ಬೆಳಗಾವಿ: ಭೀಮಗಡ ಅಭಯಾರಣ್ಯ ಒತ್ತುವರಿ ಮಾಡಿ 30 ವರ್ಷಗಳಿಂದ ಗೋಡಂಬಿ ಬೆಳೆದಿದ್ದ ಐವರ ವಿರುದ್ಧ ಖಾನಾಪುರ ನ್ಯಾಯಾಲಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ದಾವೆ ಹೂಡಿದ್ದಾರೆ.
ಖಾನಾಪುರ ತಾಲೂಕಿನ ಅಮಗಾಂವ ಗ್ರಾಮದ ಐವರ ವಿರುದ್ಧ ಖಾನಾಪುರ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಭೀಮಗಡ ಅರಣ್ಯ ವ್ಯಾಪ್ತಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ(ಸರ್ವೇ ನಂ.7ರ) ಗಿಡಗಳನ್ನು ಕಡಿದು ಬೆಂಕಿ ಹಚ್ಚಿರುವ ಬಗ್ಗೆ ಬಂದ ಮಾಹಿತಿ ಆಧರಿಸಿ ವಿಚಾರಣೆ ಕೈಗೊಂಡಾಗ ಒತ್ತುವರಿ ಮಾಡಿರುವುದು ಗಮನಕ್ಕೆ ಬಂದಿದೆ.
ನ್ಯಾಯಾಲಯದಲ್ಲಿ ಪ್ರಾಥಮಿಕ ದಾವೆ ಹೂಡಿದ ಅರಣ್ಯಾಧಿಕಾರಿಗಳು, ಐವರಿಗೆ ಆ ಜಮೀನಿನ ಹಕ್ಕುಪತ್ರದ ದಾಖಲೆಗಳನ್ನು ಒದಗಿಸುವಂತೆ ನೋಟಿಸ್ ನೀಡಿದ್ದರು. ಆದರೆ, ಈವರೆಗೂ ದಾಖಲೆ ಹಾಜರುಪಡಿಸದೇ ದಶಕಗಳಿಂದ ಉಳುಮೆ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇದೀಗ ಐವರ ವಿರುದ್ಧ ಭಾರತೀಯ ಅರಣ್ಯ ಕಾಯ್ದೆ-1927, ಕರ್ನಾಟಕ ಅರಣ್ಯ ಕಾಯ್ದೆ-1963ರಡಿ ಪ್ರಕರಣ ದಾಖಲಿಸಿ, ವಿಚಾರಣೆ ಆರಂಭಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.