ಹುಬ್ಬಳ್ಳಿ: ಹು-ಧಾ ಪೂರ್ವ ಕ್ಷೇತ್ರದಿಂದ ಹ್ಯಾಟ್ರಿಕ್ ಜಯ ಸಾಧಿಸಿರುವ ಪ್ರಸಾದ ಅಬ್ಬಯ್ಯಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ಸೋಮವಾರ ಮೆರವಣಿಗೆ ನಡೆಸಿದರು.
ಸ್ಟೇಷನ್ ರಸ್ತೆಯ ಅಂಬೇಡ್ಕರ್ ವೃತ್ತದಿಂದ ಕಿತ್ತೂರ ಚನ್ನಮ್ಮ ವೃತ್ತದವರೆಗೆ ಮೆರವಣಿಗೆ ನಡೆಸಿ ಬಳಿಕ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಳೆದ 2 ಅವಧಿಯಲ್ಲಿ ಅಬ್ಬಯ್ಯ ಅವರು ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿ ಅಭಿವೃದ್ಧಿಯ ಹರಿಕಾರ ಎನಿಸಿದ್ದಾರೆ. ಇದರ ಫಲವಾಗಿ ಬಿಜೆಪಿಯವರು ಎಷ್ಟೇ ಷಡ್ಯಂತ್ರ ಮಾಡಿದರೂ ಅಬ್ಬಯ್ಯ 3ನೇ ಬಾರಿ ಗೆಲುವು ಸಾಧಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹಾಗೂ ಸಂಪೂರ್ಣ ಧಾರವಾಡ ಜಿಲ್ಲೆ ಸರ್ವತೋಮುಖ ಅಭಿವೃದ್ಧಿ ಕಾಣುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದ್ದಾರೆ.
ಪಾಲಿಕೆಯ ವಿರೋಧ ಪಕ್ಷದ ನಾಯಕ ದೋರಾಜ್ ಮಣಿಕುಂಟ್ಲ, ಪಾಲಿಕೆ ಸದಸ್ಯರಾದ ನಿರಂಜನ ಹಿರೇಮಠ, ಇಲಿಯಾಸ್ ಮನಿಯಾರ, ಇಮ್ರಾನ್ ಎಲಿಗಾರ, ಮುಖಂಡರಾದ ಮೋಹನ ಅಸುಂಡಿ, ಪ್ರಕಾರ ಬುರಬುರೆ, ಮೆಹಮೂದ್ ಕೋಳೂರ, ಪ್ರಸನ್ನ ಮೀರಜಕರ, ವೀರಣ್ಣ ಹಿರೇಹಾಳ, ಇತರರು ಇದ್ದರು.