ಅನುಮೋದನೆ ಪಡೆಯದಿದ್ದರೆ ಅಮಾನತು

ರೋಣ: ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸಲ್ಲಿಸಲಾದ ಕ್ರಿಯಾ ಯೋಜನೆಗಳಿಗೆ ಇನ್ನೆರಡು ದಿನಗಳಲ್ಲಿ ಅನುಮೋದನೆ ಪಡೆಯದಿದ್ದರೆ, ತಾಪಂ ಇಒ ಸೇರಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು ಎಂದು ನೋಡಲ್ ಅಧಿಕಾರಿ ಪ್ರಾಣೇಶರಾವ್ ಎಚ್ಚರಿಕೆ ನೀಡಿದರು.

ಇಲ್ಲಿನ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗಾಗಿ ಗುರುವಾರ ಏರ್ಪಡಿಸಿದ್ದ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಇಲ್ಲಿನ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯ ಬೇಜವಾಬ್ದಾರಿತನದಿಂದ ಇಡೀ ಜಿಲ್ಲೆಯಲ್ಲಿಯೇ ನನಗೆ ತಲೆ ತಗ್ಗಿಸುವಂತಾಗಿದೆ. ಇಡೀ ತಾಲೂಕಿನ ಯಾವುದಾದರೂ ಒಂದು ಗ್ರಾಪಂನಲ್ಲಿ ಗ್ರಾಮ ಸಭೆ ನಡೆಸಿ, ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ಕರಪತ್ರ ಹಂಚಿದ ಉದಾಹರಣೆ ಇಲ್ಲ ಎಂದರು.

ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಸಂತೋಷ ಪಾಟೀಲ ಅವರಿಗೆ ನಿಮ್ಮ ತಾಲೂಕಿನ ಕಥೆ ಏನು ಎಂದು ಪ್ರಾಣೇಶರಾವ್ ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪಾಟೀಲ, ಈ ಬಗೆಗೆ ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದೇನೆ ಎಂದರು. ಯಾವಾಗ ನೀಡಿದ್ದೀರಿ ಎಂದು ಮರು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸಂತೋಷ ಸುಮಾರು ದಿನಗಳಾಯಿತು ಸರ್ ಎಂದರು. ಇದರಿಂದ ಗರಂ ಆದ ಪ್ರಾಣೇಶರಾವ್ ಕಾನೂನು ಕ್ರಮ ಜರುಗಿಸಿ ಎಂದು ಸೂಚಿಸಿದರು.