ಅಪ್ರಮೇಯಸ್ವಾಮಿ ರಥೋತ್ಸವ ಸಂಪೂರ್ಣ

ಚನ್ನಪಟ್ಟಣ: ಮತದಾನ ಹಬ್ಬ ಮತ್ತು ದೊಡ್ಡಮಳೂರು ಶ್ರೀ ರಾಮಾಪ್ರಮೇಯ ಸ್ವಾಮಿ ರಥೋತ್ಸವ ಗುರುವಾರ ಯಶಸ್ವಿಯಾಗಿ ಸಂಪನ್ನಗೊಂಡಿತು. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮತಗಟ್ಟೆ ಪಕ್ಕದಲ್ಲೇ ದೇವಾಲಯ ಇರುವ ಕಾರಣ ಗೊಂದಲದ ವಾತಾವರಣ ನಿರ್ವಣಗೊಂಡಿತ್ತು. ಜಾತ್ರೆ ಮತ್ತು ಮತದಾನಕ್ಕೆ ಯಾವುದೇ ಅಡ್ಡಿಯಾಗದಂತೆ ತಾಲೂಕು ಆಡಳಿತ ಕ್ರಮ ಕೈಂಗೊಂಡಿದ್ದರಿಂದ ಎರಡೂ ಕಾರ್ಯಗಳು ಸುಗಮವಾಗಿ ಪೂರ್ಣಗೊಂಡಿತು.

ಮುಖ್ಯದ್ವಾರಕ್ಕೆ ಬ್ಯಾರಿಕೇಡ್: ಮತಗಟ್ಟೆ ಮುಂಭಾಗದಿಂದ ಅಪ್ರಮೇಯಸ್ವಾಮಿ ದೇವಾಲಯ ಪ್ರವೇಶಿಸುವುದನ್ನು ಬಂದ್ ಮಾಡಿ, ಮತದಾರರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಗೊಂದಲ, ಗದ್ದಲ ಉಂಟಾಗದಂತೆ ಬ್ಯಾರಿಕೇಡ್ ಮತ್ತು ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

ರಥೋತ್ಸವ ಯಶಸ್ವಿ: ಮತದಾನದ ನಡುವೆಯೂ ದೊಡ್ಡ ಮಳೂರಿನ ಶ್ರೀ ರಾಮಾಪ್ರಮೇಯ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ 11.20ರ ಶುಭ ಲಗ್ನದಲ್ಲಿ ತಹಸೀಲ್ದಾರ್ ದಿನೇಶ್​ಚಂದ್ರ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಹಣ್ಣು, ಜವನ ಎಸೆದು ಭಕ್ತಿಭಾವ ಮೆರೆದರು.

ಮಧ್ಯಾಹ್ನದ ಬಳಿಕ ಮತದಾನ ಬಿರುಸು: ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬೆಳಗ್ಗೆ ಮತಗಟ್ಟೆಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಸುಳಿಯಲಿಲ್ಲ. ಮಧ್ಯಾಹ್ನ 12 ಗಂಟೆವರೆಗೆ ಮತಗಟ್ಟೆ ಬಿಕೋ ಎನಿಸುತಿತ್ತು. ಮಧ್ಯಾಹ್ನ ಊಟದ ಬಳಿಕ ಗ್ರಾಮಸ್ಥರು ಗುಂಪು ಗುಂಪಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

ಪಾನಕ ಮಜ್ಜಿಗೆ ವಿತರಣೆ: ರಥೋತ್ಸವದ ಅಂಗವಾಗಿ ನಗರದ ವಿವಿಧೆಡೆ ಅರವಟಿಕೆಗಳನ್ನು ಸ್ಥಾಪಿಸಿ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು.

Leave a Reply

Your email address will not be published. Required fields are marked *