ಮುಂಡರಗಿ: ಖಾಸಗಿ ಮೊಬೈಲ್ ಕಂಪನಿಯೊಂದು ಅನುಮತಿ ಪಡೆಯದೆ ಪುರಸಭೆ ವ್ಯಾಪ್ತಿಯ ಕೆಲ ಭಾಗಗಳಲ್ಲಿ ಕೇಬಲ್ ಅಳವಡಿಸುವ ಕಾಮಗಾರಿ ಕೈಗೊಂಡಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ನೀರು ಪೂರೈಸುವ ಪೈಪ್ಲೈನ್ ಹಾಳಾಗಿವೆ.
ಪಟ್ಟಣದ ಹೇಮರಡ್ಡಿ ಮಲ್ಲಮ್ಮ ನಗರದಲ್ಲಿ ಖಾಸಗಿ ಕಂಪನಿಯ ಟಾವರ್ ಮೂಲಕ ಸ್ಥಳೀಯ ವಿ.ಜಿ. ಲಿಂಬಿಕಾಯಿ ಶಾಲೆಯಿಂದ ಕೊಪ್ಪಳ ಕ್ರಾಸ್ವರೆಗೆ ಒಎಫ್ಸಿ ಕೇಬಲ್ ಪೈಪ್ ಅಳವಡಿಸಲು ಪುರಸಭೆಯಿಂದ ಅನುಮತಿ ಪಡೆದುಕೊಂಡಿತ್ತು. ಅನುಮತಿ ಪಡೆದ 17ನೇ ವಾರ್ಡ್ನಲ್ಲಿ ಕೇಬಲ್ ಅಳವಡಿಸುವುದರ ಜೊತೆಗೆ ಅಕ್ರಮವಾಗಿ 3, 9, 10 ಮತ್ತು 11ನೇ ವಾರ್ಡ್ ವ್ಯಾಪ್ತಿಯ ಕೊಪ್ಪಳ ಸರ್ಕಲ್ನಿಂದ ಜಾಗೃತ್ ಸರ್ಕಲ್ವರೆಗೂ ಕಾಮಗಾರಿ ಕೈಗೊಳ್ಳಲಾಗಿದೆ.
ಕಂಪನಿಯವರು ರಾತ್ರೋರಾತ್ರಿ ಬೃಹತ್ ಯಂತ್ರಗಳ ಮೂಲಕ ಕಾಮಗಾರಿ ಕೈಗೊಂಡಿದ್ದರಿಂದ ರಸ್ತೆ, ರಸ್ತೆ ಬದಿಯ ಭೂಮಿಯಡಿಯಲ್ಲಿದ್ದ ಕುಡಿಯುವ ನೀರಿನ ಪೈಪುಗಳು ಸಂಪೂರ್ಣವಾಗಿ ಹಾಳಾಗಿದ್ದು, ಸಾರ್ವಜನಿಕರಿಗೆ ನೀರು ಪೂರೈಸುವುದು ಕಷ್ಟವಾಗಿದೆ.
9ನೇ ವಾರ್ಡ್ನಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗಬಾರದು ಎಂದು ಪುರಸಭೆಯ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಶುಕ್ರವಾರ ನೀರಿನ ಪೈಪ್ಲೈನ್ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.
ಪುರಸಭೆ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲು ಪುರಸಭೆ ಮುಖ್ಯಾಧಿಕಾರಿ ಮಾತ್ರ ಅನುಮತಿ ನೀಡಲು ಅವಕಾಶವಿದೆ. ಆದರೆ, ಪುರಸಭೆಯ ಕೆಳ ಹಂತದ ಅಧಿಕಾರಿಗಳು ಖಾಸಗಿ ಕಂಪನಿಯವರಿಗೆ ಪರವಾನಗಿ ನೀಡಿದ್ದಾರೆ. ಕೇಬಲ್ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡಿದ ಪುರಸಭೆ ಸಿಬ್ಬಂದಿಗೆ ಈ ಕುರಿತು ಕಾರಣ ಕೇಳಿ ಪುರಸಭೆ ಮುಖ್ಯಾಧಿಕಾರಿ ಎಸ್.ಎಚ್. ನಾಯಕ ಅವರು ಮಾ.3ರಂದು ನೋಟಿಸ್ ನೀಡಿದ್ದಾರೆ.
ಮಧ್ಯರಾತ್ರಿ ಕಾಮಗಾರಿ ಮಾಡುವುದು ಕಾನೂನುಬಾಹಿರ. ಖಾಸಗಿ ಕಂಪನಿಯ ಸಿಬ್ಬಂದಿ ಪರವಾನಗಿ ಪಡೆಯದ ಭಾಗದಲ್ಲಿ ಕೇಬಲ್ ಅಳವಡಿಸುವ ಕಾಮಗಾರಿ ಕೈಗೊಂಡು ಪುರಸಭೆ ಆಸ್ತಿಗೆ ಹಾನಿಯುಂಟು ಮಾಡಿದ್ದಾರೆ. ಇದರಲ್ಲಿ ಪುರಸಭೆ ಕೆಲ ಸಿಬ್ಬಂದಿ ಶಾಮೀಲಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಸದಸ್ಯ ಸಂತೋಷ ಹಿರೇಮನಿ ಒತ್ತಾಯಿಸಿದ್ದಾರೆ.
ಪರವಾನಗಿ ಪಡೆಯದ ಜಾಗದಲ್ಲಿ ಕಾಮಗಾರಿ ಕೈಗೊಂಡು ಪುರಸಭೆ ಆಸ್ತಿಗೆ ಹಾನಿಯುಂಟು ಮಾಡಿದ ಖಾಸಗಿ ಟಾವರ್ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರುವುದರ ಜೊತೆಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಕೇಬಲ್ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡಿದ ಪುರಸಭೆಯ ಸಿಬ್ಬಂದಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಮುಖ್ಯಾಧಿಕಾರಿ ಎಸ್.ಎಚ್. ನಾಯ್ಕರ ತಿಳಿಸಿದರು.