ಅನುದಾನ ಹಂಚಿಕೆಯಲ್ಲಿ ತಾರತಮ್ಯ

ಕೊಪ್ಪ: ಮುಖ್ಯಮಂತ್ರಿಗಳ ವಿವೇಚನಾ ನಿಧಿಯಡಿ ಪಟ್ಟಣ ಪಂಚಾಯತ್​ಗೆ ಮಂಜೂರಾಗಿರುವ 2 ಕೋಟಿ ರೂ. ಎಸ್​ಎಫ್​ಸಿ ವಿಶೇಷ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಪಪಂ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಗುರುವಾರ ಪಪಂ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರಾದ ಶ್ರೀನಿವಾಸ್ ಎಸ್. ಶೆಟ್ಟಿ ಹಾಗೂ ವಾಣಿ ಸತೀಶ್ ಹೆಗ್ಡೆ ಅವರು ಶಾಸಕರು ಅನುದಾನ ಹಂಚಿಕೆ ಮಾಡುವಾಗ ಎಲ್ಲ ಸದಸ್ಯರ ಅಭಿಪ್ರಾಯ ಪಡೆಯಲಾಗುವುದು ಎಂದಿದ್ದರು. ಆದರೆ ಈಗ ನಮ್ಮ ಗಮನಕ್ಕೆ ತರದೆ ಕಾಮಗಾರಿ ನಿಗದಿ ಮಾಡಿದ್ದಾರೆ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಡಿ.ಪಿ.ಅನಸೂಯಾ ಕೃಷ್ಣಮೂರ್ತಿ, ಶಾಸಕರೊಂದಿಗೆ ನಾನು ಮತ್ತು ಉಪಾಧ್ಯಕ್ಷ ದಿವಾಕರ್ ಚರ್ಚೆ ಮಾಡಿದ್ದೇವೆ. ಇನ್ನೂ ಹೆಚ್ಚುವರಿಯಾಗಿ 1.25 ಕೋಟಿ ರೂ. ಅನುದಾನ ಮಂಜೂರು ಮಾಡಿಸುತ್ತೇನೆ. ಆಗ ನಿಮ್ಮ ವ್ಯಾಪ್ತಿಯ ಕಾಮಗಾರಿಗಳಿಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಪಟ್ಟಣದ ಹೊರವಲಯದ ರುದ್ರಭೂಮಿಗೆ ಅಳವಡಿಸಿದ್ದ ಪಪಂ ಫಲಕವನ್ನು ಏಕಾಏಕಿ ತೆರವು ಮಾಡಿ ಬೇರೆ ಫಲಕ ಅಳವಡಿಸಲಾಗಿದೆ. ರುದ್ರಭೂಮಿ ಅಭಿವೃದ್ಧಿಗೆ ಪಪಂನಿಂದ ಸಾಕಷ್ಟು ಅನುದಾನ ನೀಡಲಾಗಿದೆ. ಪಪಂ ಸಭೆ ನಿರ್ಣಯದಂತೆ ಫಲಕ ಅಳವಡಿಸಲಾಗಿತ್ತು.ದೆ. ಈಗ ಏಕಾಏಕಿ ತೆರವು ಮಾಡಿರುವುದು ಸರಿಯಲ್ಲ ಎಂದು ವಾಣಿ ಸತೀಶ್ ಆಕ್ಷೇಪ ವ್ಯಕ್ತಪಡಿಸಿದರು. ರುದ್ರಭೂಮಿಯಲ್ಲಿ ಸಿಲಿಕಾನ್ ಛೇಂಬರ್ ಅಳವಡಿಸಿರುವುದರಿಂದ ಹಣವನ್ನು ರುದ್ರಭೂಮಿಯಲ್ಲಿ ಬೇರೆ ಯಾವುದಾದರೂ ಅಭಿವೃದ್ಧಿ ಕಾರ್ಯಕ್ಕೆ ಬಳಕೆ ಮಾಡಬೇಕು ಎಂದರು.

ಇದಕ್ಕೆ ಪತ್ರಿಕ್ರಿಯಿಸಿದ ಸದಸ್ಯ ಕೆ.ಎಸ್.ಹರೀಶ್ ಭಂಡಾರಿ, ರುದ್ರಭೂಮಿಯಿರುವ ಜಾಗ ಹರಂದೂರು ಪಂಚಾಯತ್​ಗೆ ಸೇರಿದ್ದು ಎಂದರು.

1998ರಲ್ಲಿ ಹರಂದೂರು ಪಂಚಾಯತ್​ನವರು ರೋಟರಿ ಸಂಸ್ಥೆಗೆ ವಹಿಸಿಕೊಟ್ಟಿದ್ದಾರೆ. ಅಂದಿನಿಂದ ರುದ್ರಭೂಮಿ ಸಮಿತಿ ಮತ್ತು ರೋಟರಿ ಸಂಸ್ಥೆ ಸಹಯೋಗದಲ್ಲಿ ರುದ್ರಭೂಮಿಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇತ್ತೀಚೆಗೆ ರೋಟರಿ ಸಂಸ್ಥೆಯಿಂದ ರುದ್ರಭೂಮಿ ಆವರಣವನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಸಂದರ್ಭ ಫಲಕವನ್ನು ಬದಲಾಯಿಸಲಾಗಿದೆ. ಪಪಂ ಫಲಕವನ್ನು ಅಳವಡಿಸುವುದಕ್ಕೆ ಆಕ್ಷೇಪವಿಲ್ಲ ಎಂದರು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಸಂತಿ ಪಾಂಡುರಂಗ, ಸದಸ್ಯರಾದ ಪ್ರತಿಮಾ, ರಾಧಾಕೃಷ್ಣ, ಕೆ.ಎಸ್.ಸುಬ್ರಹ್ಮಣ್ಯ ಶೆಟ್ಟಿ, ವಿಜಯಕುಮಾರ್, ಮುಖ್ಯಾಧಿಕಾರಿ ಶೇಷಮೂರ್ತಿ ಉಪಸ್ಥಿತರಿದ್ದರು.

ಟೆಂಡರ್ ದರ ಲೀಕ್​ಔಟ್

ಬಸ್​ಸ್ಟ್ಯಾಂಡ್ ಆವರಣದಲ್ಲಿರುವ ಸಾರ್ವಜನಿಕ ಶೌಚಗೃಹ ನಿರ್ವಹಣೆಯ ಗುತ್ತಿಗೆಗೆ ಟೆಂಡರ್ ಕರೆಯಲಾಗಿತ್ತು. ಮೊದಲು ಕಡಿಮೆ ದರಕ್ಕೆ ಟೆಂಡರ್ ಹಾಕಿದ ಗುತ್ತಿಗೆದಾರರು ಮತ್ತೊಮ್ಮೆ ಜಾಸ್ತಿ ದರ ಕೊಡುವುದಾಗಿ ಪತ್ರ ಬರೆದಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ ಟೆಂಡರ್ ಹಾಕಿದ್ದರೂ ಟೆಂಡರ್ ದರಗಳು ಲೀಕ್​ಔಟ್ ಆಗಿವೆ ಎಂದು ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.