ಅಪಘಾತ ತಡೆಗೆ ಹಂಪ್ಸ್ ನಿರ್ಮಾಣ

ಸಿದ್ದಾಪುರ: 3ಸಿದ್ದಾಪುರ- ಶಿರಸಿ ರಸ್ತೆಯ ಕೋಲಸಿರ್ಸಿ ಕ್ರಾಸ್​ನಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸುವುದಕ್ಕೆ ಸೂಚನಾ ಫಲಕ, ಹಂಪ್ಸ್ (ರಸ್ತೆ ಉಬ್ಬು)ಗಳನ್ನು ನಿರ್ವಿುಸಲಾಗಿದೆ.

ಇದು ರಾಜ್ಯ ಹೆದ್ದಾರಿ ಆಗಿರುವುದರಿಂದ ಇಲ್ಲಿ ವಾಹನ ಸಂಚಾರ ನಿರಂತರವಾಗಿ ಹಾಗೂ ವೇಗವಾಗಿ ಇರುತ್ತದೆ. ಇಲ್ಲಿ ಕೋಲಸಿರ್ಸಿ ಕಡೆಯಿಂದ ಬರುವ ವಾಹನ ಸವಾರರು ಹೆದ್ದಾರಿಯಲ್ಲಿ ಬರುವ ವಾಹನದ ವೇಗ ತಿಳಿಯಲಾಗದೆ, ರಸ್ತೆ ದಾಟಲು ಹೋಗಿ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಇನ್ನು ಕೆಲವರು ಅತಿ ವೇಗದಿಂದ ವಾಹನ ಚಲಾಯಿಸಿ ರಸ್ತೆ ಸುರಕ್ಷತಾ ಕಾನೂನನ್ನು ಪಾಲಿಸದೇ ಜೀವ ಕಳೆದುಕೊಂಡಿದ್ದಾರೆ. ವರ್ಷದಲ್ಲಿ 20ಕ್ಕೂ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಇದರಲ್ಲಿ ಐದಾರು ವಾಹನ ಸವಾರರು, ಸಹಪ್ರಯಾಣಿಕರು ಮೃತಪಟ್ಟಿದ್ದಾರೆ. ಇನ್ನು ಕೆಲ ಸಣ್ಣಪುಟ್ಟ ಅಪಘಾತಗಳು ಜನತೆಗೆ ಗೊತ್ತಾಗುವುದರೊಳಗೆ ವಾಹನ ಸವಾರರು ಸ್ಥಳದಿಂದ ಪರಾರಿಯಾಗಿದ್ದೂ ಇದೆ ಎಂದು ಸ್ಥಳೀಯರು ಹೇಳುತ್ತಾರೆ. ಕಳೆದ ಮೂರು ತಿಂಗಳಲ್ಲಿ ಆರೇಳು ಅಪಘಾತಗಳು ನಡೆದಿದ್ದು, ಇದರಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನು ಅರಿತ ರಸ್ತೆ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆಯ ವತಿಯಿಂದ ಕೋಲಸಿರ್ಸಿ ಕ್ರಾಸ್​ನ ಸಿದ್ದಾಪುರ- ಶಿರಸಿ ರಾಜ್ಯ ಹೆದ್ದಾರಿ ಕೂಡುವ ಅನತಿ ದೂರದ ಎರಡು ಕಡೆಯಲ್ಲಿ, ಕೋಲಸಿರ್ಸಿ ರಸ್ತೆ ಹಾಗೂ ಕಸ್ತೂರು ರಸ್ತೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ರೋಡ್ ಹಂಪ್ಸ್, ರಸ್ತೆಗೆ ಬಣ್ಣ, ರಾತ್ರಿ ಸಮಯವೂ ವಾಹನ ಸವಾರರಿಗೆ ತಿಳಿಯಬೇಕೆಂದು ರೇಡಿಯಂ ಅಳವಡಿಸಲಾಗಿದೆ ಎಂದು ಸಿದ್ದಾಪುರದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಅನಿಲಕುಮಾರ ತಿಳಿಸಿದ್ದಾರೆ.