ಗುಂಡ್ಲುಪೇಟೆ: ತಾಲೂಕಿನ ಹಿರೀಕಾಟಿ ಸಮೀಪ ಮಂಗಳವಾರ ತಡರಾತ್ರಿ ವೈದ್ಯ ವಿದ್ಯಾರ್ಥಿಗಳಿದ್ದ ಸ್ಕೂಟಿಗೆ ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕೇರಳದ ತ್ರಿಚೂರ್ ಮೂಲದ ಮಹಮದ್ ಅಮೀನ್ ಫರಾನ್(22) ಮೃತ. ಮತ್ತೊಬ್ಬ ಸವಾರ ಆದರ್ಶ್ ಜಕಾರೆಡ್ಡಿ ತೀವ್ರ ಗಾಯಗೊಂಡಿದ್ದಾನೆ. ಘಟನೆಯಲ್ಲಿ ಫರಾನ್ ಸ್ಥಳದಲ್ಲೇ ಮೃತಪಟ್ಟರೆ, ಬೇಗೂರು ಠಾಣೆ ಪೊಲೀಸರು ಗಾಯಾಳು ಆದರ್ಶ್ ಜಕಾರೆಡ್ಡಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಬುಧವಾರ ಮೃತನ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ವಾರಸುದಾರರಿಗೆ ನೀಡಲಾಯಿತು.
ತೀವ್ರ ಅಪಘಾತ ವಲಯ: ತಾಲೂಕಿನ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಹಿರೀಕಾಟಿ, ಅರೇಪುರ, ಗರಗನಹಳ್ಳಿ, ಬೆಂಡಗಳ್ಳಿ ಗೇಟ್‌ಗಳು ತೀವ್ರ ಅಪಘಾತದ ವಲಯಗಳಾಗಿದ್ದು ಪ್ರತಿ ದಿನವೂ ಒಂದಲ್ಲಾ ಒಂದು ಕಡೆ ಅಪಘಾತಗಳು ಸಂಭವಿಸುತ್ತಲೇ ಇವೆ. ಬಂಡೀಪುರದ ಚೆಕ್‌ಪೋಸ್ಟ್‌ಗಳನ್ನು ರಾತ್ರಿ 9 ಗಂಟೆಗೆ ಬಂದ್ ಮಾಡುವುದರಿಂದ ನೆರೆಯ ಕೇರಳ ಹಾಗೂ ತಮಿಳುನಾಡಿಗೆ ಹೋಗುವ ಅಂತಾರಾಜ್ಯ ವಾಹನಗಳು ಅತಿ ವೇಗವಾಗಿ ಸಂಚರಿಸುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಪೊಲೀಸ್ ಇಲಾಖೆಯು ಸಾರಿಗೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳ ಜತೆಗೂಡಿ ಅತಿಹೆಚ್ಚಿನ ಅಪಘಾತ ಸಂಭವಿಸುತ್ತಿದ್ದ ಸ್ಥಳಗಳನ್ನು ಗುರುತಿಸಿ ಸಿಗ್ನಲ್ ದೀಪ ಹಾಗೂ ವೈಟ್ ಮ್ಯಾಪಿಂಗ್ ಮಾಡಿಸಲಾಗಿತ್ತು. ಬಳಿಕ ಅಪಘಾತಗಳು ಕಡಿಮೆಯಾದರೂ ಇತ್ತೀಚೆಗೆ ರಾತ್ರಿ ವೇಳೆ ಹೆಚ್ಚಾಗುತ್ತಿದೆ.
ಎಲ್‌ಇಡಿ ಲೈಟ್ ಬಳಕೆ: ರಾತ್ರಿ ವೇಳೆ ಸಂಚರಿಸುವ ವಾಹನಗಳು ಎಲ್‌ಇಡಿ ಲೈಟ್ ಬಳಕೆ ಮಾಡುತ್ತಿರುವುದು ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಎಲ್‌ಇಡಿ ಬಳಕೆ ಮಾಡುವ ವಾಹನಗಳಿಗೆ ದಂಡ ವಿಧಿಸುವಂತೆ ಇತ್ತೀಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಪೊಲೀಸರಿಗೆ ಆದೇಶ ನೀಡಿದ್ದರೂ ಅದು ಪಾಲನೆಯಾಗುತ್ತಿಲ್ಲ.