ಅಪರಿಚಿತ ವ್ಯಕ್ತಿ ಶವ ಪತ್ತೆ

ಹಾಸನ: ನಗರದ ಹೊಸ ಬಸ್ ನಿಲ್ದಾಣ ಎದುರಿನ ನಿರ್ಮಾಣ ಹಂತದಲ್ಲಿರುವ ಕೆಎಚ್‌ಬಿ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ಬೆಳಗ್ಗೆ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ.

ನಿರ್ಮಾಣ ಹಂತದಲ್ಲಿರುವ ಲಿಫ್ಟ್ ಕೊಠಡಿಯಲ್ಲಿ ಶವ ಪತ್ತೆಯಾಗಿದೆ. ಮೃತ ವ್ಯಕ್ತಿ ಮುಖವನ್ನು ಟವೆಲ್‌ನಿಂದ ಕಟ್ಟಿದ್ದು ಪಂಚೆ ಧರಿಸಿದ್ದಾನೆ. ಅಂದಾಜು 30ರಿಂದ 35ವರ್ಷದ ವ್ಯಕ್ತಿಯಾಗಿದ್ದು, ಇದು ಕೊಲೆಯೋ ಅಥವಾ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆಯೋ ಎಂಬ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ, ವೃತ್ತ ನಿರೀಕ್ಷಕ ವೈ. ಸತ್ಯನಾರಾಯಣ, ನಗರ ಠಾಣೆ ಎಸ್‌ಐ ಪ್ರಮೋದ್ ಭೇಟಿ ನೀಡಿ ಪರಿಶೀಲಿಸಿದರು. ಆಂಬುಲೆನ್ಸ್ ಮೂಲಕ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ರವಾನಿಸಲಾಯಿತು.

ಪತ್ತೆಯಾದದ್ದು ಹೀಗೆ?: ಭಾನುವಾರ ರಾತ್ರಿ ಆಂತೋಣಿ ಎಂಬ ವ್ಯಕ್ತಿ ಅದೇ ಲಿಫ್ಟ್ ಕೊಠಡಿಯೊಳಗೆ ಬಿದ್ದಿದ್ದಾನೆ. ಬೆಳಗ್ಗೆವರೆಗೂ ಅಲ್ಲೇ ಇದ್ದ ಆತ ಆ ನಂತರ ಜೋರಾಗಿ ಕಿರುಚಿದ್ದಾನೆ. ವ್ಯಕ್ತಿಯ ಚೀರಾಟ ಕೇಳಿದ ಹತ್ತಿರದಲ್ಲಿಯೇ ಕೆಲಸ ಮಾಡುತ್ತಿದ್ದ ಕಟ್ಟಡ ಕಾರ್ಮಿಕರು, ಸ್ಥಳೀಯ ನಿವಾಸಿಗಳು ದೌಡಾಯಿಸಿ ಆತನನ್ನು ಮೇಲಕ್ಕೆತ್ತಿದ್ದಾರೆ. ನಂತರ ಆತನೇ ಅಲ್ಲಿ ವ್ಯಕ್ತಿಯ ಶವ ಇರುವುದಾಗಿ ತಿಳಿಸಿದ್ದಾನೆ. ಪ್ರದೇಶದಲ್ಲಿ ಪೂರ್ಣ ಕತ್ತಲು ಆವರಿಸಿದ್ದರಿಂದ ಸಾರ್ವಜನಿಕರು ಮೊಬೈಲ್ ಟಾರ್ಚ್ ಬೆಳಕಿನಿಂದ ಪರಿಶೀಲಿಸಿದ್ದು, ಅಪರಿಚಿತ ಶವ ಇರುವುದು ಗೊತ್ತಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಎಎಸ್ಪಿ ಬಿ.ಎನ್.ನಂದಿನಿ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.

ಭದ್ರತೆ ನಿಯೋಜಿಸಿಲ್ಲ:
ಹೊಸ ಬಸ್‌ನಿಲ್ದಾಣ ನಿರ್ಮಾಣ ವೇಳೆ ಆರಂಭಿಸಿದ ಮಳಿಗೆ ಕಾಮಗಾರಿ ಇದುವರೆಗೆ ಪೂರ್ಣಗೊಂಡಿಲ್ಲ. ಎದುರಿಗಿರುವ ಪ್ರವಾಸೋದ್ಯಮ ಇಲಾಖೆ ಕಚೇರಿ, ಬಸ್ ನಿಲ್ದಾಣ ಕೆಲಸ ಪೂರ್ಣಗೊಂಡು ಕಾರ್ಯಾರಂಭವಾಗಿದ್ದರೂ ಈ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ದೊರೆತಿಲ್ಲ. 2005ರಿಂದ ಇಲ್ಲಿವರೆಗೆ ಅಧಿಕಾರಕ್ಕೆ ಬಂದ ಯಾವ ಸರ್ಕಾರಗಳು ಕಟ್ಟಡದ ಬಗ್ಗೆ ಗಮನಹರಿಸಲಿಲ್ಲ. ಈಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಅವರು ಕಟ್ಟಡ ನೆಲಸಮಗೊಳಿಸುವುದಾಗಿ ಹೇಳಿದ್ದಾರೆ. ಆದರೆ ಇದುವರೆಗೆ ಭದ್ರತೆಗೆ ಸಿಬ್ಬಂದಿ ನಿಯೋಜಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಿರುವ ಕಟ್ಟಡ ಇದಾಗಿದ್ದು, ಇತ್ತೀಚೆಗಷ್ಟೆ ನಗರಸಭೆಗೆ ಹಸ್ತಾಂತರಗೊಂಡಿದೆ.

ಅನೈತಿಕ ಚಟುವಟಿಕೆಗಳ ತಾಣ: ಹೊಸ ಬಸ್‌ನಿಲ್ದಾಣ ಎದುರಿನ ಈ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗಿದೆ. ಮದ್ಯದ ಬಾಟಲಿ, ಇಸ್ಪೀಟ್ ಕಾರ್ಡ್‌ಗಳಿಂದ ತುಂಬಿರುವ ಕಟ್ಟಡವನ್ನು ನೆಲಸಮಗೊಳಿಸಬೇಕು. ಇಲ್ಲವಾದರೆ ತಕ್ಷಣವೇ ಕಾಮಗಾರಿ ಪೂರ್ಣಗೊಳಿಸಿ ಬಳಕೆ ಮಾಡಿಕೊಳ್ಳಬೇಕು ಎಂದು ಚನ್ನಪಟ್ಟಣ ನಿವಾಸಿಗಳು ಆಗ್ರಹಿಸಿದರು.