ಅಪಘಾತಗಳು ಕೊಲೆಯಂತೇ ಭೀಕರ

ಹುಬ್ಬಳ್ಳಿ: ಎಲ್ಲರೂ ಮೊದಲು ಸಂಚಾರ ನಿಯಮಗಳನ್ನು ತಿಳಿದುಕೊಳ್ಳಬೇಕು. ನಂತರ ಅಳವಡಿಸಿಕೊಳ್ಳಬೇಕು. ಏಕೆಂದರೆ ಕಾನೂನು ಉಲ್ಲಂಘನೆ ಮಾಡುವುದು ಮಹಾಪರಾಧ ಎಂದು ಹು-ಧಾ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಹೇಳಿದರು.

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ವತಿಯಿಂದ ಜಿಲ್ಲಾಡಳಿತ, ಸಾರಿಗೆ, ಪೊಲೀಸ್, ಶಿಕ್ಷಣ, ಆರೋಗ್ಯ, ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಪಘಾತಗಳು ಕೊಲೆಯಂತೇ ಭೀಕರವಾಗಿರುತ್ತವೆ. ಎರಡರಲ್ಲೂ ರಕ್ತಪಾತ ಇರುತ್ತದೆ. ಹು-ಧಾ ವ್ಯಾಪ್ತಿಯಲ್ಲಿ 2017ರಲ್ಲಿ 300ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದವು. 20 ಕೊಲೆಗಳು ನಡೆದಿದ್ದವು. 2018ರಲ್ಲಿ 400ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 26 ಕೊಲೆಗಳು ನಡೆದಿದ್ದವು. 2017ರಲ್ಲಿ 3 ಕೋಟಿ ರೂ. ದಂಡ ಸಂಗ್ರಹಿಸಲಾಗಿತ್ತು. 2018ರಲ್ಲಿ 6.50 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. ವಿದೇಶದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನುಗಳಿವೆ. ಮೊದಲ ಬಾರಿ, ಎರಡನೇ ಬಾರಿ ದಂಡ ವಿಧಿಸುತ್ತಾರೆ. ಮೂರನೇ ಬಾರಿ ಲೈಸನ್ಸ್ ರದ್ದು ಮಾಡಲಾಗುತ್ತದೆ ಎಂದರು.

ಜೀವಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಸ್ಪೀಡ್ ಥ್ರಿಲ್ಸ್ ಬಟ್ ಕಿಲ್ಸ್ ಎಂಬುದನ್ನು ಅರಿಯಬೇಕು. ಒಳ್ಳೆಯ ಹೆಲ್ಮೆಟ್ ಧರಿಸಿ ಸಂಚಾರ ನಿಯಮ ಪಾಲಿಸುವಂತೆ ನಿಮ್ಮ ತಂದೆ- ತಾಯಿ, ಸಹೋದರ, ಸಹೋದರಿಯರಿಗೆ ತಿಳಿ ಹೇಳಬೇಕು ಎಂದರು.

ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ ಮಾತನಾಡಿ, ಜಗತ್ತಿನಲ್ಲಿ ಅತಿ ಹೆಚ್ಚು ಅಪಘಾತ ಸಂಭವಿಸುವುದು ಭಾರತದಲ್ಲಿ. ಒಂದು ಗಂಟೆಗೆ 55 ಅಪಘಾತಗಳು ಸಂಭವಿಸಿ, 17 ಜನ ಮೃತಪಡುತ್ತಿದ್ದಾರೆ. ವಾಹನ ಚಾಲಕರು, ಪ್ರಯಾಣಿಕರು, ಪಾದಚಾರಿಗಳಿಂದ ಈ ಪ್ರಮಾಣ ಕಡಿಮೆ ಮಾಡುವ ಪ್ರಯತ್ನ ಆಗಬೇಕಿದೆ ಎಂದರು.

ರಸ್ತೆ ಸುರಕ್ಷೆ ಕುರಿತು ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾಧಿಕಾರಿ ದೀಪಾ ಚೋಳನ್, ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು. ಅಪಘಾತ ರಹಿತ ಸರ್ಕಾರಿ ವಾಹನಗಳ ಚಾಲಕರನ್ನು ಸನ್ಮಾನಿಸಲಾಯಿತು. ಸಪ್ತಾಹದ ಕುರಿತು ಜಾಗೃತಿಗಾಗಿ ರೇಡಿಯೊ ಜಾಕಿ ರೆಡ್ ಎಫ್​ಎಂನ ಆರ್​ಜೆ ಮಾಹಿ ಅವರನ್ನು ಸನ್ಮಾನಿಸಲಾಯಿತು.

ಡಿಸಿಪಿ ರವೀಂದ್ರ ಗಡಾದಿ, ಆರ್​ಟಿಒ ಅಧಿಕಾರಿ ರವೀಂದ್ರ ಕವಲಿ, ಡಿವೈಎಸ್​ಪಿ ರಾಮನಗೌಡ, ರವಿ ನಾಯಕ, ಸಂಚಾರ ವಿಭಾಗದ ಎಸಿಪಿ ಎಂ.ವಿ. ನಾಗನೂರ, ಎಸಿಪಿಗಳಾದ ಎಂ.ಎನ್. ರುದ್ರಪ್ಪ, ಎಚ್.ಕೆ. ಪಠಾಣ, ಶ್ರೀಕಾಂತ ಕಟ್ಟಿಮನಿ, ಇನ್ಸ್​ಪೆಕ್ಟರ್​ಗಳಾದ ಮುರುಗೇಶ ಚನ್ನಣ್ಣವರ, ಎಸ್.ಎಫ್. ತೊಟಗಿ, ಶ್ರೀಪಾದ ಜಲ್ದೆ, ಇತರರು ಉಪಸ್ಥಿತರಿದ್ದರು.

‘ಹೃದಯವಂತ ನಾಗರಿಕ ಪ್ರಶಸ್ತಿ’

ಹು-ಧಾ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಅವರಿಗೆ ‘ಹೃದಯವಂತ ನಾಗರಿಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭಕ್ಕೆ ಆಗಮಿಸುತ್ತಿದ್ದ ವೇಳೆ ಧಾರವಾಡದ ನುಗ್ಗಿಕೇರಿ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ಶಾಲಾ ಮಕ್ಕಳ ಮೇಲೆ ಕಾರೊಂದು ಹರಿದಿತ್ತು. ಅದನ್ನು ಕಣ್ಣಾರೆ ಕಂಡ ಪೊಲೀಸ್ ಆಯುಕ್ತರು ಕೂಡಲೇ ತಮ್ಮ ವಾಹನದಲ್ಲಿ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದರು. ಅದರಲ್ಲಿ ಪೂಜಾ ಎಂಬ ವಿದ್ಯಾರ್ಥಿನಿ ತಲೆಗೆ ಪೆಟ್ಟಾಗಿತ್ತು, ಮತ್ತೊಬ್ಬ ವಿದ್ಯಾರ್ಥಿ ತಲೆಗೆ ಪೆಟ್ಟಾಗಿತ್ತು. ಮಕ್ಕಳ ಜೀವ ಉಳಿಸಿದ ಆಯುಕ್ತರನ್ನು ‘ಹೃದಯವಂತ ನಾಗರಿಕ ಪ್ರಶಸ್ತಿ’ಗೆ ಆಯ್ಕೆ ಮಾಡಲಾಯಿತು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.

ಅಪಘಾತಗಳು ಸಂಭವಿಸಿದಾಗ ಕೆಲವರು ಮೊಬೈಲ್​ನಲ್ಲಿ ಚಿತ್ರೀಕರಣ ಮಾಡುತ್ತ ವಿಕೃತಿ ಮೆರೆಯುತ್ತಾರೆ. ಅಪಘಾತ ಸಂಭವಿಸಿದರೆ ತಕ್ಷಣ 108 ಆಂಬುಲೆನ್ಸ್​ಗೆ ಕರೆ ಮಾಡಿ ತಿಳಿಸಬೇಕು. ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು.

| ದೀಪಾ ಚೋಳನ್, ಜಿಲ್ಲಾಧಿಕಾರಿ