ಅಪಾಯದ ಅಂಚಿನಲ್ಲಿ ಪ್ರಜಾಪ್ರಭುತ್ವ

ಕೋಲಾರ: ಮತೀಯ ಸಂಘಟನೆಗಳ ಬೆಂಬಲದಿಂದ ನಡೆಯುತ್ತಿರುವ ಅಧಿಕಾರ ರಾಜಕಾರಣದಿಂದಾಗಿ ಪ್ರಜಾಪ್ರಭುತ್ವ ಅಪಾಯಕಾರಿ ಸನ್ನಿವೇಶ ಎದುರಿಸುತ್ತಿದೆ ಎಂದು ವಿಮರ್ಶಕ ಚಂದ್ರಶೇಖರ ನಂಗಲಿ ಹೇಳಿದರು.

ರಾಜ್ಯ ಯುವ ಬರಹಗಾರರ ಒಕ್ಕೂಟ ನಗರದ ರವಿ ಬಿಎಡ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಗಿರೀಶ್ ಕಾರ್ನಾಡ್ ಒಂದು ನೆನಪು ಕಾರ್ಯಕ್ರಮದಲ್ಲಿ ಕಾರ್ನಾಡರ ಕಾವ್ಯಾತ್ಮಕತೆ ಹಾಗೂ ವ್ಯಕ್ತಿತ್ವ ಕುರಿತು ವಿಷಯ ಮಂಡಿಸಿದರು.

ಇಂದಿನ ಸಮಾಜ ವಿರಸದಿಂದ ಕೂಡಿದೆ. ಮತೀಯ ಪ್ರೇರಿತವಾದ ಧರ್ಮ ರಾಜಕಾರಣದಲ್ಲಿ ಪ್ರತಿರೋಧ ಮತ್ತು ಭಾವಮೈತ್ರಿ ಇದೆ. ಇದರ ನಡುವೆ ಗಿರೀಶ್ ಕಾರ್ನಾಡ್ ನದಿಯ ಪ್ರವಾಹದ ವಿರುದ್ಧವಾಗಿ ಈಜುವ ಮೀನಿನಂತೆ ಅಪಾಯ ಲೆಕ್ಕಿಸದೆ ಮುನ್ನಡೆದವರು ಎಂದರು.

ಇಂದು ಜಾತಿ, ಮತ, ಪಂಥ ಇನ್ನಿತರ ರೀತಿಯಲ್ಲಿ ವಿಭಜನೆಯಲ್ಲಿ ಗುರುತಿಸಿಕೊಂಡ ಮತೀಯ ಸಂಘಟನೆಗಳ ಬೆಂಬಲದಿಂದ ಪ್ರಜಾಪ್ರಭುತ್ವದ ಆಳ್ವಿಕೆ ನಡೆಯುತ್ತಿದೆ. ಇದನ್ನು ವಿರೋಧಿಸಿದ ಗೌರಿಲಂಕೇಶ್, ದಾಬೋಲ್ಕರ್, ಪನ್ಸಾರೆಯಂತಹ ಎದುರು ಮೀನುಗಳು (ಪ್ರವಾದ ವಿರುದ್ದ ಈಜುವ ಮೀನು)ಹತ್ಯೆಯಾಗಿದೆ ಎಂದರು.

ಕಾರ್ನಾಡ್ ತಂದೆ ಮರುಮದುವೆಯಾಗಿದ್ದು ಅಂದಿನ ಸಮಾಜದ ವ್ಯವಸ್ಥೆಯ ವಿರುದ್ದವಾಗಿಯೇ. ಹೀಗಾಗಿ ಕಾರ್ನಾಡರಿಗೆ ಪ್ರವಾಹದ ವಿರುದ್ಧ ಈಜುವ ಗುಣ ಜನ್ಮತಃ ಬಂದಿದೆ. ಇವರ ಮೊದಲ ನಾಟಕ ಯಯಾತಿ ಕಂಡ ಯಶಸ್ಸಿನಿಂದ ತುಘಲಕ್ ಎಂಬ ಮಹತ್ವವಾದ ನಾಟಕ ಬರೆದರು. ತನ್ನ ಆಳ್ವಿಕೆಯಲ್ಲಿ ನಮಾಜ್ ನಿಷೇಧಿಸಿದ್ದ. ತುಘಲಕ್ ನಾಟಕ ಅಂದಿಗಿಂತ ಇಂದು ಹೆಚ್ಚು ಪ್ರಸ್ತುತ ಎಂದರು.

ಕಾರ್ನಾಡರ ನಾಟಕಗಳ ಕುರಿತು ಮಾತನಾಡಿದ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಜಿ. ನಾಗರಾಜ್, ಪುರಾಣ, ಇತಿಹಾಸಗಳನ್ನು ವರ್ತಮಾನಕ್ಕೆ ಇಳಿಸಿ ಯಯಾತಿ ಸೇರಿ 14 ನಾಟಕಗಳನ್ನು ಕಾರ್ನಾಡರು ಬರೆದಿದ್ದಾರೆ. ಅವರ ಎಲ್ಲ ನಾಟಕಗಳು ನಮ್ಮ ವಿಚಾರ, ಶಕ್ತಿಗೆ ಸಾಣೆ ಹಿಡಿದಂತಿದೆ ಎಂದರು.

ಪ್ರತಿಯೊಬ್ಬರಲ್ಲೂ ಮನುಷ್ಯತ್ವ ಇದ್ದರೂ ಕೊರತೆಯಿದೆ. ಮಹಮದ್ ಬಿನ್ ತುಘಲಕ್ ಹುಚ್ಚುದೊರೆ ಅಲ್ಲ, ಅವನಲ್ಲೂ ಮನುಷ್ಯತ್ವ, ಆಡಳಿತದಲ್ಲಿ ಸುಧಾರಣೆಯ ದೂರದೃಷ್ಟಿತ್ವ ಇತ್ತು ಎಂಬುದನ್ನು ಕಾರ್ನಾಡರು ತುಘಲಕ್ ನಾಟಕದಲ್ಲಿ ಬಿಚ್ಚಿಟ್ಟಿದ್ದಾರೆ ಎಂದರು.

ರವಿ ಬಿಎಡ್ ಕಾಲೇಜಿನ ಕಾರ್ಯದರ್ಶಿ ಮೂರಂಡಹಳ್ಳಿ ಗೋಪಾಲ್, ಪ್ರಿನ್ಸಿಪಾಲ್ ನಾಗಮಣಿ, ಪತ್ರಕರ್ತ ಕೆ.ಎಸ್.ಗಣೇಶ್, ಸಿ.ವಿ.ನಾಗರಾಜ್, ಒಕ್ಕೂಟದ ಜಿಲ್ಲಾಧ್ಯಕ್ಷ ಚಾಂದ್​ಪಾಷ, ಕಸಾಪ ನಗರಾಧ್ಯಕ್ಷ ಶಿವಕುಮಾರ್ ಇತರರಿದ್ದರು.

ಕಾರ್ನಾಡರು ಅವ್ಯವಸ್ಥೆ, ಮೂಢನಂಬಿಕೆ ಹೋಗಲಾಡಿಸಲು ದೃಢ ಸಂಕಲ್ಪ ತೊಟ್ಟು ಜಾಗೃತಿ ಮೂಡಿಸಿದವರು. ಅವರ ವಿಚಾರ, ವೈಚಾರಿಕ ಆಸ್ತಿ, ನಡೆದ ದಾರಿ ಯುವಸಮುದಾಯಕ್ಕೆ ಮಾರ್ಗದರ್ಶನ. ಒಕ್ಕೂಟವು ಕಾರ್ನಾಡ್ ಹೆಸರಿನಲ್ಲಿ ಪ್ರತಿಷ್ಠಾನ, ದತ್ತಿ ಆರಂಭಿಸಲು ಚಿಂತನೆ ನಡೆಸಿದೆ.

| ಹೂಹಳ್ಳಿ ನಾಗರಾಜ್, ಸಂಸ್ಥಾಪಕ ಅಧ್ಯಕ್ಷ, ರಾಜ್ಯ ಯುವ ಬರಹಗಾರರ ಒಕ್ಕೂಟ

Leave a Reply

Your email address will not be published. Required fields are marked *