ಅಪ್ರಾಪ್ತರ ವಾಹನ ಚಾಲನೆಗೆ ಇಲ್ಲ ಬ್ರೇಕ್

ಮಂಜುನಾಥ ಎಸ್.ಸಿ. ಹೊಸಕೋಟೆ

ಅಪ್ರಾಪ್ತರು ವಾಹನ ಚಾಲನೆ ಮಾಡುವುದೂ ಅಂಥವರಿಗೆ ವಾಹನ ನೀಡುವುದೂ ಕಾನೂನು ರೀತಿಯಲ್ಲಿ ಅಪರಾಧ. ಆದರೂ ನಗರದಲ್ಲಿ ಅಪ್ರಾಪ್ತರ ವಾಹನ ಚಾಲನೆಗೆ ಬ್ರೇಕ್ ಬಿದ್ದಿಲ್ಲ.

18 ವರ್ಷದೊಳಗಿನ ಬಹುತೇಕ ಬಾಲಕರು ಎಗ್ಗಿಲ್ಲದೆ ದ್ವಿಚಕ್ರವಾಹನ ಚಾಲನೆ ಮಾಡುವ ದೃಶ್ಯ ಇಲ್ಲಿ ಸಾಮಾನ್ಯ. ಇಲ್ಲಿನ ಅನೇಕ ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಗಳು ಬೈಕ್​ಗಳಲ್ಲೇ ಬರುತ್ತಾರೆ. ಒಂದು ವಾಹನದಲ್ಲಿ ಮೂವರು, ಕೆಲವೊಮ್ಮೆ ನಾಲ್ವರು ವಿದ್ಯಾರ್ಥಿಗಳು ಪ್ರಯಾಣಿಸುವ ದೃಶ್ಯ ಸಾಮಾನ್ಯವಾಗಿದೆ. ಇದಕ್ಕೆ ಪಾಲಕರು ಮಾತ್ರವಲ್ಲ, ಶಾಲಾ ಆಡಳಿತ ಮಂಡಳಿಯೂ ನಿರ್ಬಂಧ ಹೇರಿದಂತಿಲ್ಲ. ಒಟ್ಟಾರೆ ಅಪ್ರಾಪ್ತರಿಗೆ ದ್ವಿಚಕ್ರ ವಾಹನಗಳು ಸಿಕ್ಕಿರುವುದು ಮಂಗನ ಕೈಗೆ ಮಾಣಿಕ್ಯ ಕೊಟ್ಟಂತಾಗಿದೆ.

ಸಂಚಾರ ನಿಯಮ ಅರಿವಿಲ್ಲ:

ವಾಹನ ಚಾಲನೆಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು, ವಾಹನ ಚಾಲನಾ ಪರವಾನಗಿ ಪಡೆದಿರಬೇಕು. ಆದರೆ ಈ ನಿಯಮಗಳನ್ನು ಇಲ್ಲಿ ಕೇಳುವವರೇ ಇಲ್ಲ. ಹೀಗಾಗಿ ಸಂಚಾರ ನಿಯಮದ ಅರಿವಿಲ್ಲದ ಬಾಲಕರು ಮನಸೋ ಇಚ್ಚೆ ವಾಹನ ಚಲಾಯಿಸಿ ಅಪಘಾತಗಳಿಗೆ ಕಾರಣವಾಗುತ್ತಿದ್ದಾರೆ.

ಟ್ರಾಫಿಕ್ ಠಾಣೆ ಇಲ್ಲ: ನಗರದಲ್ಲಿ ವಾಹನಗಳ ಸಂಖ್ಯೆ ಮಿತಿಮೀರಿದೆ. ದಿನೇದಿನೆ ವಾಹನ ದಟ್ಟಣೆ ಹೆಚ್ಚುತ್ತಿದೆ. ಮುಖ್ಯರಸ್ತೆಗಳಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಹೊಸಕೋಟೆ ನಗರಕ್ಕೆ ಟ್ರಾಫಿಕ್ ಠಾಣೆ ನೀಡಬೇಕೆಂಬ ಪ್ರಸ್ತಾವನೆಗೆ ಸರ್ಕಾರದಿಂದ ಹಸಿರು ನಿಶಾನೆ ದೊರೆತಿಲ್ಲ. ಇದು ಅಪ್ರಾಪ್ತರ ಬೈಕ್ ಚಾಲನೆಗೆ ವರದಾನವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಿಷೇಧಕ್ಕೆ ಒತ್ತಾಯ: ಮಕ್ಕಳ ಮೇಲಿನ ಪ್ರೀತಿಯಿಂದಲೋ ಅಥವಾ ಅವರ ಒತ್ತಾಯಕ್ಕೆ ಮಣಿದೋ ಪಾಲಕರು ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಜಾಗೃತಿ ಮೂಡಿಸಬೇಕು. ಶಾಲೆಗಳಿಗೆ ಅಪ್ರಾಪ್ತರು ದ್ವಿಚಕ್ರವಾಹನ ತರದಂತೆ ಶಾಲಾ ಕಾಲೇಜು ಆಡಳಿತ ಮಂಡಳಿಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂಬುದು ನಾಗರಿಕರ ಒತ್ತಾಯ. ಬಾಲಕರು ತರುವ ವಾಹಗಳನ್ನು ಜಪ್ತಿ ಮಾಡಬೇಕು. ಪಾಲಕರಿಗೆ ದಂಡ ಹಾಕಿ ಎಚ್ಚರಿಕೆ ನೀಡಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ತಿಂಗಳಿಗೊಮ್ಮೆಯಾದರೂ ರಸ್ತೆ ಸುರಕ್ಷತೆ ಹಾಗೂ ರಸ್ತೆ ನಿಯಮ ಕುರಿತ ಕಾರ್ಯಾಗಾರ ನಡೆಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವೂ ಆಗಬೇಕಿದೆ.

ಅಪ್ರಾಪ್ತರು ವಾಹನ ಚಲಾಯಿಸುವುದು ಅಪರಾಧ. ಇಂಥವರು ಕಂಡುಬಂದರೆ ವಾಹನ ಜಪ್ತಿ ಮಾಡಿ ಪಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.

| ನಿಂಗಪ್ಪ ಬಸಪ್ಪ ಸಕ್ರಿ, ಡಿವೈಎಸ್​ಪಿ

ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಅಡ್ಡಾದಿಡ್ಡಿ ವಾಹನ ಚಲಾಯಿಸುವ ಮೂಲಕ ಸಾರ್ವಜನಿಕರಲ್ಲಿ ಭೀತಿಯುಂಟು ಮಾಡುತ್ತಿದ್ದಾರೆ. ಅಪ್ರಾಪ್ತರಿಗೆ ವಾಹನ ನೀಡಬಾರದೆಂಬ ಕನಿಷ್ಠ ಅರಿವಾದರೂ ಪಾಲಕರಿಗೆ ಇರಬೇಕು. | ಡೇರಿ ಮುನಿನಂಜಪ್ಪ

ಹಿರಿಯ ನಾಗರಿಕ ಹೊಸಕೋಟೆ

ಅಪ್ರಾಪ್ತರು ಶಾಲಾ ಕಾಲೇಜುಗಳಿಗೆ ವಾಹನ ತರದಂತೆ ಶಿಕ್ಷಣ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪಾಲಕರಿಗೂ ಎಚ್ಚರಿಕೆ ನೀಡಬೇಕು.

| ಶ್ರೀನಿವಾಸ್ ಕೆ. ಮಲ್ಲಸಂದ್ರ ನಿವಾಸಿ