ಅಬಕಾರಿ ಅಧಿಕಾರಿಗಳಿಗೇ ದಿಗ್ಬಂಧನ

ಕಾರವಾರ: ಅಕ್ರಮ ಸಾರಾಯಿ ಸಾಗಣೆದಾರರನ್ನು ಹಿಡಿದ ಅಬಕಾರಿ ಅಧಿಕಾರಿಗಳಿಗೆ ಸ್ಥಳೀಯರು ದಿಗ್ಬಂಧನ ಹಾಕಿ ಹಲ್ಲೆಗೆ ಮುಂದಾದ ಘಟನೆ ಮಾಜಾಳಿ ಗಾಬೀತವಾಡದಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ಸಾರಾಯಿ ಸಾಗಿಸುತ್ತಿದ್ದ ಒಬ್ಬ ಆರೋಪಿಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

ಆಗಿದ್ದೇನು?: ಗಾಬೀತವಾಡ ಕಡಲ ತೀರದಲ್ಲಿ ಫೆ. 18 ರ ಬೆಳಗ್ಗೆ 8.30 ರ ಸುಮಾರಿಗೆ 2 ದೋಣಿಯ ಮೂಲಕ ಯೋಗೇಶ ನಾಗೇಶ ಪಾಟೀಲ್, ಸತೀಶ ನಾಯ್ಕ ಹಾಗೂ ಶಿವಾನಂದ ಎಂಬುವವರು ನಾಲ್ಕು ಮೂಟೆ ಅಕ್ರಮ ಗೋವಾ ಸಾರಾಯಿಯನ್ನು ತಂದು ಬೈಕ್​ನ ಮೇಲೆ ಹಾಕಿ ಸಾಗಿಸುತ್ತಿದ್ದರು. ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು ತೆರಳಿ ಅಕ್ರಮ ಸಾರಾಯಿಯನ್ನು ವಶಕ್ಕೆ ಪಡೆಯುತ್ತಾರೆ. ಅಷ್ಟರಲ್ಲಾಗಲೇ ಅಧಿಕಾರಿಗಳಿಗೆ ನೂರಾರು ಸಂಖ್ಯೆಯಲ್ಲಿ ಮುತ್ತಿಗೆ ಹಾಕಿದ ಸ್ಥಳೀಯರು ಅಬಕಾರಿ ಅಧಿಕಾರಿಗಳನ್ನು ಹೋಗ ಬಿಡದೇ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ವಶಕ್ಕೆ ಪಡೆದ ಮೂರು ಮೂಟೆ ಸಾರಾಯಿಯನ್ನು ಪಡೆದಿದ್ದು, ಆರೋಪಿಗಳನ್ನು ಪರಾರಿಯಾಗಲು ಅವಕಾಶ ಮಾಡಿಕೊಟ್ಟರು ಎನ್ನಲಾಗಿದೆ. ಅಲ್ಲದೆ, ಈ ಘಟನೆಗಳನ್ನು ವಿಡಿಯೋ ಮಾಡಿಕೊಂಡ ಸಿಬ್ಬಂದಿಯೊಬ್ಬರ ಮೊಬೈಲ್​ನ್ನು ಒಡೆದು ಹಾಕಿದ್ದಾರೆ. ಈ ಸಂಬಂಧ ಚಿತ್ತಾಕುಲಾ ಠಾಣೆಯಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಸ್ವತ್ತಿಗೆ ಹಾನಿ ಮಾಡಿದ ಬಗ್ಗೆ ಅಬಕಾರಿ ನಿರೀಕ್ಷಕಿ ಸುವರ್ಣಾನಾಯ್ಕ ದೂರು ದಾಖಲಿಸಿದ್ದಾರೆ.

ಮಾಜಿ ಶಾಸಕರ ಬೆಂಬಲ: ಅಕ್ರಮ ಸಾರಾಯಿ ಸಾಗಿಸುತ್ತಿದ್ದ ಜನರ ಪರವಾಗಿ ನಿಂತು ಅವರು ಅಬಕಾರಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಮಾಜಿ ಶಾಸಕರೊಬ್ಬರು ನೆರವಾದರು ಎಂಬ ಆರೋಪ ಕೇಳಿ ಬಂದಿದೆ. ದಾಂಡೇಬಾಗ ಗ್ರಾಮಸ್ಥರು ಹಾಗೂ ಅಬಕಾರಿ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯುವ ಸಂದರ್ಭದಲ್ಲಿ ಆಗಮಿಸಿದ ಮಾಜಿ ಶಾಸಕರು ಸಾರಾಯಿ ಮಾರಾಟಗಾರರ ಪರ ನಿಂತರು. ಇದರಿಂದ ನೂರಾರು ಸಂಖ್ಯೆಯಲ್ಲಿದ್ದ ಜನರನ್ನು ನಾಲ್ಕೈದು ಸಂಖ್ಯೆಯಲ್ಲಿದ್ದ ಅಧಿಕಾರಿಗಳು ಎದುರಿಸಲು ಸಾಧ್ಯವಾಗದೇ ಹೋಗಬೇಕಾಯಿತು ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.

8 ಸಾವಿರ ಲೀಟರ್​ಗೂ ಅಧಿಕ ಸಾರಾಯಿ ನಾಶ: ಕಳೆದ ನಾಲ್ಕೈದು ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ವಶಕ್ಕೆ ಪಡೆದ 8 ಸಾವಿರ ಲೀಟರ್​ಗೂ ಅಧಿಕ ಸಾರಾಯಿಯನ್ನು ಜಿಲ್ಲಾದ್ಯಂತ ಈ ವಾರ ನಾಶ ಮಾಡಲಾಗಿದೆ.

ಕಾರವಾರದ ಅಬಕಾರಿ ವಿಭಾಗದಲ್ಲಿದ್ದ 4 ಲಕ್ಷ 75 ಸಾವಿರ ರೂ. ಮೌಲ್ಯದ 1963 ಲೀಟರ್ ಮದ್ಯವನ್ನು ಕೋಡಿಬಾಗದ ತಮ್ಮ ಕಚೇರಿಯ ಸಮೀಪ ಬುಧವಾರ ನಾಶ ಮಾಡಿದ ನಂತರ ಅಬಕಾರಿ ಉಪಾಧೀಕ್ಷಕ ಮಂಜುನಾಥ ಮಾಹಿತಿ ನೀಡಿದರು.

ಅಂಕೋಲಾ ಉಪವಿಭಾಗದಲ್ಲಿ 23, ಕುಮಟಾದಲ್ಲಿ 6, ಹೊನ್ನಾವರದಲ್ಲಿ 24, ಭಟ್ಕಳದಲ್ಲಿ 12, ಯಲ್ಲಾಪುರದಲ್ಲಿ 6, ಶಿರಸಿಯಲ್ಲಿ 13, ದಾಂಡೇಲಿಯಲ್ಲಿ 5 ಸೇರಿ ಒಟ್ಟು 21 ಪ್ರಕರಣಕ್ಕೆ ಸಂಬಂಧಿಸಿದಂತೆ 23 ಲಕ್ಷ 73, 677 ರೂ. ಮೌಲ್ಯದ 8170.75 ಲೀಟರ್ ಮದ್ಯವನ್ನು ನಾಶ ಮಾಡಲಾಗಿದೆ ಎಂದು ವಿವರಿಸಿದರು. ಅಬಕಾರಿ ನಿರೀಕ್ಷಕಿ ಸುವರ್ಣಾ ನಾಯ್ಕ ಇದ್ದರು.

ಭಟ್ಕಳದಲ್ಲೂ ಅಕ್ರಮ ಮದ್ಯ ನಾಶ: 2018ರ ವಿಧಾನಸಭಾ ಚುನಾವಣೆ ವೇಳೆ ವಶಪಡಿಸಿಕೊಳ್ಳಲಾದ ಮದ್ಯ, ಕಳ್ಳಭಟ್ಟಿ, ಬೆಲ್ಲದ ಕೊಳೆಯನ್ನು ತಾಲೂಕಾ ಅಬಕಾರಿ ನಿರೀಕ್ಷಕಿ ಶುಭದಾ ಸಿ. ನಾಯಕ ಸಮಕ್ಷಮದಲ್ಲಿ ಸಾಗರ ರಸ್ತೆಯ ಗುಡ್ಡದಲ್ಲಿ ಬುಧವಾರ ನಾಶಪಡಿಸಲಾಯಿತು. ಈ ವೇಳೆ ಹೊನ್ನಾವರ ಉಪವಿಭಾಗದ ಅಬಕಾರಿ ಉಪ ನಿರೀಕ್ಷಕ ಹಾಗೂ ತಾಲೂಕಾ ವಲಯ ಅಬಕಾರಿ ನಿರೀಕ್ಷಕಿ ಶುಭದಾ ಸಿ. ನಾಯ್ಕ, ಅಬಕಾರಿ ಪಿಎಸೈ ಜಿ.ಎಲ್.ಬೋರ್ಕರ, ಪಿಎಸೈ ಅಸೋದೆ ಸೇರಿದಂತೆ ಸಿಬ್ಬಂದಿ ಇದ್ದರು.