Thursday, 13th December 2018  

Vijayavani

Breaking News

ಅಪ್ಪುಗೆ, ಅಭಿನಂದನೆ ಆಶೀರ್ವಾದ

Tuesday, 05.12.2017, 3:00 AM       No Comments

ಒಂದೂಕಾಲು ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವುದಕ್ಕಾಗಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಸ್ಪರ್ಧೆಗೆ ಬೇರೆ ಯಾರೂ ಇಲ್ಲದ ಕಾರಣ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ರಾಹುಲ್ ರಾಜಕೀಯ ಬದುಕಿನ ಚಿತ್ರಣ ಇಲ್ಲಿದೆ.

ಬದುಕಿನ ಹಾದಿ ರಾಜಕೀಯ ಗಾದಿ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸೋನಿಯಾರ ಎರಡನೇ ಮಗುವಾಗಿ ರಾಹುಲ್ 1970ರ ಜೂ.19ರಂದು ಜನಿಸಿದರು. ಅಜ್ಜಿ ಇಂದಿರಾ ಗಾಂಧಿ ಹತ್ಯೆ ಆದಾಗ ರಾಹುಲ್​ಗೆ 14 ವರ್ಷ. ತಮಿಳುನಾಡಿನ ಶ್ರೀಪೆರುಂಬದೂರು ಎಂಬಲ್ಲಿ ರಾಜೀವ್ ಗಾಂಧಿ ಹತ್ಯೆ ಆದಾಗ ರಾಹುಲ್​ಗೆ 21 ವರ್ಷ ವಯಸ್ಸು. ಕುಟುಂಬದಲ್ಲೇ ಎರಡೆರಡು ರಾಜಕೀಯ ಹತ್ಯೆಗಳನ್ನು ಕಂಡ ರಾಹುಲ್ ರಾಜಕೀಯ ಪ್ರವೇಶವನ್ನು ನಿರಾಕರಿಸುತ್ತಲೇ ಬಂದರು. 1995ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಲ್ಲಿ ಎಂ.ಫಿಲ್ ಪದವಿ ಪಡೆದ ಅವರು ಮೂರು ವರ್ಷ ಲಂಡನ್​ನಲ್ಲೇ ಮ್ಯಾನೇಜ್​ವೆುಂಟ್ ಕನ್ಸಲ್ಟಿಂಗ್ ಫಮರ್್​ನಲ್ಲಿ ಕೆಲಸ ಮಾಡಿದ್ದರು. ಬಳಿಕ ಮುಂಬೈನಲ್ಲಿ ಸ್ವಂತ ಸ್ಟ್ರಾಟಜಿ ಕನ್ಸಲ್ಟೆನ್ಸಿ ಆರಂಭಿಸಿದ್ದರು. 2004ರಲ್ಲಿ ಅನಿವಾರ್ಯವಾಗಿ ರಾಜಕೀಯ ಪ್ರವೇಶ ಮಾಡಿದ ಅವರು, ತಂದೆ ಸ್ಪರ್ಧಿಸಿದ್ದ ಅಮೇಥಿಯಿಂದ ಲೋಕಸಭೆಗೆ ಸ್ಪರ್ಧಿಸಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದ ಗೆಲುವು ಕಂಡರು. ರಾಜಕೀಯ ಪ್ರವೇಶಿಸಿದಂದಿನಿಂದ ರಾಜಕೀಯ ವಿರೋಧಿಗಳು ಕುಟುಂಬ ರಾಜಕಾರಣದ ವಿಚಾರದಲ್ಲೇ ರಾಹುಲ್​ರನ್ನು ಟೀಕಿಸುವುದೂ ನಡೆದೇ ಇದೆ. 2007ರಲ್ಲಿ ರಾಹುಲ್ ಕಾಂಗ್ರೆಸ್ ಜನರಲ್ ಸೆಕ್ರಟರಿಯಾಗಿ ನೇಮಕವಾದರು. ಅಲ್ಲದೆ, ಇಂಡಿಯನ್ ಯೂತ್ ಕಾಂಗ್ರೆಸ್ ಹಾಗೂ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ(ಎನ್​ಎಸ್​ಯುುಐ)ದ ಹೊಣೆಗಾರಿಕೆಯನ್ನೂ ಹೆಗಲೇರಿಸಿಕೊಂಡರು. 2013ರಲ್ಲಿ ಪಕ್ಷದ ಉಪಾಧ್ಯಕ್ಷ ಹುದ್ದೆಗೇರಿದರು. ಇದೇ ಸಂದರ್ಭದಲ್ಲಿ ಎರಡು ಅವಧಿಗೆ ಕಾಂಗ್ರೆಸ್ ಆಳ್ವಿಕೆ ಕೇಂದ್ರದಲ್ಲಿದ್ದರೂ, ಸಚಿವ ಸಂಪುಟ ಸೇರಲು ಹಿಂದೇಟು ಹಾಕಿದ್ದರು. ತಾಯಿ ಮಾರ್ಗದರ್ಶನದಲ್ಲಿ 13 ವರ್ಷಗಳ ತಾಲೀಮಿನ ಬಳಿಕ ಅಧ್ಯಕ್ಷ ಪಟ್ಟಕ್ಕೇರಲು ರಾಹುಲ್ ಮುಂದಾಗಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಹೀಗೆ…

# ಹಿರಿಯ ನಾಯಕರನ್ನು ಒಳಗೊಂಡಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಪಕ್ಷದ ಅತ್ಯುನ್ನತ ಸಮಿತಿಯಾಗಿದ್ದು, ಪ್ರಮುಖ ನಿರ್ಣಯಗಳು ಈ ಸಭೆಯಲ್ಲಿ ಅಂತಿಮವಾಗುತ್ತವೆ. ಅಧ್ಯಕ್ಷೀಯ ಚುನಾವಣೆ ಕುರಿತು ಸಿಡಬ್ಲ್ಯುಸಿ ಚರ್ಚೆ ನಡೆಸಿದ ಬಳಿಕ ಚುನಾವಣೆ ಸಮಿತಿ ವೇಳಾಪಟ್ಟಿ ಪ್ರಕಟಿಸುತ್ತದೆ.

# ಪ್ರದೇಶ ಕಾಂಗ್ರೆಸ್ ಸಮಿತಿಯ ಎಲ್ಲ ಸದಸ್ಯರು ಡೆಲಿಗೇಟ್ಸ್ ಆಗಿರುತ್ತಾರೆ

# 10 ಡೆಲಿಗೇಟ್ಸ್​ಗಳು ಒಮ್ಮತದಿಂದ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಸೂಚಿಸಬಹುದು. ವಿವಿಧ ರಾಜ್ಯಗಳ ಡೆಲಿಗೇಟ್ಸ್​ಗಳಿಂದ ನಿಗದಿತ ದಿನಾಂಕದ ಒಳಗಾಗಿ ಪ್ರಸ್ತಾವನೆಗಳು ಸಲ್ಲಿಕೆಯಾಗಬೇಕು

# ಡೆಲಿಗೇಟ್ಸ್​ಗಳಿಂದ ಸೂಚಿತಗೊಂಡಿರುವ ಅಭ್ಯರ್ಥಿಯು ನಿಗದಿತ ದಿನಾಂಕದ ಒಳಗಾಗಿ ನಾಮಪತ್ರ ಸಲ್ಲಿಸಬೇಕು. ಬಳಿಕ ನಾಮಪತ್ರಗಳನ್ನು ಪರಿಶೀಲಿಸಿ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.

# ಅಭ್ಯರ್ಥಿಗಳು ನಾಮಪತ್ರ ವಾಪಸು ಪಡೆಯಲು ಏಳು ದಿನ ಕಾಲಾವಕಾಶ ನೀಡಲಾಗುತ್ತದೆ

# ಒಬ್ಬನೇ ಅಭ್ಯರ್ಥಿ ಕಣದಲ್ಲಿದ್ದರೆ ಆತನನ್ನೇ ಅಧ್ಯಕ್ಷ ಎಂದು ಘೊಷಿಸಲಾಗುತ್ತದೆ

# ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ, ಗೆಲ್ಲಲು ಎಐಸಿಸಿಯ ಒಟ್ಟು ಡೆಲಿಗೇಟ್ಸ್​ಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಮತಗಳನ್ನು ಗಳಿಸಬೇಕು. ಒಂದು ವೇಳೆ ಯಾವ ಅಭ್ಯರ್ಥಿಗೂ ಶೇ. 50ಕ್ಕಿಂತ ಹೆಚ್ಚು ಮತ ಬರದಿದ್ದರೆ, ಮೊದಲ ಹಾಗೂ ಎರಡನೇ ಪ್ರಾಶಸ್ಱ ಮತಗಳನ್ನು ಎಣಿಕೆ ಮಾಡಿ, ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ.

# ಅನಿವಾರ್ಯ ಕಾರಣಗಳಿಂದ ಚುನಾವಣೆ ನಡೆಸಲು ಸಾಧ್ಯವಾಗದಿದ್ದರೆ ಸಿಡಬ್ಲ್ಯುಸಿಗೆ ಹಂಗಾಮಿ ಅಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರವಿದೆ.

# ಎಐಸಿಸಿ ಅಧಿವೇಶನದಲ್ಲಿ ಕಾಂಗ್ರೆಸ್ ನೂತನ ಅಧ್ಯಕ್ಷರು ಅಧಿಕಾರ ಸ್ವೀಕರಿಸುತ್ತಾರೆ.

ಚುನಾವಣಾ ವೇಳಾಪಟ್ಟಿ

ಕಾಂಗ್ರೆಸ್ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮುಲ್ಲಪ್ಪಳ್ಳಿ ರಾಮಚಂದ್ರನ್ ಪ್ರಕಾರ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಶುಕ್ರವಾರ(ಡಿ.1) ಆರಂಭವಾಗಿದ್ದು ಡಿ.4ರಂದು ಕೊನೇ ದಿನವಾಗಿತ್ತು. ರಾಹುಲ್ ಗಾಂಧಿ ಹೊರತಾಗಿ ಬೇರಾರೂ ನಾಮಪತ್ರ ಸಲ್ಲಿಸಿಲ್ಲ. ಡಿ.5ರಂದು ಮಧ್ಯಾಹ್ನ ಮೂರು ಗಂಟೆಗೆ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಡಿ.11 ಕೊನೇ ದಿನ. ಅಗತ್ಯವಿದ್ದಲ್ಲಿ ಡಿ.16ರಂದು ಮತದಾನ ನಡೆಯಲಿದ್ದು, ಡಿ.19ರಂದು ಫಲಿತಾಂಶ ಘೋಷಣೆಯಾಗಲಿದೆ.

ಅಧ್ಯಕ್ಷ ಹುದ್ದೆಗೇರಲು ರಾಹುಲ್ ಸಜ್ಜು

ರಾಜಕೀಯ ಸಾಧನೆ

2009ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವು, ಹಾಗೆಯೇ ಅಮೇಥಿಯಲ್ಲಿ 3.7 ಲಕ್ಷ ಮತಗಳ ಅಂತರದ ವೈಯಕ್ತಿಕ ಗೆಲುವು ಕೂಡ ಸಾಧನೆಯಾಗಿ ಮೂಡಿ ಬಂತು. ಉತ್ತರ ಪ್ರದೇಶದಲ್ಲಿ ಆರು ವಾರಗಳ ಅವಧಿಯಲ್ಲಿ 126 ರ‍್ಯಾಲಿ ನಡೆಸಿ ಗಮನಸೆಳೆದರು. ಪಂಜಾಬ್ ಮತ್ತು ಕರ್ನಾಟಕದಲ್ಲಿನ ಚುನಾವಣಾ ಗೆಲುವುಗಳು ಕೂಡ ರಾಹುಲ್ ಖಾತೆಗೆ ಸೇರಿಕೊಂಡಿವೆ.

ತಾಯಿ ಆಶೀರ್ವಾದ

ನಾಮಪತ್ರ ಸಲ್ಲಿಕೆಗೂ ಮುನ್ನ ತಾಯಿ ಸೋನಿಯಾ ಗಾಂಧಿ ಆಶೀರ್ವಾದ ಪಡೆದ ರಾಹುಲ್, ಬಳಿಕ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪಕ್ಷದ ಹಲವು ಹಿರಿಯರನ್ನು ಭೇಟಿಯಾದರು.

ಸಾಲು ಸಾಲು ಸೋಲು

ರಾಹುಲ್​ಗೆ ವೈಯಕ್ತಿಕ ಮಟ್ಟದಲ್ಲಿ ಗೆಲುವು ಸಿಕ್ಕಿತಾದರೂ, ನಾಯಕತ್ವದ ವಿಚಾರದಲ್ಲಿ ಸಾಲು ಸಾಲು ಸೋಲುಗಳೇ ಹೆಚ್ಚಾಗಿದ್ದವು. 2007ರಲ್ಲಿ ಪಕ್ಷದ ಜನರಲ್ ಸೆಕ್ರಟರಿ ಆದ ಬಳಿಕ ಮೊದಲ ಪರೀಕ್ಷೆ ಎದುರಿಸಿದ್ದು 2009ರಲ್ಲಿ.

# ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ(2009)ಯಲ್ಲಿ ಕಾಂಗ್ರೆಸ್​ನ ಪ್ರಚಾರದ ಉಸ್ತುವಾರಿಯಾಗಿದ್ದ ರಾಹುಲ್ ನಾಯಕತ್ವಕ್ಕೆ ಹೇಳಿಕೊಳ್ಳುವ ಫಲಿತಾಂಶ ಸಿಗಲಿಲ್ಲ. ಪಕ್ಷ ಸ್ಪರ್ಧಿಸಿದ್ದ 80 ಸ್ಥಾನಗಳ ಪೈಕಿ 22ರಲ್ಲಷ್ಟೇ ಗೆಲುವು ಸಿಕ್ಕಿತು.

# ಬಿಹಾರ ಚುನಾವಣೆ(2010)ಯಲ್ಲಿ ಕಾಂಗ್ರೆಸ್​ಗೆ 243 ಸ್ಥಾನಗಳ ಪೈಕಿ 4ರಲ್ಲಷ್ಟೇ ಗೆಲುವು ಸಿಕ್ಕಿತು.

# 2011ರಲ್ಲಿ ಮತ್ತೊಮ್ಮೆ ರಾಹುಲ್ ಉತ್ತರ ಪ್ರದೇಶದ ರಾಜಕಾರಣದ ಮೂಲಕ ಸುದ್ದಿಯಾದರು. ಮಾಯಾವತಿ ಸರ್ಕಾರದ ಭೂಸ್ವಾಧೀನ ವಿರೋಧಿ ಚಳವಳಿ ನಾಯಕತ್ವ ವಹಿಸಿದ ರಾಹುಲ್, ರೈತರೊಬ್ಬರ ಬೈಕ್​ನಲ್ಲಿ ಹಿಂಬದಿ ಸವಾರರಾಗಿ ಕುಳಿತು ರಾಷ್ಟ್ರಮಟ್ಟದಲ್ಲಿ ಗಮನಸೆಳೆದರು. ಈ ರೀತಿ ಹೋರಾಟದ ಹೊರತಾಗಿಯೂ 2012ರ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ದಕ್ಕಲಿಲ್ಲ.

# 2013ರಲ್ಲಿ ಪಕ್ಷದ ಉಪಾಧ್ಯಕ್ಷರಾದ ತರುವಾಯ ಎದುರಾದ ಬಹುತೇಕ ಪ್ರಮುಖ ಚುನಾವಣೆಗಳಲ್ಲಿ ಸೋಲೇ ಎದುರಾಯಿತು. ಕರ್ನಾಟಕ, ಪಂಜಾಬ್ ಗೆಲುವುಗಳು ಒಂದಿಷ್ಟು ಚೈತನ್ಯ ತುಂಬಿದರೂ, ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ಸ್ಥಾನವೂ ದಕ್ಕದಂತೆ 44 ಸ್ಥಾನಗಳಿಗೆ ಕಾಂಗ್ರೆಸ್ ಕುಸಿತ ಕಂಡಿತ್ತು.

# ಇತ್ತೀಚೆಗೆ ನಡೆದ ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ ಅಮೇಥಿಯಲ್ಲೂ ಸ್ಥಳೀಯ ಸಂಸ್ಥೆಗಳ ಮೇಲೆ ಪಾರಮ್ಯ ಹೊಂದುವುದು ಸಾಧ್ಯವಾಗಲಿಲ್ಲ.

ರಾಹುಲ್ ಆಯ್ಕೆಗೆ ಕಾಂಗ್ರೆಸ್ ನೀಡಿದ ಐದು ಕಾರಣ

ಸೋಷಿಯಲ್ ಮೀಡಿಯಾದಲ್ಲಿ ಪ್ರಭಾವ

ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಸಕ್ರಿಯವಾಗಿದ್ದಾರೆ. ಕಳೆದ ಒಂದು ವರ್ಷದಿಂದ ಟ್ವಿಟರ್​ನಲ್ಲಿ ಅವರ ಫಾಲೋವರ್ಸ್ ಸಂಖ್ಯೆ ತ್ವರಿತವಾಗಿ ಏರಿಕೆಯಾಗುತ್ತಿದೆ. ಅವರ ಟ್ವಿಟರ್ ಖಾತೆಗೆ ಪ್ರಸ್ತುತ 4.69 ಮಿಲಿಯನ್ ಫಾಲೋವರ್ಸ್ ಇದ್ದಾರೆ. ರಾಜಕೀಯ ವಿಚಾರ, ಬಿಜೆಪಿ ನಾಯಕರನ್ನು ಟೀಕಿಸಲು ರಾಹುಲ್ ಟ್ವಿಟರ್ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಅವರ ಪ್ರಭಾವ, ವರ್ಚಸ್ಸೂ ಹೆಚ್ಚಾಗಿದೆ.

ಪ್ರಖರ ಭಾಷಣ

2014ರ ಲೋಕಸಭಾ ಚುನಾವಣೆಯಲ್ಲಿ್ಲ ರಾಹುಲ್ ಗಾಂಧಿ ದೇಶಾದ್ಯಂತ ಹತ್ತಾರು ರ್ಯಾಲಿಗಳನ್ನು ಕೈಗೊಂಡು ಭಾಷಣ ಮಾಡಿದ್ದರು. ಆಗ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅಬ್ಬರದ ಭಾಷಣದ ನಡುವೆಯೂ ರಾಹುಲ್ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಮೋದಿ ಆರೋಪಕ್ಕೆ ಸಾರ್ವಜನಿಕ ಸಭೆಯಲ್ಲಿ ತಿರುಗೇಟು ನೀಡಿದ್ದರು.

ಪಕ್ಷದಲ್ಲಿ ಭರ್ಜರಿ ಬೆಂಬಲ

ರಾಹುಲ್ ಗಾಂಧಿಗೆ ಪಕ್ಷದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಎಲ್ಲ ಹಿರಿಯ ನಾಯಕರು ಬೆಂಬಲ ಸೂಚಿಸಿದ್ದಾರೆ. ದೇಶದ ಯುವ ಮತದಾರರನ್ನು ಸೆಳೆಯುವ ಉದ್ದೇಶದಿಂದ ರಾಹುಲ್​ಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಹಿತ ಹಲವು ನಾಯಕರು ವರ್ಷಗಳ ಹಿಂದೆಯೇ ಅಭಿಪ್ರಾಯಪಟ್ಟಿದ್ದಾರೆ.

ಗುಜರಾತ್​ನಲ್ಲಿ ಪ್ರಚಾರ

ಗುಜರಾತ್ ವಿಧಾನಸಭಾ ಚುನಾವಣೆಗಾಗಿ ರಾಹುಲ್ ಚುರುಕಿನ ಪ್ರಚಾರ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಹಾಗೂ ಗುಜರಾತ್​ನ ಬಿಜೆಪಿ ಸರ್ಕಾರ ವಿರುದ್ಧ ವಾಸ್ತವಾಂಶದ ಮೇಲೆ ಪ್ರಚಾರ ನಡೆಸುತ್ತಿದ್ದಾರೆ. ಇದು ಕಾಂಗ್ರೆಸ್ ರಾಜ್ಯ ಘಟಕಕ್ಕೆ ಚೈತನ್ಯ ನೀಡಿದ್ದರೆ, ಬಿಜೆಪಿಗೆ ಕಠಿಣ ಸವಾಲಾಗಿ ಪರಿಣಮಿಸಿದೆ.

ಬಿಜೆಪಿ ಲೋಪವೇ ಅಸ್ತ್ರ

ನೋಟು ನಿಷೇಧ, ಸರಕು ಮತ್ತು ಸೇವಾ ತೆರಿಗೆ, ಕೇಂದ್ರ ಸರ್ಕಾರದ ಹಲವು ಯೋಜನೆಗಳಲ್ಲಿನ ಲೋಪವನ್ನು ರಾಹುಲ್ ಸಮರ್ಥವಾಗಿ ಬಳಸಿಕೊಂಡು, ಬಿಜೆಪಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಜನಸಾಮಾನ್ಯರಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಅವರು ಆಡಳಿತಪಕ್ಷವನ್ನು ನಿರಂತರವಾಗಿ ಟೀಕಿಸುವ ಮೂಲಕ ಜನರಿಗೆ ಹತ್ತಿರವಾಗಲು ಯತ್ನಿಸುತ್ತಿದ್ದಾರೆ.

ರಾಹುಲ್ ಮುಂದಿರುವ ಸವಾಲು

# 2019ರ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸುವುದು. ಪಕ್ಷಕ್ಕೆ ಹೊಸ ಸ್ವರೂಪ ನೀಡಿ ತಳಮಟ್ಟದಿಂದ ಬದಲಾವಣೆ ತರಬೇಕಿದೆ.

# ಹಿರಿಯ ಹಾಗೂ ಯುವ ನಾಯಕರ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ರಾಹುಲ್ ಹಿರಿಯ ನಾಯಕರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪ ದೂರ ಮಾಡಬೇಕು.

# ಕಾಂಗ್ರೆಸ್ ವಂಶಪಾರಂಪರ್ಯ ಪಕ್ಷ ಎಂಬ ಹಣೆಪಟ್ಟಿ ಹೊಂದಿದೆ. ಇದರ ಹೊರತಾಗಿಯೂ ಪಕ್ಷವನ್ನು ಬಲಪಡಿಸಿ, ಮತ್ತೆ ಅಧಿಕಾರಕ್ಕೆ ತರುವುದು ಕಠಿಣ ಸವಾಲಾಗಿದೆ.

# 2014ರ ಲೋಕಸಭೆ ಚುನಾವಣೆಯಲ್ಲಿ ಆರಂಭವಾದ ಕಾಂಗ್ರೆಸ್ ಸೋಲು ವಿಧಾನಸಭಾ ಚುನಾವಣೆಗಳಲ್ಲೂ ಮುಂದುವರಿದಿದೆ. ಇದಕ್ಕೆ ಬ್ರೇಕ್ ಹಾಕಲು ಗುಜರಾತ್ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವುದು ಅನಿವಾರ್ಯ.

# ಲೋಕಸಭಾ ಚುನಾವಣೆಗೂ ಮುನ್ನ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ ಚುನಾವಣೆ ರಾಹುಲ್ ನಾಯಕತ್ವಕ್ಕೆ ಪರೀಕ್ಷೆ.

# ಉತ್ತರ ಪ್ರದೇಶ, ಬಿಹಾರ, ತಮಿಳುನಾಡು, ತೆಲಂಗಾಣ, ಪ.ಬಂಗಾಳ ದಲ್ಲಿ ಕಾಂಗ್ರೆಸ್ ಸ್ಥಿತಿ ದಯನೀಯವಾಗಿದ್ದು, ಇಲ್ಲಿ ಪಕ್ಷವನ್ನು ಮತ್ತೆ ಸಂಘಟಿಸುವ ಜವಾಬ್ದಾರಿಯಿದೆ.

ಶೆಹಜಾದ v/s ಶೆಹಜಾದ್!

‘ಪ್ರಜಾಸತ್ತಾತ್ಮಕ’ ರೀತಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ ಬೆನ್ನಲ್ಲೇ, ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಶೆಹಜಾದ್ ಪೂನಾವಾಲ ತಾನು ಕೂಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಒಂದಷ್ಟು ಸಂಚಲನ ಮೂಡಿಸಿತಾದರೂ, ಯಾವುದೇ ಪರಿಣಾಮ ಬೀರಲಿಲ್ಲ. ಶೆಹಜಾದ್ ಪೂನಾವಾಲ ನಡೆ ಹೇಳಿಕೆಗಷ್ಟೇ ಸೀಮಿತವಾಯಿತು. ಆಸಕ್ತಿದಾಯಕ ವಿಚಾರ ಎಂದರೆ, ಈ ಶೆಹಜಾದ್ ಪೂನಾವಾಲರ ಸಹೋದರ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾರ ಸೋದರ ಸಂಬಂಧಿಯನ್ನು ವಿವಾಹವಾಗಿದ್ದಾರೆ. ಹಾಗೆ ಶೆಹಜಾದ್ ಕೂಡ ನೆಹರು-ಗಾಂಧಿ ಕುಟುಂಬದ ಸಂಬಂಧಿ. 2008ರಿಂದ ಕಾಂಗ್ರೆಸ್ ಪಕ್ಷದಲ್ಲಿದ್ದು, ಹಲವು ಹೊಣೆಗಾರಿಕೆಗಳನ್ನು ನಿಭಾಯಿಸಿದವರು. ಸದ್ಯ ಮಹಾರಾಷ್ಟ್ರ ಕಾಂಗ್ರೆಸ್​ನ ರಾಜ್ಯ ಕಾರ್ಯದರ್ಶಿ. ಬಹಿರಂಗವಾಗಿ ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತುವ ಮೂಲಕ ಈಗ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಂತೂ ವಾಸ್ತವ.

ಸತತ ಸೋಲು ಕಂಡಿರುವ ಹಾಗೂ ಅನರ್ಹ ವ್ಯಕ್ತಿಯನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಇದೊಂದು ಕರಾಳದಿನ. ಇದು ಮೊಘಲ್ ವಂಶಪಾರಂಪರ್ಯ ಆಡಳಿತ ಬಿಂಬಿಸುತ್ತದೆ.

| ಶೆಹಜಾದ್ ಪೂನಾವಾಲಾ, ಮಹಾರಾಷ್ಟ್ರ ಕಾಂಗ್ರೆಸ್ ನಾಯಕ

 ಸೋಮವಾರ ಏನೇನಾಯ್ತು ..?

ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿ ಸೋಮವಾರ ಇಡೀ ದಿನ ತುರುಸಿನ ಚಟುವಟಿಕೆಗಳಿಗೆ ಸಾಕ್ಷಿಯಾಯಿತು. ಬೆಳಗ್ಗೆಯಿಂದಲೇ ಕಾಂಗ್ರೆಸ್​ನ ಹಿರಿಯ ನಾಯಕರು ಕಚೇರಿಗೆ ಆಗಮಿಸಿದ್ದರು. ಬೆಳಗ್ಗೆ 10 ಗಂಟೆಗೆ ಕಚೇರಿಗೆ ಬಂದ ರಾಹುಲ್ ಗಾಂಧಿ ಪಕ್ಷದ ಮುಖಂಡರೊಂದಿಗೆ ಆತ್ಮೀಯ ಮಾತುಕತೆ ನಡೆಸಿದರು. 11 ಗಂಟೆ ಸುಮಾರಿಗೆ ಅವರು ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ತಾಯಿ ಸೋನಿಯಾ ಗಾಂಧಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಆಶೀರ್ವಾದ ಪಡೆದರು. ಶೀಲಾ ದಿಕ್ಷಿತ್ ಸಹಿತ ಹಲವು ನಾಯಕರು ರಾಹುಲ್​ರನ್ನು ಆಲಂಗಿಸಿಕೊಂಡು ಶುಭಕೋರಿದರು.

90 ಸೆಟ್ ಪ್ರಸ್ತಾವನೆ

ರಾಹುಲ್ ಪರವಾಗಿ 90 ಸೆಟ್ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದವು. ಪ್ರತಿ ಸೆಟ್​ಗೆ 10 ಸೂಚಕರು ಸಹಿ ಮಾಡಿದ್ದಾರೆ. ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ಅಹಮದ್ ಪಟೇಲ್, ಮೋತಿಲಾಲ್ ವೋಹ್ರಾ, ಶೀಲಾ ದಿಕ್ಷಿತ್, ತರುಣ್ ಗೊಗೊಯ್, ಕಮಲ್​ನಾಥ್ ಮತ್ತಿತರರು ಸೂಚಕರಾಗಿ ಸಹಿ ಮಾಡಿದ್ದಾರೆ.

ರಾಹುಲ್ ಗಾಂಧಿ ರಜೆ ರಹಸ್ಯ!

ರಾಹುಲ್ ಗಾಂಧಿ ದೀರ್ಘ ರಜೆಗಳೂ ಜನರ ಗಮನಸೆಳೆದಿವೆ. 2015ರ ಫೆಬ್ರವರಿಯಲ್ಲಿ ಸಂಸತ್ ಅಧಿವೇಶನ ಆರಂಭವಾಗುತ್ತಿದ್ದ ಹಾಗೆ ವಿದೇಶಕ್ಕೆ ತೆರಳಿದ ರಾಹುಲ್ 56 ದಿನ ನಾಪತ್ತೆಯಾಗಿದ್ದರು. ಅವರೆಲ್ಲಿ ಹೋದರು, ಯಾಕೆ ಹೋದರು ಎಂಬಿತ್ಯಾದಿ ಪ್ರಶ್ನೆಗಳೇ ಎಲ್ಲರನ್ನೂ ಕಾಡಿದ್ದವು. ಕೊನೆಗೆ ಅಮೇಥಿಯಲ್ಲಿ ಮಿಸ್ಸಿಂಗ್ ಪೋಸ್ಟರ್​ಗಳೂ ಕಾಣಿಸಿಕೊಂಡಿದ್ದವು. ಕೊನೆಗೆ ಅವರು ಎಲ್ಲಿಂದ ವಿಮಾನ ಹತ್ತಿದರು, ಎಲ್ಲಿ ಇಳಿದರು ಎಂಬಿತ್ಯಾದಿ ವಿವರಗಳ ಸುದ್ದಿಗಳೂ ಪ್ರಸಾರವಾದವು. ಈ ವರ್ಷ ಆರಂಭದಲ್ಲಿ 11 ದಿನಗಳ ರಜೆ ತೆಗೆದುಕೊಂಡು ರಾಹುಲ್ ವಿದೇಶಕ್ಕೆ ಹೋಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ವ್ಯಾಪಕ ಟೀಕೆಗೊಳಗಾದ ಕಾರಣ ಅವರದನ್ನು ರದ್ದುಗೊಳಿಸಿದ್ದರು.

ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಿದ್ದವರು

ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಜ್ಯೋತಿರಾದಿತ್ಯ ಸಿಂಧಿಯಾ, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಹಿಮಾಚಲ ಸಿಎಂ ವೀರಭದ್ರ ಸಿಂಗ್, ಪುದುಚೇರಿ ಸಿಎಂ ನಾರಾಯಣ ಸ್ವಾಮಿ, ಮೇಘಾಲಯ ಸಿಎಂ ಮುಕುಲ್ ಸಂಗ್ಮಾ, ಮಿಜೋರಾಂ ಸಿಎಂ ಲಾಲ್ ತನ್ಹಾವಾಲ, ಹಿರಿಯ ನಾಯಕರಾದ ಎ.ಕೆ.ಆಂಟನಿ, ಅಹ್ಮದ್ ಪಟೇಲ್, ಗುಲಾಂ ನಬಿ ಆಜಾದ್ ಸೇರಿ ಪ್ರದೇಶ ಕಾಂಗ್ರೆಸ್​ನ ರಾಜ್ಯ ಅಧ್ಯಕ್ಷರು, ಹಿರಿಯ ನಾಯಕರು.

ಸೋನಿಯಾ, ಪ್ರಿಯಾಂಕಾ ಗೈರು

ಕಾಂಗ್ರೆಸ್​ನ ಹಿರಿಯ ನಾಯಕರು, ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ಆಡಳಿತ ವಿರುವ ರಾಜ್ಯಗಳ ಸಿಎಂಗಳು ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು. ಆದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಗೈರಾಗಿದ್ದರು. ಇದು ಹಲವು ರೀತಿಯ ಚರ್ಚೆಗೂ ಕಾರಣವಾಗಿದೆ.

ಇಡೀ ದೇಶಕ್ಕೆ ಕಾಂಗ್ರೆಸ್ ಒಂದು ಹೊರೆಯಾಗಿ ಪರಿಣಮಿಸಿದೆ. ರಾಹುಲ್ ಗಾಂಧಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಈ ಹೊರೆ ಇಳಿಕೆಯಾದರೆ ಸಂತೋಷ.

| ಯೋಗಿ ಆದಿತ್ಯನಾಥ ಉತ್ತರ ಪ್ರದೇಶ ಮುಖ್ಯಮಂತ್ರಿ

ರಾಹುಲ್ ಗಾಂಧಿ ಕಾಂಗ್ರೆಸ್​ನ ಡಾರ್ಲಿಂಗ್. ಪಕ್ಷದ ಪರಂಪರೆಯನ್ನು ಅವರು ಮುನ್ನಡೆಸಿಕೊಂಡು ಹೋಗಲಿದ್ದಾರೆ.

| ಮನಮೋಹನ್ ಸಿಂಗ್ ಮಾಜಿ ಪ್ರಧಾನಿ

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಪಕ್ಷದ ಯಾವುದೇ ಅಭ್ಯರ್ಥಿ ಸ್ಪರ್ಧಿಸಬಹುದು. ಪ್ರಜಾಪ್ರಭುತ್ವದ ಅಡಿಯಲ್ಲೇ ಅಧ್ಯಕ್ಷರ ಆಯ್ಕೆ ನಡೆಯುತ್ತಿದೆ. ಪಕ್ಷದ ಆಂತರಿಕ ವಿಚಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತಲೆಹಾಕುವ ಅಗತ್ಯವಿಲ್ಲ

| ಸಿದ್ದರಾಮಯ್ಯ ಮುಖ್ಯಮಂತ್ರಿ

ಔರಂಗಜೇಬ್ ರಾಜ್ಯ!

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಔರಂಗಜೇಬ್ ಆಡಳಿತ ಎಂದು ವ್ಯಂಗ್ಯ ಮಾಡಿದ್ದಾರೆ. ಕಾಂಗ್ರೆಸ್​ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂಬುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಮೋದಿ, ಕಾಂಗ್ರೆಸ್ ಔರಂಗಜೇಬ್ ರಾಜ್ಯವಾಗಿದೆ. ಇದಕ್ಕಾಗಿ ಶುಭಾಶಯಗಳು. ನಮಗೆ ದೇಶದ ಹಿತಾಸಕ್ತಿಯೇ ಮುಖ್ಯ. 125 ಕೋಟಿ ಜನರೇ ನಮ್ಮ ಹೈಕಮಾಂಡ್ ಎಂದು ಗುಜರಾತ್ ರ್ಯಾಲಿಯಲ್ಲಿ ಅವರು ಹೇಳಿದ್ದಾರೆ.

ಮಣಿಶಂಕರ್ ಹೇಳಿಕೆಗೆ ತಿರುಗೇಟು: ರಾಹುಲ್ ಆಯ್ಕೆಯನ್ನು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಮೊಘಲರ ಉದಾಹರಣೆ ನೀಡುವ ಮೂಲಕ ಸಮರ್ಥಿಸಿಕೊಂಡಿದ್ದರು. ಜಹಾಂಗಿರ್ ಬಳಿಕ ಶಹಜಹಾನ್ ರಾಜನಾದ. ಆಗ ಯಾವುದಾದರೂ ಚುನಾವಣೆ ನಡೆದಿತ್ತೇ? ಶಹಜಹಾನ್ ಬಳಿಕ ಔರಂಗ್​ಜೇಬ್ ಅಧಿಕಾರಕ್ಕೆ ಬಂದ ಆಗ ಚುನಾವಣೆ ನಡೆದಿತ್ತೇ? ರಾಜನ ವಂಶಸ್ಥರೇ ಉತ್ತರಾಧಿಕಾರಿಯಾಗಲಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರಾಗಿ ಸೋನಿಯಾ ಸಾಧನೆ

ಮಧ್ಯಪ್ರದೇಶ, ರಾಜಸ್ಥಾನ, ದೆಹಲಿಗಳಲ್ಲಿ ಪಕ್ಷ ಹ್ಯಾಟ್ರಿಕ್ ಸಾಧನೆ ಮಾಡಿತು. 3 ಅವಧಿಗೆ ಕಾಂಗ್ರೆಸ್ ಸರ್ಕಾರ ಅಲ್ಲಿ ರಾಜ್ಯವನ್ನಾಳಿತು. ಆದರೆ, ಭಿನ್ನಮತ ಶಮನಗೊಳಿಸುವುದು ಕಷ್ಟವೆನಿಸಿತು. ಶರದ್ ಪವಾರ್, ಪಿ.ಎ.ಸಂಗ್ಮಾ ಅವರಂತಹ ನಾಯಕರು ಪಕ್ಷ ತ್ಯಜಿಸಿ ಹೊಸ ಪಕ್ಷ ಸ್ಥಾಪಿಸಿಕೊಂಡರು. ಇನ್ನೊಂದೆಡೆ, 1999ರಲ್ಲಿ ವಾಜಪೇಯಿ ಸರ್ಕಾರವನ್ನು ಪತನ ಗೊಳಿಸುವಲ್ಲಿ ಜಯಲಲಿತಾ ಜತೆ ರಾಜಕೀಯ ಮೈತ್ರಿ ಸಾಧಿಸಿದ್ದು ಕೂಡ ಗಮನಾರ್ಹ. ಇದರ ಬಳಿಕ ವಾಜಪೇಯಿ ನೇತೃತ್ವದ ಸರ್ಕಾರ ಪುನಃ ಅಸ್ತಿತ್ವಕ್ಕೆ ಬಂತು. ಆದಾಗ್ಯೂ, ನೆಹರು-ಗಾಂಧಿ ಕುಟುಂಬದ ಕೊಂಡಿಯಾಗಿ ಪಕ್ಷವನ್ನು ಏಕಸೂತ್ರದಲ್ಲಿ ಮುನ್ನಡೆಸುವ ನಾಯಕಿಯಾಗಿ ಸೋನಿಯಾ ಕಾಣಿಸಿಕೊಂಡರು. ಅರ್ಜುನ್ ಸಿಂಗ್, ಪ್ರಣಬ್ ಮುಖರ್ಜಿ, ಎ.ಕೆ.ಆಂಟನಿ, ಜನಾರ್ದನ ದ್ವಿವೇದಿ, ದಿಗ್ವಿಜಯ್ ಸಿಂಗ್, ಅಹ್ಮದ್ ಪಟೇಲ್ ಮುಂತಾದವರ ತಂಡವನ್ನು ಕಟ್ಟಿಕೊಂಡರು. ಅವರ ಈ ಪ್ರಯತ್ನದ ಫಲವೇ 2004, 2009ರ ಚುನಾವಣೆಯ ಗೆಲುವು. 2014ರ ನಂತರದಲ್ಲಿ ಈ ತಂಡದ ಪ್ರಯತ್ನ ಕೈಗೂಡಿಲ್ಲ.

ಸುದೀರ್ಘ ಅವಧಿಯ ಅಧ್ಯಕ್ಷರೆಂಬ ದಾಖಲೆ

ಕಾಂಗ್ರೆಸ್ ಅಧ್ಯಕ್ಷರಾಗಿ 19 ವರ್ಷ ಪೂರೈಸಿರುವ ಸೋನಿಯಾ ಗಾಂಧಿ ಸುದೀರ್ಘ ಅವಧಿಯ ಅಧ್ಯಕ್ಷರೆಂಬ ಖ್ಯಾತಿಗೆ ಭಾಜನರಾಗಿದ್ದಾರೆ. 1998ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೇರುವ ಸಂದರ್ಭದಲ್ಲಿ ಸೋನಿಯಾ ಗಾಂಧಿಗೂ ರಾಜಕೀಯದ ಅನುಭವ ಇರಲಿಲ್ಲ. 1991ರಲ್ಲಿ ರಾಜೀವ್ ಗಾಂಧಿ ಹತ್ಯೆ ಆದ ಸಂದರ್ಭದಲ್ಲಿ, ಪಕ್ಷದ ಅಧ್ಯಕ್ಷಗಾದಿ ಒಲಿದು ಬಂದರೂ ಅದನ್ನು ಸೋನಿಯಾ ನಯವಾಗಿಯೇ ನಿರಾಕರಿಸಿದ್ದರು. 1995ರಲ್ಲಿ ಮತ್ತೊಮ್ಮೆ ಅಧ್ಯಕ್ಷ ಪಟ್ಟದ ಆಹ್ವಾನ ಬಂತಾದರೂ, ಸೋನಿಯಾ ಅದನ್ನು ತಿರಸ್ಕರಿಸಿದ್ದರು. ಕೊನೆಗೆ 1997ರ ಡಿಸೆಂಬರ್​ನಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗುವತ್ತ ಒಲವು ತೋರಿದರು. 1998ರ ಲೋಕಸಭೆ ಚುನಾವಣೆಯ ಪ್ರಚಾರದಲ್ಲೂ ಭಾಗಿಯಾದರು. ಅದರಲ್ಲಿ ಪಕ್ಷ ಸೋತಿತ್ತು. ಆಗ ಸೋಲಿಗೆ ಸೀತಾರಾಂ ಕೇಸರಿ ಬಣವೇ ಕಾರಣ ಎಂದು ದೂಷಿಸಲಾಗಿತ್ತು. ಕೊನೆಗೆ 1998ರ ಮಾ.14ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಣಯವನ್ನು ಅಂಗೀಕರಿಸಿ ಅಧ್ಯಕ್ಷ ಸ್ಥಾನದಿಂದ ಸೀತಾರಾಂ ಕೇಸರಿಯನ್ನು ಕೆಳಕ್ಕಿಳಿಸಿತು. ಬಳಿಕ ಸೋನಿಯಾ ಗಾಂಧಿ ಅಧ್ಯಕ್ಷರಾದರು.

Leave a Reply

Your email address will not be published. Required fields are marked *

Back To Top