ಹುಬ್ಬಳ್ಳಿ: ಜಗತ್ತಿನಾದ್ಯಂತ ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಭಾರತ ಮುಂದಿದೆ. ವರದಿಯೊಂದರ ಪ್ರಕಾರ ಪ್ರತಿವರ್ಷ ದೇಶದಲ್ಲಿ 2.19 ಲಕ್ಷಕ್ಕೂ ಅಧಿಕ ಜನ ಅಪಘಾತದಲ್ಲಿ ಮೃತಪಡುತ್ತಾರೆ ಎಂದು ಕಿಮ್್ಸ ವಿಧಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಎ.ಎ. ನದಾಫ್ ಹೇಳಿದರು.
ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ಸಂಚಾರ ವಿಭಾಗದ ವತಿಯಿಂದ ಇಲ್ಲಿನ ಬಿವಿಬಿ ಕಾಲೇಜು ಬಯೋಟೆಕ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಶೇ. 63ರಷ್ಟು ಜನ ಅತಿವೇಗದಿಂದ, ಶೇ. 16ರಷ್ಟು ಜನ ಸೀಟ್ ಬೆಲ್ಟ್ ಧರಿಸದೇ, ಶೇ. 29ರಷ್ಟು ಜನ ಹೆಲ್ಮೆಟ್ ಧರಿಸದೇ ಸಾವನ್ನಪ್ಪುತ್ತಾರೆ. ಕಿಮ್ಸ್ನಲ್ಲಿ ಪ್ರತಿ ವರ್ಷ 1500ಕ್ಕೂ ಹೆಚ್ಚು ಮರಣೋತ್ತರ ಪರೀಕ್ಷೆ ದಾಖಲಾಗುತ್ತವೆ. ಅದರಲ್ಲಿ 400ರಿಂದ 500 ಜನ ಅಪಘಾತದಿಂದಲೇ ಮೃತಪಟ್ಟಿರುತ್ತಾರೆ. ಹಾಗಾಗಿ, ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸುವ ಮೂಲಕ ಅಮೂಲ್ಯವಾದ ಜೀವ ರಕ್ಷಿಸಬೇಕು ಎಂದರು.
ಪೊಲೀಸ್ ಆಯುಕ್ತ ಆರ್. ದಿಲೀಪ ಮಾತನಾಡಿ, ವಿದೇಶದಲ್ಲಿ 100 ಜನರಿಗೆ ಒಬ್ಬ ಪೊಲೀಸ್ ಇದ್ದಾರೆ. ಆದರೆ, ನಮ್ಮ ದೇಶದಲ್ಲಿ 2 ಸಾವಿರ ಜನರಿಗೆ ಒಬ್ಬ ಪೊಲೀಸ್ ಇದ್ದಾರೆ. ಹಾಗಾಗಿ, ನಾಗರಿಕರ ಸಹಕಾರ ಪೊಲೀಸರಿಗೆ ಬೇಕು. ಪೊಲೀಸರು ನಮ್ಮವರು ಎಂಬ ಭಾವನೆ ಜನರಲ್ಲಿ ಬರಬೇಕು. ಆಗ ಮಾತ್ರ ಉತ್ತಮ ಪೊಲೀಸಿಂಗ್ ಸಾಧ್ಯ. ಯಾವುದೇ ಅಪಘಾತ, ಕೊಲೆ ಇನ್ನಿತರ ಘಟನೆ ನೋಡಿದರೆ ಸಾಕ್ಷಿ ಹೇಳಲು ಹಿಂದೇಟು ಹಾಕಬಾರದು. ಅದರಿಂದ ಒಬ್ಬ ಆರೋಪಿಗೆ ಶಿಕ್ಷೆ ನೀಡುವ ಮೂಲಕ 100 ಅಪರಾಧ ತಡೆಯಬಹುದು ಎಂದರು.
ಡಿಜಿ ನೀಲಮಣಿ ರಾಜು ಅಭಿನಂದನೆ: ತೀವ್ರವಾಗಿ ಅಸ್ವಸ್ಥಗೊಂಡಿದ್ದ ಎರಡು ನವಜಾತ ಶಿಶುಗಳನ್ನು ಹಾವೇರಿಯಿಂದ ಹುಬ್ಬಳ್ಳಿಗೆ ಕಿಮ್ಸ್ಗೆ ರವಾನಿಸುವ ವೇಳೆ ಝೀರೋ ಟ್ರಾಫಿಕ್ ಮೂಲಕ ಸಹಕಾರ ನೀಡಿದ ಸಂಚಾರ ವಿಭಾಗದ ಎಸಿಪಿ ಎಸ್.ಎಂ. ಸಂದಿಗವಾಡ ನೇತೃತ್ವದ ತಂಡಕ್ಕೆ ಡಿಜಿ ನೀಲಮಣಿ ರಾಜು ಅವರು ಅಭಿನಂದಿಸಿದ್ದಾರೆ ಎಂದು ಆಯುಕ್ತರು ತಿಳಿಸಿದರು.
ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ, ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತ್ತವಾಡಮಠ, ಡಿಸಿಪಿ ಎಸ್.ವಿ. ಯಾದವ, ಎಸಿಪಿ ಎಸ್.ಎಂ. ಸಂದಿಗವಾಡ, ಸಂಚಾರ ವಿಭಾಗದ ಇನ್ಸ್ಪೆಕ್ಟರ್ಗಳಾದ ಪ್ರಶಾಂತ ನಾಯಕ, ಮಹಾಂತೇಶ ಹೊರಪೇಟ, ರತನಕುಮಾರ ಜೀರಗ್ಯಾಳ, ಮಲ್ಲಿಕಾರ್ಜುನ ನಿಡವಣಿ ಮತ್ತಿತರರು ಉಪಸ್ಥಿತರಿದ್ದರು.