ಅನು-ರಘು ಪುತ್ರಿ ಹೆಸರು ನಂದನಾ

ಬೆಂಗಳೂರು: ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ದಂಪತಿ ಮನೆಯಲ್ಲಿ ಈಗ ಸಂಭ್ರಮವೋ ಸಂಭ್ರಮ. 2018ರ ಆಗಸ್ಟ್ 15ರಂದು ತಮಗೆ ಹೆಣ್ಣು ಮಗು ಜನಿಸಿದೆ ಎಂದು ಈ ಜೋಡಿ ಸಿಹಿ ಸಮಾಚಾರ ತಿಳಿಸಿತ್ತು. ಈಗ ಆ ಮುದ್ದಾದ ಮಗುವಿಗೆ ನಾಮಕರಣ ಮಾಡಿದ್ದಾರೆ. ನಂದನಾ ಪ್ರಭಾಕರ್ ಮುಖರ್ಜಿ ಎಂದು ಹೆಸರು ಇಡಲಾಗಿದೆ. ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅನು-ರಘು, ಮಗುವಿನ ಜತೆ ನಗು ಚೆಲ್ಲಿರುವ ಫೋಟೋ ಅಪ್​ಲೋಡ್ ಮಾಡಿಕೊಂಡಿದ್ದಾರೆ. ಈ ಜೋಡಿಗೆ ಅಭಿಮಾನಿಗಳು ಮತ್ತು ಚಂದನವನದ ಸೆಲೆಬ್ರಿಟಿಗಳು ಶುಭಾಶಯದ ಮಳೆ ಸುರಿಸುತ್ತಿದ್ದಾರೆ. ಪರಸ್ಪರ ಪ್ರೀತಿಸುತ್ತಿದ್ದ ಇವರಿಬ್ಬರೂ 2016ರ ಏಪ್ರಿಲ್​ನಲ್ಲಿ ಸಪ್ತಪದಿ ತುಳಿದಿದ್ದರು. ಸಾಮಾನ್ಯವಾಗಿ ಮಾಧ್ಯಮಗಳ ಕ್ಯಾಮರಾ ಕಣ್ಣಿನಿಂದ ತಮ್ಮ ಮಕ್ಕಳನ್ನು ದೂರ ಇಡುವ ಸೆಲೆಬ್ರಿಟಿಗಳೇ ಹೆಚ್ಚು. ಆದರೆ ಅನು-ರಘು ಹಾಗಲ್ಲ. ಈಗಾಗಲೇ ಪುತ್ರಿ ನಂದನಾ ಜತೆಗಿರುವ ಹತ್ತಾರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.