ಅಪರೋಕ್ಷಜ್ಞಾನಿಗಳ ಕಣ್ಗಳಲ್ಲಿ ಕಂಡ ಕರ್ಮಜದೇವತೆ

ಶ್ರೀ ರಾಘವೇಂದ್ರ ಗುರುಸಾರ್ವಭೌಮರ 348ನೇ ಮಹಾಸಮಾರಾಧನೆಯನ್ನು ನಾಳಿನಿಂದ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಈ ಸುಸಂದರ್ಭದಲ್ಲಿ ಅವರ ಶಿಷ್ಯ-ಪ್ರಶಿಷ್ಯರು, ಅಪರೋಕ್ಷಜ್ಞಾನಿಗಳು ‘ಎಂತು ಕಂಡಿರುವರು, ಏನೆಂದು ಪಾಡಿರುವರು’ ಎಂಬುದನ್ನು ಮೆಲುಕು ಹಾಕೋಣ.

ಗುರುರಾಯರ ಪ್ರಿಯತಮಶಿಷ್ಯ ಅಪ್ಪಣಾಚಾರ್ಯರಂತೂ ರಾಯರನ್ನು ರಾಘವೇಂದ್ರಸ್ತೋತ್ರ, ಕವಚ, ಅಷ್ಟಾಕ್ಷರಜಪಕ್ರಮ, ಗದ್ಯ, ಅಷ್ಟಕಾದಿಗಳ ಮೂಲಕ ಆಪಾದಮಸ್ತಕ ವರ್ಣಿಸಿದ್ದಾರೆ. ಅವರ ಅನುಭಾವದ ಮಾತು ಹೀಗಿದೆ: ‘ಯಾವ ಗುರುರಾಯರ ಪಾದಧೂಳಿಯಿಂದ ಸ್ವಶರೀರವನ್ನು ಅಲಂಕರಿಸಿಕೊಂಡಿರುವರೋ, ಯಾವ ಪರಿಮಳಾಚಾರ್ಯರ ಪಾದಸರೋಜಗಳಲ್ಲಿ ತಮ್ಮ ಮನಸ್ಸುಗಳೆಂಬ ದುಂಬಿಯನ್ನು ಹರಿಬಿಟ್ಟಿರುವರೋ, ಯಾವ ರಾಯರ ಚರಣಕಮಲಗಳನ್ನು ಸದಾ ಧ್ಯಾನಿಸುವರೋ, ‘‘ರಾಘವೇಂದ್ರ’’ನಾಮವನ್ನು ಸರ್ವದಾ ಜಪಿಸುತ್ತಿರುವರೋ ಅಂಥವರ ಸಂದರ್ಶನವೇ ನಮ್ಮ ಪಾಪರಾಶಿಗಳನ್ನು ಕಾಡ್ಗಿಚ್ಚಿನಂತೆ ಸುಡುವಲ್ಲಿ ಸಮರ್ಥವಾಗಿರುವಾಗ ಆ ಗುರುರಾಯರ ಸಾಕ್ಷಾತ್ ದರುಶನವೇಕೆ? ಸ್ಮರಣೆಯೇಕೆ?’.

ಗುರುರಾಯರ ಶಿಷ್ಯರೂ, ‘ಶ್ರೀರಾಘವೇಂದ್ರವಿಜಯ’ ಕರ್ತೃ ನಾರಾಯಣಾಚಾರ್ಯರು – ನಾವೆಲ್ಲ ಸಹಜವಾಗಿಯೇ ಮಾಡುವ ಪಾಪವನ್ನೂ, ಅದರ ಉಪಶಮನವನ್ನೂ ಹೀಗೆ ಬಿಚ್ಚಿಟ್ಟಿದ್ದಾರೆ: ‘ನಾವು ಸದಾ ನಮ್ಮ ಕೆಲಸಕಾರ್ಯಗಳನ್ನು ಪೂರೈಸಿಕೊಳ್ಳಲು ಅನೇಕ ಅನರ್ಹ-ಅಯೋಗ್ಯರನ್ನೂ ಸ್ತುತಿಸುತ್ತಲೇ ಬರುತ್ತ ಮಹಾಪಾಪಗಳನ್ನು ಸಂಪಾದಿಸಿದ್ದೇವೆ. ವಸ್ತುತಃ ಸವೋತ್ತಮನಾದ ಆ ಭಗವಂತನನ್ನು ಹೊರತು ಇತರ ಮಾನವರನ್ನು ಸರ್ವಥಾ ಸ್ತುತಿಸಕೂಡದು. ನಮ್ಮ ರಸನೆಯಿರುವುದೇ ನಿರ್ದುಷ್ಟವಾದ ಪರಮಾತ್ಮನನ್ನು ಪೊಗಳಲು. ಈ ನಿಟ್ಟಿನಲ್ಲಿ ನಾವು ಈಗಾಗಲೇ ಸಂಪಾದಿಸಿರುವ ಆ ಕಲ್ಮಷವನ್ನು ತೊಳೆದುಕೊಳ್ಳಲು. ನಮ್ಮ ಕರ್ಮಗಳನ್ನು ಆ ಸವೋತ್ತಮನಲ್ಲಿ ಸದಾ ಸಮರ್ಪಿಸುವ, ತಮ್ಮಲ್ಲಿ ವಾಯುದೇವರ ವಿಶೇಷ ಸನ್ನಿಧಾನ ಹೊಂದಿರುವ, ಕರ್ಮಜದೇವತೆಯಾದ ಆ ಶ್ರೀರಾಘವೇಂದ್ರಸ್ವಾಮಿಗಳ ಅಂತರ್ಯಾಮಿಯಾದ ಆ ವೇಣುಗೋಪಾಲನ ಸ್ತುತಿಯೆಂಬ ಗಂಗೆಯಲ್ಲಿ ಮುಳುಗಬೇಕಾಗುತ್ತದೆ.’

ರಾಯರ ಸಾಕ್ಷಾತ್ ಶಿಷ್ಯರಾದ ಶ್ರೀಕೃಷ್ಣಾಚಾರ್ಯರು ಗುರುರಾಯರನ್ನು ತಮ್ಮ ಗ್ರಂಥಾದಿಯಲ್ಲಿ ಸ್ಮರಿಸುತ್ತಾ ‘ಯಾವ ನನ್ನ ವಿದ್ಯಾಗುರುಗಳಾದ ಶ್ರೀರಾಘವೇಂದ್ರತೀರ್ಥರು ದುರ್ವಾದಿಗಳೆಂಬ ಮದಗಜಗಳಿಗೆ ಪಂಚಾನನದಂತಿದ್ದರೋ, ಮಧ್ವರಾಯರ ಶಾಸ್ತ್ರವನ್ನು ಮೂಲೆಮೂಲೆಗಳಲ್ಲಿ ಬಿತ್ತರಿಸಿದರೋ ಅಂತಹ ಮಹನೀಯರನ್ನು ಆಪಾದಮಸ್ತಕ ನಮಿಸುತ್ತೇನೆ’ ಎಂದಿದ್ದಾರೆ. ಗುರುರಾಯರ ಪೂರ್ವಾಶ್ರಮದ ಮರಿಮಗ, ಅವರ ವೇದಾಂತಸಾಮ್ರಾಜ್ಯವನ್ನಾಳಿದ ಶ್ರೀ ವಾದೀಂದ್ರತೀರ್ಥರು ಗುರುಗುಣಸ್ತವನದಲ್ಲಿ, ‘ಯಾವ ಪ್ರಾಚೀನಾಚಾರ್ಯರ ಅಮೂಲ್ಯಗ್ರಂಥಗಳು ಪರಿಪೂರ್ಣವಾಗಿ ಸಿಗದೆ, ಸಿಕ್ಕರೂ ಸಾಮಾನ್ಯರಿಗೆ ಅರ್ಥವಾಗದೆ ಹೋದವೋ ಆಗ ರಾಘವೇಂದ್ರಸ್ವಾಮಿಗಳಂಥ ಮಹನೀಯರು ಉದಿಸಿಬಂದು ಅವುಗಳ ಸರಿಯಾದ ಪಾಠವನ್ನು ಸಂಗ್ರಹಿಸಿ, ಅವುಗಳಿಗೆ ಸರಳ ರುಚಿಕರ ಟಿಪ್ಪಣಿಗಳನ್ನೂ ಬರೆದು ಮಹತ್ತಾಗಿ ಉಪಕರಿಸಿದರೋ ಅಂಥ ಚಿರಸ್ಥಾಯಿ ಉಪಕಾರವನ್ನು ಯಾವ

ತತ್ತ ್ವುಭುಕ್ಷು ಪಂಡಿತರು ತಾನೇ ಮರೆತಾರು?’ ಎನ್ನುವರು. ಶ್ರೀ ಸುಮತೀಂದ್ರತೀರ್ಥರು ‘ಭಾಗವತರು ಬಯಸುವ ಸಕಲ ಕಲ್ಯಾಣಗಳನ್ನೂ ಕೇಳುವ ಮುನ್ನವೇ ದಯಪಾಲಿಸುವ, ಕಲ್ಪವೃಕ್ಷವನ್ನೂ ಹಿಮ್ಮೆಟ್ಟಿರುವ, ಗುರುಗಳು ನಮ್ಮ ಶ್ರೀರಾಘವೇಂದ್ರಸ್ವಾಮಿಗಳು’ ಎಂದಿರುವರು. ವಾದೀಂದ್ರತೀರ್ಥರ ಪೂರ್ವಾಶ್ರಮದ ಮಗನೂ (ಜಯರಾಮಾಚಾರ್ಯ), ಅದೇ ಪೀಠದಲ್ಲಿ ಮುಂದೆ ವಿರಾಜಿಸಿದವರೂ ಆದ ಶ್ರೀ ಧೀರೇಂದ್ರತೀರ್ಥರು ತಮ್ಮ ವಿಷಯವಾಕ್ಯಸಂಗ್ರಹಗ್ರಂಥದಲ್ಲಿ ರಾಯರನ್ನು ‘ನಮ್ಮ ಸಂಸ್ಕ ೃ-ಗ್ರಂಥತತಿಗಳನ್ನು ಉಳಿಸಿಕೊಟ್ಟ ಈ ನಮ್ಮ ಗುರುವರ್ಯರನ್ನು ಹೇಗೆ ತಾನೆ ನಮಿಸದೇ ಇರಲಿ?’ ಎಂದು ಬಗೆವರು.

19ನೇ ಶತಮಾನದ ಪೂರ್ವಾರ್ಧದಲ್ಲಿದ್ದ (ಕ್ರಿ.ಶ. 1836) ಮಹಾತಪಸ್ವಿ ಶ್ರೀಕೃಷ್ಣಾವಧೂತರು ‘ಶ್ರೀರಾಘವೇಂದ್ರತಂತ್ರ’ದಲ್ಲಿ ರಾಯರನ್ನು ಸ್ತೋತ್ರಮಾಡುತ್ತ, ‘ಭೂಲೋಕದ ಯಾವುದೇ ಭಾಗದ ಯಾವುದೇ ಜನರಿಗೆ ಮಂಚಾಲೆಯಲ್ಲಿದ್ದೇ ಸೌಭಾಗ್ಯವನ್ನು ಕರುಣಿಸುವ ಗುರುಗಳೇ ಶ್ರೀರಾಘವೇಂದ್ರತೀರ್ಥರು. ತಮ್ಮ ಸಾಧನೆ ಇಹಲೋಕದಲ್ಲಿ ಪೂರ್ಣವಾಗಿದ್ದರೂ ಭಕ್ತರ ಉದ್ಧಾರಕ್ಕಾಗಿ ಇಂದಿಗೂ ವೃಂದಾವನದೊಳು ನೆಲೆಸಿರುವ ಮಹಾಕಾರುಣಿಕರು ನಮ್ಮ ಗುರುರಾಯರು’ ಎಂದು ಕೊಂಡಾಡಿದ್ದಾರೆ. ಸ್ವಾಮಿರಾಯಾಚಾರ್ಯರೆಂದೇ ಪ್ರಸಿದ್ಧರಾಗಿದ್ದ ಶ್ರೀಗುರುಜಗನ್ನಾಥದಾಸರು ತಮ್ಮ ಸರ್ವಸಮರ್ಪಣಸ್ತೋತ್ರದಲ್ಲಿ, ‘ರಾಯರೇ! ನಿಮ್ಮ ಸ್ತುತಿಯಷ್ಟೇ ನನ್ನ ರಸನೆಯ ಮೇಲಿರಲಿ. ತಮ ಆ ದಿವ್ಯರೂಪವಷ್ಟೇ ನನ್ನ ಮನೋಮಂದಿರದಲ್ಲಿರಲಿ ಸದಾ. ತಮ್ಮ ಪಾದೋದಕವು ನನ್ನ ಶಿರಸ್ಸಿನ ಮೇಲಿರಲಿ. ನಿಮ್ಮ ಅಂತರ್ಯಾಮಿಗೆ ಅರ್ಪಿಸಿದ ಅನ್ನವಷ್ಟೇ ನನ್ನ ಉದರ ಸೇರಲಿ. ನಿಮ್ಮ ಭಕುತರ ಸಂಗವೇ ನನಗೆ ಸರ್ವದಾ ಒದಗಿಬರಲಿ. ಒಟ್ಟಾರೆ ನಿಮ್ಮ ಸಾಮೀಪ್ಯ, ಸನ್ನಿಧಾನ ನನಗೆ ಸಿಗುವಂತಾಗಲಿ. ಇದುವೇ ನನ್ನ ಹೆಬ್ಬಯಕೆ’ ಎಂದು ಉದಾತ್ತವಾಗಿ ಪ್ರಾರ್ಥಿಸುವರು. ಇಂತಹ ರಾಯರ ಅನುಗ್ರಹ ನಮಗೂ ಸದಾ ದೊರಕಲಿ ಎಂದು ಭಕ್ತಿಯಿಂದ ಬೇಡಿಕೊಳ್ಳೋಣ.

(ಲೇಖಕರು ವಿದ್ವಾಂಸರು, ಸಂಸ್ಕೃತ ಪ್ರಾಧ್ಯಾಪಕರು)

(ಪ್ರತಿಕ್ರಿಯಿಸಿ: [email protected])

ನಾಳೆ ವಚನವೇದ ಕುರಿತ ಅಂಕಣ ‘ಪರಮಹಂಸ ನುಡಿದೀಪ’

Leave a Reply

Your email address will not be published. Required fields are marked *