ಅಪ್ರಾಪ್ತೆ ಮೇಲೆ ಅತ್ಯಾಚಾರ


ನರಗುಂದ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಯುವಕರ ಗುಂಪೊಂದು ಅತ್ಯಾಚಾರ ಮಾಡಿದ ಯುವಕ ಮತ್ತು ಆತನ ತಂದೆಯನ್ನು ಪೊಲೀಸರ ಸಮ್ಮುಖದಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಶುಕ್ರವಾರ ಪಟ್ಟಣದಲ್ಲಿ ಜರುಗಿದೆ.

ಪಟ್ಟಣದ ಹಾಲಭಾವಿಕೇರಿ ಬಡಾವಣೆಯ ನಿವಾಸಿಗಳಾದ ಮಂಜುನಾಥ ಕಮ್ಮಾರ (22) ಸುರೇಶ ಕಮ್ಮಾರ ಎಂಬುವರು ಥಳಿತಕ್ಕೊಳಗಾದವರು.

ಮಂಜುನಾಥ ಕಮ್ಮಾರ ಎಂಬ ಯುವಕ ಇತ್ತೀಚೆಗೆ ಅದೇ ಬಡಾವಣೆಯ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂಬ ವಿಷಯ ಬಾಲಕಿಯ ಪಾಲಕರಿಗೆ ತಿಳಿದಿದೆ. ಈ ವಿಷಯ ಕುರಿತು ಶುಕ್ರವಾರ ಬಾಲಕಿಯ ತಂದೆ ಹಾಗೂ ಯುವಕನ ತಂದೆ ಹಾಗೂ ಬಡಾವಣೆಯ ಹಿರಿಯರು ಸೇರಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ರ್ಚಚಿಸಿ ಸಂಧಾನ ಮಾಡಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ 20 ಯುವಕರ ತಂಡವೊಂದು ಮಂಜುನಾಥ ಮತ್ತು ಆತನ ತಂದೆ ಸುರೇಶ ಕಮ್ಮಾರ ಅವರನ್ನು ಮನಬಂದಂತೆ ಥಳಿಸಿದ್ದಾರೆ. ಆಕ್ರೋಶಿತ ಯುವಕನೊಬ್ಬ ಸುರೇಶ ಕಮ್ಮಾರ ಅವರಿಗೆ ಇಟ್ಟಿಗೆಯಿಂದ ತಲೆಗೆ ಹೊಡೆದಿದ್ದರಿಂದ ತಲೆ ಒಡೆದು ರಕ್ತ ಸುರಿಯಲಾರಂಭಿಸಿತು. ಆಗ ಸುರೇಶ ಅವರೊಂದಿಗೆ ರಾಜಿ ಸಂಧಾನಕ್ಕೆ ತೆರಳಿದ್ದ ಹಿರಿಯರು ಸುರೇಶ ಅವರನ್ನು ಆಟೋ ರಿಕ್ಷಾದಲ್ಲಿ ಕರೆದುಕೊಂಡು ಬಂದು ಪಟ್ಟಣದ ಬೃಂದಾವನ ಹೋಟೆಲ್ ಹತ್ತಿರ ಬಿಟ್ಟಿದ್ದಾರೆ.

ಆದರೆ, ಕೋಪಗೊಂಡಿದ್ದ ಯುವಕರು ಆಟೋ ಹಿಬಾಲಿಸಿಕೊಂಡು ಬಂದು ಸುರೇಶ ಕಮ್ಮಾರ ಮೇಲೆ ಮತ್ತೊಮ್ಮೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೇ, ಪಟ್ಟಣದ ಹುಬ್ಬಳ್ಳಿ-ವಿಜಯಪುರ ರಸ್ತೆಯುದ್ದಕ್ಕೂ ಬೆಲ್ಟ್​ನಿಂದ ಮನಬಂದಂತೆ ಥಳಿಸಿ ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಯುವಕರ ಹೊಡೆತಕ್ಕೆ ಸುರೇಶ ಕಮ್ಮಾರ ಶರ್ಟ್ ಹರಿದುಹೋಗಿದ್ದಲ್ಲದೇ, ತಲೆ ಒಡೆದು ಮೈಯೆಲ್ಲ ರಕ್ತಮಯವಾಗಿತ್ತು. ಅತ್ಯಾಚಾರ ಮಾಡಿದ ಯುವಕನ ತಂದೆಯ ಮೇಲೆ ಯುವಕರು ತೀವ್ರತರ ಹಲ್ಲೆ ಮಾಡಿದರೂ ಸ್ಥಳದಲ್ಲಿದ್ದ ಪೊಲೀಸರು ಮೂಕಪ್ರೇಕ್ಷಕರಂತೆ ನೋಡುತ್ತಾ ನಿಂತಿದ್ದರು ಎಂದು ಜನರು ಮಾತನಾಡಿಕೊಂಡರು.

ಸುದ್ದಿ ಹರಡುತ್ತಿದ್ದಂತೆಯೇ ಎರಡು ಕುಟುಂಬದವರು, ಸಾರ್ವಜನಿಕರು ಪೊಲೀಸ್ ಠಾಣೆ ಮುಂದೆ ಜಮಾಯಿಸಿದರು. ಈ ಸಂದರ್ಭದಲ್ಲಿ ಬಿಗುವಿನ ವಾತಾವರಣ ನಿರ್ವಣವಾಗಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನು ನಡೆಸಿ ಜನರನ್ನು ಚದುರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಂದಾಗುವ ಬೆಳವಣಿಗೆ ಅರಿತು ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ 250 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ಪರಿಸ್ಥಿತಿ ನಿಯಂತ್ರಿಸಲಾಯಿತು.

ಗಾಯಾಳು ಸುರೇಶ ಕಮ್ಮಾರ ಅವರಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಅತ್ಯಾಚಾರ ಮಾಡಿರುವ ಆರೋಪಿ ಮಂಜುನಾಥ ಕಮ್ಮಾರನನ್ನು ಪೊಲೀಸರು ಬಂಧಿಸಲಾಗಿದೆ. ಅಲ್ಲದೇ, ಗಾಯಾಳು ಸುರೇಶ ಕಮ್ಮಾರ ನೀಡಿರುವ ದೂರಿನ ಮೇರೆಗೆ 14 ಜನರ ಮೇಲೆ ಪ್ರಕರಣ ದಾಖಲಾಗಿದೆ. ಈ ಕುರಿತು ಈಗಾಗಲೇ ಕೆಲ ಯುವಕರನ್ನು ಬಂಧಿಸಲಾಗಿದೆ ಎಂದು ಡಿಎಸ್​ಪಿ ಶಂಕರಗೌಡ ಪಾಟೀಲ ತಿಳಿಸಿದ್ದಾರೆ.

ಯುವಕನೊಬ್ಬ ಅಪ್ರಾಪ್ತ ಬಾಲಕಿ ಅತ್ಯಾಚಾರ ಮಾಡಿದ್ದಾನೆಂದು ಸಿಟ್ಟಿಗೆದ್ದ ಕೆಲ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಅತ್ಯಾಚಾರ ಆರೋಪಿಯನ್ನು ಬಂಧಿಸಲಾಗಿದೆ. ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
|ಶ್ರೀನಾಥ ಜೋಶಿ, ಎಸ್ಪಿ ಗದಗ

Leave a Reply

Your email address will not be published. Required fields are marked *