ಅನ್ನದಾತರಿಗೆ ಸಚಿವ ಜಮೀರ್ ಅಭಯ!

ಹಾವೇರಿ: ನಿಮ್ಮೊಂದಿಗೆ ನಾವಿದ್ದೇವೆ. ನನ್ನನ್ನು ನಂಬಿ, ನಿಮ್ಮ ಸಮಸ್ಯೆ ನನಗೆ ತಿಳಿಸಿ, ಟೈಂಬಾಂಡ್ ಹಾಕಿಕೊಂಡು ಸಮಸ್ಯೆ ಪರಿಹರಿಸಲು ಶ್ರಮಿಸುತ್ತೇನೆ. ನಿಮ್ಮನ್ನು ಬೆಂಗಳೂರಿಗೆ ಕರೆದೊಯ್ದು ಸಿಎಂ ಭೇಟಿ ಮಾಡಿಸಿ ಸಮಸ್ಯೆ ಬಗೆಹರಿಸುತ್ತೇನೆ. ಇಲ್ಲವಾದರೆ ನಿಮಗೆ ಮುಖ ತೋರಿಸೋಲ್ಲ…!

ಹೀಗೆಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರು ಜಿಲ್ಲೆಯ ರೈತರು ಹಾಗೂ ರೈತ ಮುಖಂಡರೊಂದಿಗೆ ಗುರುವಾರ ಜಿ.ಪಂ. ಸಭಾಭವನದಲ್ಲಿ ನಡೆಸಿದ ಸಂವಾದದಲ್ಲಿ ಅಭಯ ನೀಡಿದರು.

ಫೆಬ್ರವರಿಯಲ್ಲಿ ರಾಜ್ಯ ಬಜೆಟ್ ಅಧಿವೇಶನ ನಡೆಯಲಿದ್ದು, ಜಿಲ್ಲೆಯ ಐದಾರು ರೈತ ಮುಖಂಡರನ್ನು ಕರೆಸಿಕೊಂಡು ಸಂಬಂಧಿಸಿದ ಎಲ್ಲ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ ನಿಮ್ಮ ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಿಮಗೆ ವಸತಿ, ಸಾರಿಗೆ ವ್ಯವಸ್ಥೆಯನ್ನು ನಾನೇ ಮಾಡುತ್ತೇನೆ ಎಂದರು.

ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ, ಮಲ್ಲೇಶಪ್ಪ ಪರಪ್ಪನವರ ಮಾತನಾಡಿ, 2015-16ನೇ ಸಾಲಿನಿಂದ ಬೆಳೆ ವಿಮೆ ಹಣ ಬಂದಿಲ್ಲ. ಡಬಲ್ ಎಂಟ್ರಿ ಸೇರಿ ವಿವಿಧ ಕಾರಣಕ್ಕೆ 35 ಕೋಟಿ ರೂ. ಹಣ ಬಾಕಿಯಿದೆ. ಅಕ್ಕಿ, ಭತ್ತದ ವ್ಯತ್ಯಾಸದ ಹಣ ಇನ್ನೂವರೆಗೂ ಕೊಟ್ಟಿಲ್ಲ. ಜಿಲ್ಲಾಧಿಕಾರಿ ಒಂದು ಆದೇಶ ಮಾಡಿದರೆ ಸಮಸ್ಯೆ ಬಗೆಹರಿಯುತ್ತಿತ್ತು ಎಂದು ದೂರಿದರು.

ಇದರಿಂದ ಗರಂ ಆದ ಸಚಿವ ಜಮೀರ್ ಅಹ್ಮದ್ ಈ ಕುರಿತು ಕೃಷಿ ಇಲಾಖೆ ಜಂಟಿ ನಿರ್ದೇಶಕರ ವಿರುದ್ಧ ಹರಿಹಾಯ್ದು, ಇಷ್ಟು ದಿನಗಳಿಂದ ನೀವೇನ್ರಿ ಮಾಡ್ತಾ ಇದ್ದೀರಿ. ನನ್ನ ಗಮನಕ್ಕೆ ಏಕೆ ತಂದಿಲ್ಲ. ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದರೆ ನಿಮ್ಮ ಕೆಲ್ಸಾ ಮುಗೀತಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಮಸ್ಯೆಗೆ 2 ತಿಂಗಳಲ್ಲಿ ಪರಿಹಾರ ಕೊಡಿಸುವುದಾಗಿ ಸಚಿವರು ಭರವಸೆ ನೀಡಿದರು.

ಇದಕ್ಕೆ ಒಪ್ಪದ ರೈತ ಮಲ್ಲೇಶಪ್ಪ, ಸಾಹೇಬ್ರ ಈ ರೀತಿಯ ಭರವಸೆಗಳು ಮೂರು ವರ್ಷದಿಂದ ಸಿಗ್ತಾಯಿವೆ. 3 ತಿಂಗಳಿಗೊಬ್ಬ ಅಧಿಕಾರಿ, ಮಂತ್ರಿ ಬದಲಾಗ್ತಾರೆ. ಎಲ್ಲರೂ ಬಂದು ಇದನ್ನೇ ಹೇಳಿದ್ರಾ ನಮ್ಮ ಗತಿಯೇನು ಎಂದು ಏರು ಧ್ವನಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಆಗ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ, ಜಿಲ್ಲೆಯಲ್ಲಿ ಅಕ್ಕಿ, ಭತ್ತದ ವ್ಯತ್ಯಾಸದ 13 ಕೋಟಿ ರೂ. ವಿಮೆ ಬಾಕಿಯಿದೆ. ಇದರಲ್ಲಿ ನಾನು ಯಾವುದೇ ಆದೇಶ ಮಾಡಲು ಬರುವುದಿಲ್ಲ. ಸರ್ಕಾರದ ಆದೇಶದಂತೆ ಬೆಳೆ ಕಟಾವು ಸಮೀಕ್ಷೆ ನಡೆದಿದೆ. ರಾಜ್ಯದಲ್ಲಿ 10 ಸಾವಿರ ಕೋಟಿಯಷ್ಟು ಲಾಭ ವಿಮೆ ಕಂಪನಿಯವರಿಗೆ ಆಗಿದೆ. ಅಲ್ಲದೆ, ರಾಜ್ಯದಲ್ಲಿಯೇ ಅಕ್ಕಿ, ಭತ್ತ ವ್ಯತ್ಯಾಸದ 209 ಕೋಟಿ ರೂ. ಬಾಕಿ ಬರಬೇಕಿದೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಸರ್ಕಾರವೇ ವಿಮೆ ತುಂಬುವಂತಾಗಬೇಕು. ರೈತರ ಹಣವನ್ನು ಲೂಟಿಕೋರರಿಗೆ ನೀಡುವ ವಿಮೆ ನಮಗೆ ಬೇಡ. ಕೂಡಲೇ ವಿಮಾ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿ ನಮಗೆ ಪರಿಹಾರ ಕೊಡಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ರವೀಂದ್ರಗೌಡ ಪಾಟೀಲ, ರಾಜಶೇಖರ ದೂದೀಹಳ್ಳಿ ಮಾತನಾಡಿ, ಬಗರ್​ಹುಕುಂ ಸಾಗುವಳಿದಾರರಿಗೆ ಪಟ್ಟ ಕೊಟ್ಟಿಲ್ಲ. ಕೂಡಲೇ ಪಟ್ಟ ಕೊಡಿಸುವ ವ್ಯವಸ್ಥೆ ಮಾಡಿ, ಸಾಲಮನ್ನಾ ಯೋಜನೆಯಲ್ಲಿರುವ ಗೊಂದಲಗಳನ್ನು ಬಗೆಹರಿಸಿ ರೈತರ ಆತ್ಮಹತ್ಯೆ ತಪ್ಪಿಸಿ, ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ಕೊಡಿ ಎಂದರು.

ಸಭೆಯಲ್ಲಿ ವಿಪ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಜಿ.ಪಂ. ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಎಸ್​ಪಿ ಕೆ. ಪರಶುರಾಮ ಇತರರಿದ್ದರು.

2015-16ನೇ ಸಾಲಿನಲ್ಲಿ ಡಬಲ್ ಎಂಟ್ರಿ, ಎರಿಯಾ ಡಿಡೆಕ್ಷನ್ ಕಾರಣದಿಂದ ಸಾಕಷ್ಟು ಗೊಂದಲವಾಗಿತ್ತು. ಡಬಲ್ ಎಂಟ್ರಿ ಪ್ರಕರಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲ, ಎರಿಯಾ ಡಿಡೆಕ್ಷನ್ ಪ್ರಕರಣ ಸರಿಪಡಿಸಿ ಹಣ ಜಮೆ ಮಾಡಲು ಅವಕಾಶವಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ ತಂತ್ರಾಂಶದಲ್ಲಿ ಮೇಜರ್, ಮೈನರ್ ಸಮಸ್ಯೆಯಿಂದಾಗಿ 11.55ಕೋಟಿ ರೂ. ಬಾಕಿಯಿದೆ. ಈ ಕುರಿತು ಸಂಪುಟ ಸಭೆಯಲ್ಲಿಯೂ ಚರ್ಚೆಯಾಗಿದೆ.
ಮಂಜುನಾಥ, ಕೃಷಿ ಜಂಟಿ ನಿರ್ದೇಶಕ