Tuesday, 11th December 2018  

Vijayavani

Breaking News

ಅನುಭವಕ್ಕೆ ಮಣೆ-ಹೊಣೆ

Sunday, 07.01.2018, 3:04 AM       No Comments

| ಉಮೇಶ್‌ಕುಮಾರ್ ಶಿಮ್ಲಡ್ಕ

ಸದ್ಯದ ಜಾಗತಿಕ ವಿದ್ಯಮಾನಗಳನ್ನು ಅವಲೋಕಿಸಿದರೆ ಭಾರತದ ಮಟ್ಟಿಗೆ ವಿದೇಶಾಂಗ ಕಾರ್ಯದರ್ಶಿ ಸ್ಥಾನ ಬಹಳ ಮಹತ್ವದ್ದು.ಬದಲಾಗುತ್ತಿರುವ ಜಾಗತಿಕ ರಾಜಕೀಯ ವ್ಯವಸ್ಥೆಯಲ್ಲಿ ಭಾರತದ ಪ್ರತಿ ನಡೆಯೂ ಎಚ್ಚರಿಕೆ ಹಾಗೂ ಜಾಣ್ಮೆಯದ್ದಾಗಿರಬೇಕು. ಒಂದೆಡೆ ಪಾಕಿಸ್ತಾನ, ಮತ್ತೊಂದೆಡೆ ಚೀನಾ ಕಿರಿಕಿರಿ ಇರುವ ಹಿನ್ನೆಲೆಯಲ್ಲಿ ಆಯಕಟ್ಟಿನ ಸ್ಥಾನಕ್ಕೆ ಅರ್ಹರನ್ನು ಆಯ್ಕೆ ಮಾಡದೆ ಹೋದರೆ ತೊಂದರೆ ತಪ್ಪಿದ್ದಲ್ಲ. ಈ ತಿಂಗಳ ಕೊನೆಯಲ್ಲಿ ಹೊಸ ವಿದೇಶಾಂಗ ಕಾರ್ಯದರ್ಶಿಯಾಗಿ ಹಿರಿಯ ರಾಜತಾಂತ್ರಿಕ ಅಧಿಕಾರಿ ವಿಜಯ್ ಕೇಶವ ಗೋಖಲೆ ಅಧಿಕಾರ ಸ್ವೀಕರಿಸಲಿದ್ದಾರೆ. ಹಾಲಿ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಸ್ಥಾನವನ್ನು ಗೋಖಲೆ ತುಂಬಲಿದ್ದಾರೆ. ಈ ನೇಮಕವನ್ನು ಅವಲೋಕಿಸಿದರೆ ಸರ್ಕಾರದ ನಡೆಯಲ್ಲಿ ‘ಮುಂದೆ ವಿಷಾದಿಸುವುದಕ್ಕಿಂತ ಈಗ ಮುನ್ನೆಚ್ಚರಿಕೆ ವಹಿಸೋದು ಲೇಸು’ ಎಂಬ ನೀತಿಯನ್ನು ಕಾಣಬಹುದು.

ವಿದೇಶಾಂಗ ಕಾರ್ಯದರ್ಶಿ ಹೊಣೆಗಾರಿಕೆಯನ್ನು ನಿಭಾಯಿಸಿದ ಕಳೆದ ಆರು ಜನರ ಪೈಕಿ ಜೈಶಂಕರ್ ಸೇರಿ ನಾಲ್ವರು ಚೀನಾದಲ್ಲಿ ರಾಯಭಾರಿಗಳಾಗಿ ಕೆಲಸ ಮಾಡಿದವರೆಂಬುದು ವಿಶೇಷ. ಅವರೆಲ್ಲ ಚೀನಾದ ಮ್ಯಾಂಡ್ರಿನ್ ಭಾಷೆಯಲ್ಲಿ ಪರಿಣತರು. ಗೋಖಲೆಯವರೂ ಚೀನಾದಲ್ಲಿ ಭಾರತದ ರಾಯಭಾರಿಯಾಗಿದ್ದವರು. ವಿಶೇಷವಾಗಿ ಡೋಕ್ಲಾಂ ಬಿಕ್ಕಟ್ಟು (16.6.2017-28.08.2017) ಪರಿಹರಿಸುವ ಸಂದರ್ಭದಲ್ಲಿ ಇವರ ಹೆಸರೂ ಪ್ರಮುಖವಾಗಿ ಕೇಳಿ ಬಂದಿತ್ತು. ಹೀಗಾಗಿ ಗೋಖಲೆ ನೇಮಕದ ಹಿಂದೆ ಚೀನಾದ ಜತೆಗಿನ ಒಡನಾಟಕ್ಕೆ ಆದ್ಯತೆ ನೀಡುವ ಭಾರತ ಸರ್ಕಾರದ ರಾಜತಾಂತ್ರಿಕ ನಡೆ ಎದ್ದು ಕಾಣುತ್ತಿದೆ.

ಗೋಖಲೆಯವರು 1981ರ ಬ್ಯಾಚಿನ ವಿದೇಶಾಂಗ ಸೇವೆ ಅಧಿಕಾರಿಯಾಗಿದ್ದು, ಕೊನೆಯದಾಗಿ ಬೀಜಿಂಗ್‌ನಲ್ಲಿ ಭಾರತದ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಸಿಕ್ಕಿಂ ಗಡಿಭಾಗದ ಡೋಕ್ಲಾಂನಲ್ಲಿ ಚೀನಾ ಸೈನ್ಯ ಅತಿಕ್ರಮಿಸಿದಾಗ ಉಂಟಾದ ಬಿಕ್ಕಟ್ಟಿನ ವೇಳೆ ಆ ಉದ್ವಿಗ್ನ ಸ್ಥಿತಿಯನ್ನು ಸರಿದೂಗಿಸಲು ಎಸ್.ಜೈಶಂಕರ್ ಅವರ ಜತೆಗೆ ಅವಿರತ ಪ್ರಯತ್ನಿಸಿದವರಲ್ಲಿ ಗೋಖಲೆಯವರೂ ಒಬ್ಬರು. ಹಾಗೆಯೇ, ಯುಪಿಎ ಸರ್ಕಾರದ ಅವಧಿಯಲ್ಲಿ 2013ರಲ್ಲಿ ಡೆಪ್ಸಾಂಗ್‌ನಲ್ಲಿನ ಅತಿಕ್ರಮಣ ನಡೆದಾಗ ಉಂಟಾದ ಬಿಕ್ಕಟ್ಟನ್ನು ಶಮನಗೊಳಿಸುವಲ್ಲೂ ಮಹತ್ವದ ಪಾತ್ರ ನಿರ್ವಹಿಸಿದ್ದರು. ಚೀನಾದ ಪ್ರಧಾನಿ ಲಿ ಕೆಖಿಯಾಂಗ್‌ರ ಭಾರತ ಭೇಟಿಗೆ ಪೂರ್ವದಲ್ಲಿ ವಾರಗಳ ತನಕ ಆ ಉದ್ವಿಗ್ನತೆ ಮುಂದುವರಿದಿತ್ತು.

ಪಿಎ ಸರ್ಕಾರ ಕೂಡ ತನ್ನ ಪ್ರತಿನಿಧಿ ಸಲ್ಮಾನ್ ಖುರ್ಷಿದ್‌ರನ್ನು ಬೀಜಿಂಗ್‌ಗೆ ಕಳುಹಿಸಿ, ಅತಿಕ್ರಮಿಸಿದ ಜಾಗದಿಂದ ಚೀನಾ ಸೇನೆ ಹಿಂದೆ ಸರಿಯದಿದ್ದಲ್ಲಿ ಭೇಟಿಯನ್ನು ಭಾರತ ರದ್ದುಗೊಳಿಸಲಿದೆ ಎಂದು ಎಚ್ಚರಿಸಿತ್ತು. ಸದರಿ ವಿದ್ಯಮಾನದಲ್ಲಿ ಜೈಶಂಕರ್ ಪ್ರಮುಖ ಪಾತ್ರವಹಿಸಿದ್ದರು.
ವಿದೇಶಾಂಗ ಕಾರ್ಯದರ್ಶಿ ಯಾಗಿ ಜೈಶಂಕರ್ ಅವರಿಗೆ ಎರಡು ವರ್ಷ ನಿಗದಿತ ಅವಧಿ ಮತ್ತು ಒಂದು ವರ್ಷ ವಿಸ್ತರಣೆ ಕೂಡ ಸಿಕ್ಕಿದೆ. ಗೋಖಲೆ ವಿಚಾರಕ್ಕೆ ಬಂದರೆ, ಸರ್ಕಾರ ಕ್ರಮ ಪ್ರಕಾರವಾಗಿ ಸೇವಾ ನಿಯಮವನ್ನು ಪಾಲಿಸಿಯೇ ಈ ನೇಮಕ ಮಾಡಿಕೊಂಡಿದೆ. ಗೋಖಲೆ ಹೆಸರು ಅಂತಿಮಗೊಳಿಸಲು ಸರ್ಕಾರ ನಿರ್ಧರಿಸಿದ್ದಕ್ಕೆ ಮೊದಲ ಕಾರಣ ಅವರು ಚೀನಾದ ರಾಯಭಾರಿಯಾಗಿದ್ದುದು, ಮ್ಯಾಂಡ್ರಿನ್ ಭಾಷಾ ಪ್ರವೀಣತೆ ಜತೆಗೆ ಸಂಸ್ಕೃತ ಬಲ್ಲವರಾಗಿರುವುದು ಪ್ಲಸ್ ಪಾಯಿಂಟ್ ಆದವು ಎನ್ನುತ್ತಿದೆ ಅವರ ಆಪ್ತ ವಲಯ.

1980ರ ಬ್ಯಾಚಿನ ಅಧಿಕಾರಿ ಅಮೆರಿಕದಲ್ಲಿ ಭಾರತದ ರಾಯಭಾರಿ ಆಗಿದ್ದ ನವ್‌ತೇಜ್ ಸರ್ನಾ ನಿವೃತ್ತರಾಗಿ, ಮತ್ತೆ ಒಂದು ವರ್ಷದ ವಿಸ್ತರಣೆಗೆ ಸಮ್ಮತಿಸಿದ ಬಳಿಕವಷ್ಟೇ ಗೋಖಲೆ ಹೆಸರನ್ನು ಸರ್ಕಾರ ೋಷಿಸಿತು. ಇದಲ್ಲದೆ, 1981 ಬ್ಯಾಚಿನ ಇನ್ನಿಬ್ಬರು ಹಿರಿಯ ಅಧಿಕಾರಿಗಳಾದ ಯಶ್ ಸಿನ್ಹಾ ಲಂಡನ್‌ನಲ್ಲಿ ಭಾರತದ ಹೈ ಕಮಿಷನರ್ ಆಗಿಯೂ, ಗುಜರಾತಿನ ಕತಿಯಾವಾಡದ ಸುಜನ್ ಚಿನೋಯ್ ಟೋಕಿಯೋದಲ್ಲಿ ಭಾರತದ ರಾಯಭಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸೇವಾ ಹಿರಿತನದ ವಿಚಾರದಲ್ಲಿ ಗೋಖಲೆಯೇ ಮುಂಚೂಣಿಯಲ್ಲಿರುವ ಕಾರಣ ಈ ನೇಮಕಕ್ಕೆ ಯಾವುದೇ ಅಡ್ಡಿ ಇರಲಿಲ್ಲ.

ಜೈಶಂಕರ್ ಗೆ ಹೋಲಿಸಿದರೆ ಗೋಖಲೆ ಸಮತೋಲನದ ವ್ಯಕ್ತಿತ್ವ ಹೊಂದಿದವರು; ಜೈಶಂಕರ್ ಅವರಂತೆ ಸಾಮಾಜಿಕವಾಗಿ ಹಾಗೂ ಸ್ನೇಹಪರತೆಯಿಂದ ಬೆರೆಯುವವರಲ್ಲವಾದರೂ ಕೆಲಸದ ವಿಚಾರಕ್ಕೆ ಬಂದರೆ ಗೋಖಲೆಯವರೂ ಪರಿಶ್ರಮಿ, ಕಾರ್ಯನಿಷ್ಠರು ಎನ್ನುತ್ತಿದೆ ರಾಜತಾಂತ್ರಿಕ ವಲಯ.

ಜೈಶಂಕರ್ 2015ರ ಜನವರಿ 29ರಂದು ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಕಳೆದ ವರ್ಷ ಜನವರಿಯಲ್ಲಿ ಮತ್ತೊಂದು ವರ್ಷ ವಿಸ್ತರಣೆ ಸಿಕ್ಕಿದ್ದು, ಈ ತಿಂಗಳ 28ಕ್ಕೆ ನಿವೃತ್ತರಾಗಲಿದ್ದಾರೆ. ಜೈಶಂಕರ್ ಅವರಿಗಿಂತ ನಾಲ್ಕು ವರ್ಷ ಚಿಕ್ಕವರಾದ ಗೋಖಲೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಚೀನಾದಲ್ಲಿ ಭಾರತದ ರಾಯಭಾರಿ(2016ರ ಜನವರಿಯಿಂದ 2017ರ ಅಕ್ಟೋಬರ್)ಯಾಗುವ ಮೊದಲು ಅವರು 2010ರ ಜನವರಿಯಿಂದ 2013ರ ಅಕ್ಟೋಬರ್ ತನಕ ಮಲೇಷ್ಯಾದಲ್ಲಿ, 2013ರ ಅಕ್ಟೋಬರ್‌ನಿಂದ 2016 ಜನವರಿ ತನಕ ಜರ್ಮನಿಯಲ್ಲಿ ಭಾರತದ ರಾಯಭಾರಿಯಾಗಿದ್ದರು.

ಗೋಖಲೆಯವರು ಲಂಕಾ, ಪಾಕಿಸ್ತಾನ ಮುಂತಾದ ಸಮೀಪದ ನೆರೆರಾಷ್ಟ್ರಗಳಲ್ಲಿ ಹೆಚ್ಚು ರಾಯಭಾರ ಮಾಡಿದ್ದಿಲ್ಲ. ಅವರ ಬಹುತೇಕ ವೃತ್ತಿಬದುಕು ಪೂರ್ವ ಏಷ್ಯಾದಲ್ಲಿ ವಿಶೇಷವಾಗಿ ಮಲೇಷ್ಯಾ, ಚೀನಾ, ಹಾಂಕಾಂಗ್, ತೈವಾನ್ ಮತ್ತು ವಿಯೆಟ್ನಾಂನಲ್ಲೇ ಆಗಿತ್ತು. ಬಹುಪಕ್ಷೀಯ ಆರ್ಥಿಕ ರಾಜತಾಂತ್ರಿಕ ವಿಚಾರಗಳಲ್ಲಿ ಪ್ರಾವೀಣ್ಯತೆ ಇದ್ದಾಗ್ಯೂ, ಗೋಖಲೆಯವರನ್ನು ಅಮೆರಿಕದಲ್ಲಿ ಭಾರತದ ರಾಯಭಾರಕ್ಕೆ ಸರ್ಕಾರ ಕಳುಹಿಸಿರಲಿಲ್ಲ. ಅವರ ಇದುವರೆಗಿನ ಎಲ್ಲ ಕೆಲಸ ಕಾರ್ಯಗಳು ಕಾರ್ಯದರ್ಶಿಗಳ ಸೂಚನೆ, ಮಾರ್ಗದರ್ಶನದಲ್ಲೇ ನಡೆದಿತ್ತು. ಈಗ ಅಂತಹ ದೊಡ್ಡ ಹೊಣೆಗಾರಿಕೆಯನ್ನು ಅವರೇ ನಿಭಾಯಿಸಬೇಕಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ೋಷಿಸಿದ್ದ ನೆರೆಹೊರೆ ಮೊದಲು ನೀತಿ ಹಾಗೂ ದ್ವಿಪಕ್ಷೀಯ ಬಾಂಧವ್ಯದ ವಿಚಾರವಾಗಿ ಭಾರತದಿಂದ ಸ್ಪಷ್ಟತೆಯನ್ನು ನೆರೆರಾಷ್ಟ್ರಗಳು ಎದುರು ನೋಡುತ್ತಿವೆ. ಏಷ್ಯಾಖಂಡದಲ್ಲಿ ಪ್ರಭಾವ ಹೆಚ್ಚಿಸುತ್ತಿರುವ ಚೀನಾ, ಪಾಕಿಸ್ತಾನದ ಕಿರಿಕಿರಿ, ಲಂಕಾ, ಬಾಂಗ್ಲಾದೇಶ ಮುಂತಾದವುಗಳ ಜತೆಗಿನ ಬಾಂಧವ್ಯದಲ್ಲಿ ಎದುರಾಗಿರುವ ಸವಾಲುಗಳನ್ನು ಪರಾಮರ್ಶಿಸಿ ಮುನ್ನಡೆಯಬೇಕಿದೆ. ಆಸಿಯಾನ್ ಬಾಂಧವ್ಯ ಇನ್ನಷ್ಟು ಬಲಗೊಳ್ಳಬೇಕಾಗಿದೆ.

ಅದೇ ರೀತಿ, ಬೇರೆ ಬೇರೆ ರೀತಿಯಲ್ಲಿ ಪ್ರಾಬಲ್ಯ ಮೆರೆಯಲು ಪ್ರಯತ್ನಿಸುತ್ತಿರುವ ಚೀನಾವನ್ನು ಸಂತೈಸುತ್ತ ಜಾಣ್ಮೆಯಿಂದ ನಡೆದುಕೊಳ್ಳುವ ಸವಾಲು ಕೂಡ ಇದೆ. ಮೋದಿ ಸರ್ಕಾರದ ವಿದೇಶ ನೀತಿಯನ್ನು ಸರಿಯಾಗಿ ಬಿಂಬಿಸುವ ಅನಿವಾರ್ಯತೆಯೂ ಇದೆ. ಅದು ಮುಂದಿನ ಚುನಾವಣೆಯಲ್ಲಿ ಲಿತಾಂಶ ನೀಡಬೇಕಾದ ವಿಷಯವೂ ಹೌದು. ಇವೆಲ್ಲದರ ನಡುವೆ, ಜಾಗತಿಕ ಮಟ್ಟದ ಹಲವು ವಿಷಯಗಳಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳುವ ಸವಾಲು ಕೂಡ ಇದೆ. ಉದಾಹರಣೆಗೆ ಹೇಳುವುದಾದರೆ, ಭಾರತವನ್ನು ಆಪ್ತರಾಷ್ಟ್ರ ಎಂದು ಪರಿಗಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಅಮೆರಿಕ ಸ್ಟ್’ ನೀತಿಯ ನಡೆಗಳಿಂದ ಭಾರತದ ಹಿತಾಸಕ್ತಿಗೆ ಧಕ್ಕೆ ಉಂಟಾಗುವ ಸಾಧ್ಯತೆಯೂ ಇದೆ. ಇಂತಹ ಸೂಕ್ಷ್ಮ ವಿಚಾರಗಳನ್ನೆಲ್ಲ ಗೋಖಲೆಯವರು ಹೇಗೆ ನಿರ್ವಹಿಸಲಿದ್ದಾರೆ ಎಂಬುದು ಸದ್ಯದ ಕುತೂಹಲ.

ಇನ್ನು ಖಾಸಗಿ ಬದುಕಿನ ಬಗ್ಗೆ ಹೇಳುವುದಾದರೆ, ವಂದನಾ ಗೋಖಲೆ ಪತ್ನಿ. ಒಬ್ಬ ಮಗ ಇದ್ದಾನೆ.

(ಲೇಖಕರು ವಿಜಯವಾಣಿ ಸಹಾಯಕ ಸುದ್ದಿಸಂಪಾದಕರು)

[ಪ್ರತಿಕ್ರಿಯಿಸಿ: [email protected], [email protected]]

Leave a Reply

Your email address will not be published. Required fields are marked *

Back To Top