮುಂದಿನ ಜನವರಿ ವೇಳೆಗೆ ಈ ಚಿತ್ರ ಸೆಟ್ಟೇರಲಿದೆ. ದರ್ಶನ್ ನಟನೆಯ ‘ಜಗ್ಗು ದಾದಾ’ ಮೂಲಕ ಸದ್ದು ಮಾಡಿದ್ದ ರಾಘವೇಂದ್ರ, ಈಗ ಧ್ರುವ ಜತೆ ಕೈಜೋಡಿಸಿದ್ದಾರೆ, ಈ ಮೂಲಕ ದೊಡ್ಡ ಯಶಸ್ಸು ಪಡೆಯಲಿದ್ದಾರೆಯೇ ಎಂಬ ಕುತೂಹಲ ಅಭಿಮಾನಿಗಳದ್ದು. ಸದ್ಯ, ರಾಘವೇಂದ್ರ ಕಿರುತೆರೆಯಲ್ಲಿ ಬಿಜಿಯಾಗಿದ್ದಾರೆ. ‘ಪೊಗರು’ ಚಿತ್ರಕ್ಕಾಗಿ ಧ್ರುವ ಹೆಚ್ಚಿನ ಕಸರತ್ತು ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *