Hanagal,Three, killed, in, accident, ಅಪಘಾತದಲ್ಲಿ, ಮೂವರ, ಸಾವು,

ಅಪಘಾತದಲ್ಲಿ ಮೂವರ ಸಾವು

ಹಾನಗಲ್ಲ: ಕಾರು ಹಾಗೂ ಖಾಸಗಿ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಸಮೀಪದ ಗೆಜ್ಜಿಹಳ್ಳಿ ಗ್ರಾಮದ ಬಳಿ ಭಾನುವಾರ ನಡೆದಿದೆ.

ಬ್ಯಾಡಗಿ ನಿವಾಸಿ ಶಾಹಿನಾ ಅಬ್ದುಲ್​ಖಾದರ್ ರಹಿಮಾನನವರ (32), ಮುಸ್ಕಾನ ಅಬ್ದುಲ್​ಖಾದರ್ ರಹಿಮಾನನವರ (17) ಸ್ಥಳದಲ್ಲೇ ಮೃತಪಟ್ಟರೆ, ವಾಹನ ಚಲಾಯಿಸುತ್ತಿದ್ದ ಅಬ್ದುಲ್​ಖಾದರ್ ಮಹ್ಮದ್​ಗೌಸ್ ರಹಿಮಾನನವರ (50) ಹುಬ್ಬಳ್ಳಿ ಕಿಮ್ಸ್​ಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ದಂಪತಿ ಅಬ್ದುಲ್​ಖಾದರ್- ಶಾಹಿನಾ ಮತ್ತು ಮಗಳು ಮುಸ್ಕಾನ ಅಪಘಾತದಲ್ಲಿ ಮೃತಪಟ್ಟ ನತದೃಷ್ಟರು.

ಮಹ್ಮದ್ ದಾನಿಷ್ ಅಬ್ದುಲ್​ಖಾದರ್ ರಹಿಮಾನನವರ (17), ಅಷ್ಪಾಕ್ ಅಬ್ದುಲ್​ಖಾದರ್ ರಹಿಮಾನನವರ (20) ತೀವ್ರ ಗಾಯಗೊಂಡಿದ್ದು, ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಲಾಗಿದೆ. ಬಸ್​ನಲ್ಲಿದ್ದ ಪ್ರೇಮಾ (25), ಬಸವರಾಜ (60), ಚಂದ್ರಮ್ಮ (35) ಗಾಯಗೊಂಡಿದ್ದಾರೆ. ಹಾನಗಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ರಹಿಮಾನನವರ ಮೆಣಸಿನಕಾಯಿ ವ್ಯಾಪಾರಿಯಾಗಿದ್ದು, ಬ್ಯಾಡಗಿಯಲ್ಲಿ ವಾಸವಿದ್ದಾರೆ. ಬ್ಯಾಡಗಿಯಿಂದ ಕಾರಿನಲ್ಲಿ ಐವರು ಹಾನಗಲ್ಲಿನ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಹಾನಗಲ್ಲನಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್​ಗೆ ಕಾರು ಡಿಕ್ಕಿ ಹೊಡೆದಿದೆ.