Tuesday, 11th December 2018  

Vijayavani

Breaking News

ಅಪರೂಪದ ಸೌತೆಕಾಯಿ ತಳಿ ಮಗೆಕಾಯಿ

Monday, 14.11.2016, 3:40 AM       No Comments
  •  ಪ.ರಾಮಕೃಷ್ಣ ಶಾಸ್ತ್ರಿ

ತ್ತರಕನ್ನಡ ಜಿಲ್ಲೆಯ ಶಿರಸಿಗೆ ಹೋದಾಗ ಅಲ್ಲಿರುವ ಸಹೃದಯರ ಆತಿಥ್ಯ ಸ್ವೀಕರಿಸುವಾಗ ಎಲೆಗೆ ಬೀಳುವ ಪಲ್ಯವೋ ಸಾಂಬಾರೋ ಮನಸೆಳೆಯುವುದು ತನ್ನ ವಿಶಿಷ್ಟ ರುಚಿಯಿಂದ. ತಿನ್ನುವವರಿಗೆ ಅದು ಯಾವ ತರಕಾರಿಯೆಂಬುದು ತಿಳಿಯದೆ ಹೋಗಬಹುದು. ಮನೆಯಾಕೆಯಲ್ಲಿ ವಿಚಾರಿಸಿದರೆ ‘ಮಗೇಕಾಯಿಯದು’ ಎಂಬ ಉತ್ತರ ಬರುತ್ತದೆ. ಮಗೇಕಾಯಿ ಎನ್ನುವಾಗ ತಲೆ ತುರಿಸಿಕೊಂಡು ಇದು ಯಾವ ಕಾಯಿ ಎಂದು ಚಿಂತಿಸಲೇಬೇಕು. ಆದರೆ ಇದು ಸಾಂಬಾರು ಸೌತೆಕಾಯಿಯ ಒಂದು ವಿಭಿನ್ನ ತಳಿ. ಉತ್ತರ ಕನ್ನಡಕ್ಕೇ ಸೀಮಿತವಾದ ವಿಶಿಷ್ಟ ಸೌತೇಕಾಯಿ.

ಒಂದು ವರ್ಷಕ್ಕಿಂತ ಹೆಚ್ಚು ಕಾಲ ಅದರ ಸುತ್ತಲೂ ಬಾಳೆಯ ನಾರು ಕಟ್ಟಿ ಗಳುವಿಗೆ ತೂಗಾಡಿಸಿ ದಾಸ್ತಾನಿಡಬಹುದು. ಎಳೆಯ ಕಾಯಿಯಿಂದ ಆರಂಭವಾಗುವ ಬಳಕೆ ಹಣ್ಣಿನವರೆಗೂ ಮುಂದುವರಿಯುತ್ತದೆ. ಕೇವಲ ಮಜ್ಜಿಗೆಹುಳಿ, ಸಾಂಬಾರುಗಳಿಗೇ ಇದರ ಉಪಯೋಗ ಸೀಮಿತವಲ್ಲ. ಉಪ್ಪಿನಕಾಯಿ, ದೋಸೆ, ಕಡುಬು, ಗುಳಿಯಪ್ಪ ಹೀಗೆ ಹತ್ತು ಹಲವು ವಿಧದ ಪದಾರ್ಥಗಳಿಗೂ ಅದು ರುಚಿ ಕೊಡುತ್ತದೆ.

ಕ್ರಮಶಃ ಅಳಿವಿನ ಅಂಚು ತಲಪಿರುವ ಮಗೆಕಾಯಿಯನ್ನು ಪ್ರತಿವರ್ಷವೂ ಬೆಳೆಯುತ್ತಿರುವ ಅಪರೂಪದ ರೈತರಲ್ಲಿ ಕಡಬಾಳದ ರಘುಪತಿ ಹೆಗಡೆಯವರೂ ಒಬ್ಬರು. ಅದನ್ನು ಹತ್ತು ಗುಂಟೆ ಜಾಗದಲ್ಲಿ ಕೃಷಿ ಮಾಡುತ್ತಾರೆ. ಹಿಂದಿನ ವರ್ಷದ ಮಗೆಕಾಯಿಯ ಬೀಜಗಳನ್ನು ಒಣಗಿಸಿ ಗಾಳಿಯಾಡದಂತೆ ಸಂರಕ್ಷಣೆ ಮಾಡಿ ಇಡುತ್ತಾರೆ. ಮಾರ್ಚ್ ತಿಂಗಳ ಮಧ್ಯಾವಧಿಯ ಬಳಿಕ ಕೃಷಿಗೆ ಸಕಾಲ. ಈ ಬೀಜಗಳನ್ನು ಒಣಗಿದ ಸೆಗಣಿ ಹುಡಿಯೊಂದಿಗೆ ಬೆರೆಸಿ ಬಟ್ಟೆಯಲ್ಲಿ ಕಟ್ಟುತ್ತಾರೆ. ನೀರಿನಲ್ಲಿ ಬಟ್ಟೆಯನ್ನು ನೆನೆಸಿಟ್ಟು ಮೂರು ದಿನಗಳ ಬಳಿಕ ನೋಡಿದರೆ ಮೊಳಕೆಯೊಡೆದಿರುತ್ತದೆ. ನಾಲ್ಕಡಿ ಉದ್ದ, ಎರಡು ಅಡಿ ಅಗಲದ ಪಾತಿ ತಯಾರಿಸಿ ಅದಕ್ಕೆ ಸೆಗಣಿ ಗೊಬ್ಬರದ ಹುಡಿ ಹರಡುತ್ತಾರೆ. ಈ ಮೊಳಕೆಗಳನ್ನು ಎಚ್ಚರಿಕೆಯಂದ ಪಾತಿಗಳಲ್ಲಿ ನಾಟಿ ಮಾಡಿ ದಿನವೂ ನೀರನ್ನು ಹನಿಹನಿಯಾಗಿ ಚಿಮುಕಿಸುತ್ತಾರೆ. ಹತ್ತು ದಿನಗಳಲ್ಲಿ ಗಿಡಗಳು ಸಾಲುಗಳಲ್ಲಿ ನೆಡಲು ಸಿದ್ಧವಾಗುತ್ತವೆ.

ಒಂದು ಅಡಿ ಅಗಲದ ಉದ್ದನೆಯ ಸಾಲುಗಳು. ಎರಡು ಸಾಲುಗಳ ನಡುವೆ ನಾಲ್ಕು ಅಡಿ ಅಂತರ. ಅನಂತರದ ಸಾಲಿಗೆ ಎರಡೂವರೆ ಅಡಿ ಅಂತರ. ನಾಲ್ಕು ಅಡಿ ಅಂತರವಿರುವಲ್ಲಿ ಎರಡೂ ಸಾಲುಗಳ ಮಗೆಕಾಯಿ ಬಳ್ಳಿ ಹರಡಬೇಕು. ಎರಡೂವರೆ ಅಡಿ ಅಂತರವಿರುವಲ್ಲಿ ನಿರ್ವಹಣೆಗೆ ಹೋಗಬೇಕು. ಸಾಲುಗಳಿಗೆ ಒಣಗಿದ ಅಡಕೆ ಸಿಪ್ಪೆಗಳನ್ನು ಹರಡಿ ಬೆಂಕಿ ಹಚ್ಚಿ ಸುಡುತ್ತಾರೆ. ನೆಡುವ ಮೊದಲು ಕೊಟ್ಟಿಗೆ ಗೊಬ್ಬರ ಹರಡುತ್ತಾರೆ. ಅರ್ಧ ಅಡಿಗೊಂದರಂತೆ ಗಿಡದ ನಾಟಿ. ಹತ್ತು ದಿನಗಳ ವರೆಗೆ ಬಿಸಿಲಿಗೆ ಒಣಗಲು ಬಿಡದೆ ನೀರು ಚಿಮುಕಿಸಬೇಕು. ಬಳಿಕ ಮೂರು ದಿನಕ್ಕೊಮ್ಮೆ ನೀರುಣಿಸಿದರೆ ಸಾಕು. ಗಿಡ ಬೆಳೆದ ಮೇಲೆ ಪುನಃ ಗಿಡಕ್ಕೆ ಒಂದು ಕಿಲೋ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಪೂರೈಸಿ ಅತಿ ಕಡಮೆ ಪ್ರಮಾಣದಲ್ಲಿ ಸಂಯುಕ್ತ ರಸಗೊಬ್ಬರ ಹಾಕುತ್ತಾರೆ. ಸಾಲುಗಳ ಸುತ್ತಲಿನ ಮಣ್ಣನ್ನೇ ಏರು ಹಾಕುತ್ತಾರೆ. ಗಿಡಗಳು ಮಣ್ಣಿನಿಂದ ಮುಚ್ಚದಂತೆ ತೆಳ್ಳಗೆ ತರಗೆಲೆಗಳನ್ನು ಮುಚ್ಚುತ್ತಾರೆ.

ಎರಡೂವರೆ ತಿಂಗಳ ಅವಧಿಯಲ್ಲಿ ಕೊಯ್ಲಿಗೆ ಬರುವ ಕಾಯಿ ಇದು. ತೊಟ್ಟಿನ ಬಳಿ ಜೇನಿನ ವರ್ಣ ಕಂಡರೆ ಅದು ಕೊಯ್ಲಿಗೆ ಸಿದ್ಧವಾಗಿರುವ ಗುರುತು ಎನ್ನುತ್ತಾರೆ ಹೆಗಡೆಯವರು. ಸಾಂಬಾರು ಸೌತೆಯ ಹಾಗೆ ಈ ಕಾಯಿಯಲ್ಲಿ ಬಣ್ಣದ ಪಟ್ಟಿಗಳಿರದ ಕಾಯಿಗಳೂ ಇವೆ. ಬಣ್ಣ ಕೊಂಚ ಕಪ್ಪುಮಿಶ್ರಿತ ಹಸಿರಾಗಿರುತ್ತದೆ. ಹಣ್ಣಾದರೆ ಕಂದು ವರ್ಣವಾಗುತ್ತದೆ. ಎರಡು ಕಿಲೋಗಿಂತ ಕಮ್ಮಿ ತೂಕದ ಕಾಯಿಗಳಿಲ್ಲ. ಗರಿಷ್ಠ ಐದೂವರೆ ಕಿಲೋ ತನಕ ತೂಗುತ್ತದೆ. ಕಿಲೋಗೆ ಸಿಗುವ ಬೆಲೆ ಹದಿನೈದು ರೂಪಾಯಿ. ಹತ್ತು ಗುಂಟೆಗಳಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಕಾಯಿಗಳನ್ನು ಹೆಗಡೆ ಕೊಯ್ಯುತ್ತಾರೆ. ಇಡೀ ವರ್ಷ ದಾಟುವ ತನಕ ನಿತ್ಯ ಬಳಕೆಗೆ ಬೇಕಾದಷ್ಟು ಉಳಿಸಿಕೊಂಡು ಉಳಿದುದನ್ನು ಮಾರುತ್ತಾರೆ. ಮಗೆಕಾಯಿಯನ್ನು ಹುಡುಕಿಕೊಂಡು ಗ್ರಾಹಕರು ಮನೆಗೆ ಬರುವ ಕಾರಣ ಸಂತೆ ಸುತ್ತುವ ಕೆಲಸವಿಲ್ಲ. ಸಣ್ಣ ಗಾತ್ರದ ಕಾಯಿಗೆ ಬೇಡಿಕೆಯೂ ಅಧಿಕ. ಆರೋಗ್ಯಕ್ಕೆ ಹಿತಕರವಾದ ಮಗೆಕಾಯಿ ಅಲ್ಪ ಅವಧಿಯಲ್ಲಿ ದೊಡ್ಡ ಲಾಭ ತರುವ ತರಕಾರಿ ಎನ್ನುತ್ತಾರೆ ಹೆಗಡೆ.(ಹೆಚ್ಚಿನ ಮಾಹಿತಿಗೆ ಹೆಗಡೆಯವರನ್ನು ಸಂರ್ಪಸಿ- 8762148813)

(ಪ್ರತಿಕ್ರಿಯಿಸಿ: [email protected], [email protected])

 

Leave a Reply

Your email address will not be published. Required fields are marked *

Back To Top