ಅಪಾಯದ ಮುನ್ಸೂಚನೆ

ಭಾರತವು ಹಲವು ವರ್ಷಗಳಿಂದಲೂ ಭಯೋತ್ಪಾದಕ-ಸಂತ್ರಸ್ತ ದೇಶ ಎಂಬುದು ಗೊತ್ತಿರುವ ಸಂಗತಿಯೇ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದದ ಸೋಗಿನಲ್ಲಿ ನಡೆಯುತ್ತಿರುವ ಕುಕೃತ್ಯಗಳು, ಹಿಂಸಾಚಾರಗಳು, ವಾಣಿಜ್ಯ ನಗರಿ ಮುಂಬೈನ ವಿವಿಧೆಡೆಗಳಲ್ಲಿ ನಡೆದ ಬಾಂಬ್ ಸ್ಪೋಟಗಳು ಸೇರಿದಂತೆ ಇದಕ್ಕೆ ಹತ್ತು ಹಲವು ನಿದರ್ಶನಗಳಿವೆ. ಇಷ್ಟುದಿನವೂ ಇಂಥ ಕುಕೃತ್ಯಗಳಿಗೆ ಭಾರತದ ಸಾಂಪ್ರದಾಯಿಕ ಶತ್ರು ಪಾಕಿಸ್ತಾನದ ಕುಮ್ಮಕ್ಕು ಇರುತ್ತಿತ್ತು. ಆದರೀಗ ಈ ನಿಟ್ಟಿನಲ್ಲಿ ಕುಖ್ಯಾತ ಉಗ್ರಸಂಘಟನೆ ಐಸಿಸ್​ನ ರಂಗಪ್ರವೇಶವೂ ಆಗಿರುವುದು ನಿರ್ಲಕ್ಷಿಸುವಂಥ ಸಂಗತಿಯಲ್ಲ. ಉತ್ತರ ಪ್ರದೇಶದ ಲಖನೌನ ಠಾಕೂರ್​ಗಂಜ್ ಎಂಬಲ್ಲಿ ಅಡಗಿಕೊಂಡಿದ್ದ ಶಂಕಿತ ಐಸಿಸ್ ಉಗ್ರನೊಬ್ಬನನ್ನು ಭಯೋತ್ಪಾದನಾ ನಿಗ್ರಹದಳದ ಸಿಬ್ಬಂದಿ ನಿರಂತರ ಕಾರ್ಯಾಚರಣೆಯ ಬಳಿಕ ಹೊಡೆದುರುಳಿಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಲದಿನಗಳ ಹಿಂದೆ ಭೋಪಾಲ್-ಉಜ್ಜೈನಿ ರೈಲಿನಲ್ಲಿ ಸಂಭವಿಸಿದ ಸ್ಪೋಟಕ್ಕೂ, ಹತನಾದ ಉಗ್ರನಿಗೂ ಸಂಬಂಧವಿರಬಹುದು ಎನ್ನಲಾಗುತ್ತಿದೆ. ಭಾರತಕ್ಕೆ ಐಸಿಸ್ ಪ್ರವೇಶದ ಅಪಾಯದ ಬಗ್ಗೆ ದೇಶದ ಗುಪ್ತಚರ ಸಂಸ್ಥೆ ಸಾಕಷ್ಟು ಮುಂಚೆಯೇ ಎಚ್ಚರಿಕೆ ನೀಡಿತ್ತು; ಉತ್ತರಪ್ರದೇಶದಲ್ಲಿ ಈಗ ಸಂಭವಿಸಿರುವ ಬೆಳವಣಿಗೆ ಇದಕ್ಕೆ ಪುಷ್ಟಿನೀಡುವಂತಿದೆ. ಪ್ರಸ್ತುತ ಚುನಾವಣಾ ಕಾವಿರುವ ಉತ್ತರ ಪ್ರದೇಶದಲ್ಲಿ ‘ತೀವ್ರ ಕಟ್ಟೆಚ್ಚರ’ದ ಘೊಷಣೆಯಾಗಿದೆ.

ಕಾಶ್ಮೀರ ಹೊರತುಪಡಿಸಿದರೆ, ದೇಶದ ಇತರಡೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಕಮ್ಮಿಯಾಗಿವೆ, ತಹಬಂದಿಗೆ ಬಂದಿವೆ ಎಂದು ಸಮಾಧಾನಪಟ್ಟುಕೊಳ್ಳುವಷ್ಟರಲ್ಲೇ ಇಂಥ ಬೆಳವಣಿಗೆಯಾಗಿರುವುದು ಆತಂಕಕಾರಿ ಸಂಗತಿ. ಹಾಗೆ ನೋಡಿದರೆ, ಐಸಿಸ್ ಸಂಘಟನೆ ಹುಟ್ಟಿ ಬಹಳ ವರ್ಷಗಳೇನೂ ಆಗಿಲ್ಲ. ಇಷ್ಟಾಗಿಯೂ ಅಲ್ಪಾವಧಿಯಲ್ಲೇ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ತಲ್ಲಣ ಹುಟ್ಟಿಸುವಷ್ಟರ ಮಟ್ಟಿಗೆ ಅದು ಬಲಾಢ್ಯವಾಗಿದೆ. ಆದರೆ, ಇರಾಕ್ ಸೇನೆಯ ಕಾರ್ಯಾಚರಣೆಯಿಂದಾಗಿ ಅಲ್ಲಿ ಸೋಲೊಪ್ಪಿಕೊಳ್ಳಬೇಕಾಗಿ ಬಂದ ಐಸಿಸ್, ಭಾರತ ಸೇರಿದಂತೆ ಇತರ ದೇಶಗಳಲ್ಲಿ ಕಾರ್ಯಾಚರಣೆ ವಿಸ್ತರಣೆಗೆ ಹಪಹಪಿಸುತ್ತಿರುವುದು ನಿಜ. ಉತ್ತರ ಪ್ರದೇಶದಲ್ಲಿ ನಡೆದಿರುವ ಸ್ಫೋಟ ಕೇವಲ ಸ್ಯಾಂಪಲ್ ಅಷ್ಟೇ; ನಿಜವಾದ ಆತಂಕ ಮುಂದೆ ಕಾದಿದೆ ಎಂಬರ್ಥದ ಐಸಿಸ್ ಧಾರ್ಷ್ಯrವನ್ನು ಆರಂಭದಲ್ಲೇ ಚಿವುಟದಿದ್ದರೆ, ಅದು ಹೆಮ್ಮರವಾಗಿ ಬೆಳೆದಾಗ ನಿಗ್ರಹ ಕಷ್ಟವಾದೀತು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಮಿಕ್ಕ ಭಯೋತ್ಪಾದಕ ಸಂಘಟನೆಗಳಿಗೆ ಹೋಲಿಸಿದರೆ, ಐಸಿಸ್ ಕಾರ್ಯತಂತ್ರ ಬೇರೆಯದೇ ರೀತಿಯದ್ದು. ಒಂದಿಡೀ ಪ್ರದೇಶವನ್ನು ತಮ್ಮ ಹತೋಟಿಗೆ ತೆಗೆದುಕೊಂಡು ದಬ್ಬಾಳಿಕೆ, ಕುಕೃತ್ಯ ನಡೆಸುವುದರ ಜತೆಗೆ, ಜನಮಾನಸದಲ್ಲಿ ತಲ್ಲಣ ಹುಟ್ಟುಹಾಕುವುದು ಈ ಸಂಘಟನೆಯ ವೈಶಿಷ್ಟ್ಯ ಉತ್ತರಪ್ರದೇಶದಲ್ಲಿ ಉಗ್ರರ ಮೇಲಿನ ದಾಳಿಯ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾದ ಲ್ಯಾಪ್​ಟಾಪ್ ಹೊರಗೆಡಹಿರುವ ಮಾಹಿತಿಯಂತೆ, ಐಸಿಸ್​ಗೆ ಆ ರಾಜ್ಯದ ಸುಪ್ರಸಿದ್ಧ ಯಾತ್ರಾಸ್ಥಳವೊಂದರ ಮೇಲೆ ದಾಳಿಯೆಸಗುವ ಹುನ್ನಾರವಿದ್ದುದು ಬಹಿರಂಗವಾಗಿದೆ. ಹೀಗಾಗಿ ಐಸಿಸ್ ಬೆದರಿಕೆಯನ್ನು ಉತ್ತರಪ್ರದೇಶಕ್ಕೆ ಮಾತ್ರ ಸೀಮಿತ ಎಂದು ಭಾವಿಸದೆ, ದೇಶದ ಒಟ್ಟಾರೆ ಭದ್ರತಾ ಸನ್ನದ್ಧತೆಗೆ ಮತ್ತಷ್ಟು ಬಲ ತುಂಬುವ, ಸೂಕ್ತ ಬದಲಾವಣೆಯೊಂದಿಗೆ ವ್ಯೂಹಾತ್ಮಕ ಚಟುವಟಿಕೆಯನ್ನು ತೀವ್ರಗೊಳಿಸುವ ಅಗತ್ಯವಿದೆ. ಇದು ನೆರವೇರಬೇಕೆಂದರೆ, ಆಯಾ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ನಡುವಿನ ಪರಸ್ಪರ ಸಹಕಾರ ವರ್ಧಿಸಬೇಕಿದೆ; ಇಂಥ ತುರ್ತು ಸಂದರ್ಭಗಳಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಪ್ರತಿಫಲಿಸದಂತೆ ನೋಡಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಭಾರಿ ಬೆಲೆಯನ್ನೇ ತೆರಬೇಕಾದೀತು.

Leave a Reply

Your email address will not be published. Required fields are marked *