ಅಪಾರ ಕೀರ್ತಿ ಮೆರೆದು ಅಗಲಿದ ಪ್ರತಿಭೆ

ಬೆಂಗಳೂರು: ಸುಮಾರು 50 ಸಿನಿಮಾಗಳಿಗೆ ನಾಯಕನಾಗಿ ಹಾಗೂ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಹಿರಿಯ ಕಲಾವಿದ, ಬಹುಭಾಷಾ ನಟ ಆರ್.ಎನ್. ಸುದರ್ಶನ್ (78) ತೀವ್ರ ಅನಾರೋಗ್ಯದಿಂದಾಗಿ ಶುಕ್ರವಾರ ವಿಧಿವಶರಾದರು.

ಬೆಂಗಳೂರಿನಲ್ಲಿ ನೆಲೆಸಿದ್ದ ಅವರು ಕಾಲುಜಾರಿ ಬಿದ್ದು ಪೆಟ್ಟಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೂತ್ರಪಿಂಡದ ವೈಫಲ್ಯವೂ ಅವರನ್ನು ಬಳಲಿಸಿತ್ತು. ಚಿಕಿತ್ಸೆ ಫಲಕಾರಿಯಾಗಲಿಲ್ಲ. ಇದರೊಂದಿಗೆ ಕನ್ನಡ ಚಿತ್ರರಂಗದ ದಿಗ್ಗಜರಲ್ಲೊಬ್ಬರಾಗಿದ್ದ ಆರ್. ನಾಗೇಂದ್ರ ರಾಯರ ಪುತ್ರತ್ರಯರನ್ನೂ (ಆರ್.ಎನ್. ಜಯಗೋಪಾಲ್, ಆರ್.ಎನ್. ಕೃಷ್ಣಪ್ರಸಾದ್ ಮತ್ತು ಆರ್.ಎನ್. ಸುದರ್ಶನ್) ಚಿತ್ರರಂಗ ಕಳೆದುಕೊಂಡಂತಾಗಿದೆ.

ಸುದರ್ಶನ್ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಸಂಜೆ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಅವರ ಬಂಧು-ಬಳಗ ಹಾಗೂ ಅಭಿಮಾನಿಗಳು ಮತ್ತು ವಿವಿಧ ಕ್ಷೇತ್ರದ ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಹರಿಶ್ಚಂದ್ರ ಘಾಟ್​ನ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಕಲಾವಿದ ಕುಟುಂಬ: ಖ್ಯಾತ ನಟ, ನಿರ್ವಪಕ, ನಿರ್ದೇಶಕ, ಚಿತ್ರಕಥೆಗಾರ, ಸಂಗೀತ ಸಂಯೋಜಕರೂ ಆಗಿದ್ದ ಆರ್.ಎನ್. ನಾಗೇಂದ್ರರಾಯರಂ ಐದು ದಶಕದ ಪಯಣ ನಾಯಕನಾಗಿ, ಖಳನಾಯಕನಾಗಿ ಸುದರ್ಶನ್ ಪ್ರಸಿದ್ಧರಾಗಿದ್ದರು. ಅವರು ಸುಮಾರು 60 ಸಿನಿಮಾಗಳಲ್ಲಿ ನಾಯಕನಾಗಿ ಸಿನಿಪ್ರಿಯರನ್ನು ರಂಜಿಸಿದ್ದರು. 5 ದಶಕಗಳ ಕಾಲ ಚಿತ್ರರಂಗದಲ್ಲಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ 250ಕ್ಕೂ ಹೆಚ್ಚು ಸಿನಿಮಾಗಳಿಗೆ ಬಣ್ಣ ಹಚ್ಚಿದ ಕೀರ್ತಿ ಅವರದ್ದು. ‘ನಗುವ ಹೂವು‘, ‘ಮರೆಯದ ದೀಪಾವಳಿ‘, ‘ಮರಿಯಾ ಮೈ ಡಾರ್ಲಿಂಗ್‘, ‘ಪಗಡೈ ಪಮಿರೆಂಡು‘, ‘ನಾಯಗನ್‘, ‘ಮಠ‘, ‘ಸೂಪರ್’ ಮುಂತಾದವು ಅವರ ನಟನೆಯ ಪ್ರಮುಖ ಚಿತ್ರಗಳು. ತಮಿಳಿನ ‘ಮರಗತ ವೀಳೈ‘, ‘ಮೈ ಡಿಯರ್ ಭೂತಂ’ ಧಾರಾವಾಹಿಗಳಲ್ಲೂ ಸುದರ್ಶನ್ ನಟಿಸಿದ್ದರು. ಇತ್ತೀಚೆಗೆ ಕನ್ನಡದ ‘ಅಗ್ನಿ ಸಾಕ್ಷಿ’ ಧಾರಾವಾಹಿಯಲ್ಲಿ ಸ್ವಾಮೀಜಿ ಪಾತ್ರದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದರು. 2009-10ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ‘ಡಾ. ರಾಜ್​ಕುಮಾರ್’ ಪ್ರಶಸ್ತಿಯ ಗೌರವ ಅವರಿಗೆ ಸಂದಿತ್ತು.

ಅಪಾರ ಕೀರ್ತಿಯ ವೀರಪ್ರವೇಶ

ನಾಯಕರಾಗಿ ಚಿತ್ರರಂಗಕ್ಕೆ ಪ್ರವೇಶಿಸಿದಾಗ ಸುದರ್ಶನ್​ಗೆ 21 ವರ್ಷ.‘ವಿಜಯನಗರದ ವೀರಪುತ್ರ’ ಚಿತ್ರದ ನಾಯಕನ ಪಾತ್ರದ ಮೂಲಕ ಅವರು ಚಂದನವನಕ್ಕೆ ವೀರಾವೇಶದಿಂದಲೇ ಪ್ರವೇಶಿಸಿದ್ದರು. ವಿಶೇಷ ಎಂದರೆ, ಈ ಚಿತ್ರಕ್ಕೆ ಅವರ ತಂದೆ ನಾಗೇಂದ್ರ ರಾಯರದ್ದೇ ನಿರ್ಮಾಣ ಮತ್ತು ನಿರ್ದೇಶನ. ಕಥೆ-ಚಿತ್ರಕಥೆ ಜತೆಗೆ ಸಾಹಿತ್ಯವನ್ನು ರಚಿಸಿದ್ದು ಸಹೋದರ ಆರ್.ಎನ್. ಜಯಗೋಪಾಲ್. ಅಷ್ಟೇ ಅಲ್ಲ, ಕ್ಯಾಮರಾ ಕೈಚಳಕ ತೋರಿದ್ದು ಮತ್ತೊಬ್ಬ ಸಹೋದರ ಆರ್.ಎನ್. ಕೃಷ್ಣಪ್ರಸಾದ್. ಈ ಚಿತ್ರದಲ್ಲಿ ಸುದರ್ಶನ್​ಗೆ ಜೋಡಿಯಾಗಿ ಬಿ. ಸರೋಜಾದೇವಿ ಅಭಿನಯಿಸಿದ್ದರು. ಜತೆಗೆ ಪ್ರಮುಖಪಾತ್ರದಲ್ಲಿ ಕಲ್ಯಾಣ್​ಕುಮಾರ್, ಉದಯ್ಕುಮಾರ್ ಅಭಿನಯಿಸಿದ್ದರು. ‘ವಿಜಯನಗರದ ವೀರಪುತ್ರ’ ಸಿನಿಮಾ ಜನಮೆಚ್ಚುಗೆಗೆ ಪಾತ್ರವಾಗುವ ಜತೆಗೆ ಅದರಲ್ಲಿನ ಅಪಾರಕೀರ್ತಿ ಮೆರೆದ ಭವ್ಯ ನಾಡಿದು.. ಗೀತೆ ಜನಮನ ಸೆಳೆಯುವ ಮೂಲಕ ಸುದರ್ಶನ್​ಗೂ ಖ್ಯಾತಿ ತಂದುಕೊಟ್ಟಿತು. ಇದರಲ್ಲಿ ವಿಜಯನಗರದ ವೀರಪುತ್ರನಾಗಿ ಸುದರ್ಶನ್ ಅಭಿನಯಿಸಿದರೆ, ಆತನ ತಂದೆಯ ಪಾತ್ರದಲ್ಲಿ ನಾಗೇಂದ್ರರಾಯರೇ ಅಭಿನಯಿಸಿದ್ದರು.

ಗಾಯಕನಾಗಿಯೂ ಗಮನ ಸೆಳೆದರು

‘ಶುಭಮಂಗಳ’ ಚಿತ್ರದ ‘ಹೂವೊಂದು ಬಳಿಬಂದು ತಾಕಿತು ನನ್ನೆದೆಯ…’ ಹಾಡು ಇಂದಿಗೂ ಕೇಳುಗರ ಕಿವಿಗೆ ಇಂಪೆರೆಯುತ್ತಿದೆ. ವಿಜಯ್ ಭಾಸ್ಕರ್ ರಾಗ ಸಂಯೋಜಿಸಿದ್ದ ಆ ಗೀತೆಗೆ ಸುದರ್ಶನ್ ಧ್ವನಿ ನೀಡಿದ್ದರು. ‘ನಗುವ ಹೂವು’ ಚಿತ್ರದ ‘ಇರಬೇಕು, ಇರಬೇಕು..’ ಸೇರಿ ಇನ್ನೂ ಕೆಲವು ಗೀತೆಗಳನ್ನು ಅವರು ಹಾಡಿದ್ದರು.

ಅವಕಾಶ ನೀಡದ್ದಕ್ಕೆ ಆಕ್ರೋಶ

ಕಲಾವಿದರು ಮೃತಪಟ್ಟಾಗ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಅಂತಿಮ ದರ್ಶನಕ್ಕಿಡುವುದು ವಾಡಿಕೆ. ಮಂಗಳವಾರ ನಿಧನರಾದ ಪತ್ರಕರ್ತೆ ಗೌರಿ ಲಂಕೇಶ್ ಅವರ ಶರೀರವನ್ನೂ ಇರಿಸಲಾಗಿತ್ತು. ಸುದರ್ಶನ್ ಅಂತಿಮ ದರ್ಶನಕ್ಕೆ ಇಲ್ಲಿ ಸಚಿವೆ ಉಮಾಶ್ರೀ ಅನುಮತಿ ನಿರಾಕರಿಸಿದ್ದು ವಿವಾದವಾಗಿತ್ತು. ಈ ಸುದ್ದಿ ಸಿಎಂ ಸಿದ್ದರಾಮಯ್ಯವರೆಗೂ ತಲುಪಿತು. ಅಂತಿಮವಾಗಿ ಸ್ವತಃ ಸಿಎಂ ಉಮಾಶ್ರೀ ಅವರಿಗೆ ಕರೆ ಮಾಡಿ ಕಲಾಕ್ಷೇತ್ರ ಆವರಣದಲ್ಲಿ ಅವಕಾಶ ನೀಡಲು ಸೂಚನೆ ನೀಡಿದರು. ಸಚಿವರು ಆ ರೀತಿ ಹೇಳಿಲ್ಲ. ಕಲಾವಿದರಲ್ಲಿ ಸಂಪರ್ಕದ ಕೊರತೆಯ ಕಾರಣಕ್ಕೆ ಹೀಗಾಗಿದೆ. ಸುದರ್ಶನ್ ಚಿಕಿತ್ಸೆಗೆ 2 ಲಕ್ಷ ರೂ. ವೆಚ್ಚವಾಗಿದ್ದು, ಸಂಪೂರ್ಣವಾಗಿ ಸರ್ಕಾರದಿಂದ ಭರಿಸಲಾಗುತ್ತದೆ. ಇದೆಲ್ಲ ಸಚಿವರ ಸ್ವಇಚ್ಛೆಯಿಂದ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

ನಾನು ಕದನ ಚಿತ್ರದಲ್ಲಿ ಸುದರ್ಶನ್ ಜತೆ ನಟಿಸಿದ್ದೆ. ಚೆನ್ನೈನಲ್ಲಿ ಒಬ್ಬರ ಮೋಸದಿಂದಾಗಿ ತಾವು ಮನೆ ಕಳೆದುಕೊಂಡಿದ್ದನ್ನು ನನ್ನ ಹತ್ತಿರ ಹೇಳಿಕೊಂಡಿದ್ದರು, ಆ ನಿಟ್ಟಿನಲ್ಲಿ ಅವರಿಗೆ ಸಹಾಯವನ್ನೂ ಮಾಡಿದ್ವಿ. ಮೊನ್ನೆ ನನ್ನ ಪುತ್ರನಿಗೆ ತೊಂದರೆಯಾದಾಗ ಅವರು ಕರೆ ಮಾಡಿ ವಿಚಾರಿಸಿದ್ದರು. ಈಗ ಅವರಿಲ್ಲ ಎಂಬುದೇ ಬೇಸರ.

| ಜಗ್ಗೇಶ್ ನಟ

ಸುದರ್ಶನ್, ನಾನು ಹಾಗೂ ಅವರ ಸಹೋದರರು ಚೆನ್ನೈನಲ್ಲಿ ಆಗಾಗ ಒಗ್ಗೂಡಿ ನಾಟಕ ಮಾಡುತ್ತಿದ್ದೆವು. ಅವರು ಒಬ್ಬ ಒಳ್ಳೆಯ ಕಲಾವಿದ. ಅದೃಷ್ಟ ಅವರನ್ನು ಕೈಬಿಟ್ಟಿತೋ ಅಥವಾ ಚಿತ್ರರಂಗದವರು ಅವರ ಕೈ ಹಿಡಿಯಲಿಲ್ಲವೋ ಗೊತ್ತಿಲ್ಲ. ಕ್ರಮೇಣ ಅವರು ಕಷ್ಟಸಹಿಷ್ಣುವಾಗಿಯೇ ಬದುಕಿದರು.

| ಸಿ.ವಿ. ಶಿವಶಂಕರ್ ನಿರ್ದೇಶಕ

ಪುತ್ರ ಆರ್.ಎನ್. ಸುದರ್ಶನ್ ಕೂಡ ನಟರಷ್ಟೇ ಅಲ್ಲದೆ ಗಾಯಕರಾಗಿಯೂ ಹೆಸರು ಮಾಡಿದ್ದರು. ಜತೆಗೆ ಚಿತ್ರ ನಿರ್ವಣದಲ್ಲಿಯೂ ತೊಡಗಿಸಿಕೊಂಡಿದ್ದರು. ಸುದರ್ಶನ್ ಅವರ ಸಹೋದರರಾಗಿದ್ದ ಆರ್.ಎನ್. ಜಯಗೋಪಾಲ್ ಹಾಗೂ ಆರ್.ಎನ್. ಕೃಷ್ಣಪ್ರಸಾದ್ ಕೂಡ ಚಿತ್ರರಂಗದಲ್ಲಿ ಪ್ರಸಿದ್ಧರಾಗಿದ್ದರು.

ಜಯಗೋಪಾಲ್ ಚಿತ್ರಸಾಹಿತಿಯಾಗಿ ಹೆಸರು ಮಾಡಿದರೆ, ಕೃಷ್ಣಪ್ರಸಾದ್ ಕ್ಯಾಮರಾಮನ್ ಆಗಿ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದರು. ಸುದರ್ಶನ್​ಗೂ ಮೊದಲೇ ಜಯಗೋಪಾಲ್ ಹಾಗೂ ಕೃಷ್ಣಪ್ರಸಾದ್ ಇಹಲೋಕ ತ್ಯಜಿಸಿದ್ದಾರೆ. ಆ ಮೂಲಕ ಕನ್ನಡ ಚಿತ್ರರಂಗದ ಮುಕುಟಮಣಿಯಂತಿದ್ದ ಆರೆನ್ನಾರ್ ಕುಟುಂಬದ ಕೊಂಡಿ ಕಳಚಿಹೋದಂತಾಗಿದೆ. ಸುದರ್ಶನ್ ಅವರ ಪತ್ನಿ ಶೈಲಶ್ರೀ ಕೂಡ ಕಲಾವಿದೆಯಾಗಿದ್ದು, ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

Leave a Reply

Your email address will not be published. Required fields are marked *