ಕೊಪ್ಪ: ಶೈಕ್ಷಣಿಕ ವರ್ಷಗಳಲ್ಲಿ ದೊರಕಬಹುದಾದ ಸೌಲಭ್ಯಗಳನ್ನು ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರಿಗೆ ದೊರಕಿಸುವ ಹಾಗೂ ಗುರುತಿಸುವ ಸಲುವಾಗಿ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರ ಸಂಘ ಸ್ಥಾಪನೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಎಚ್.ಕೆ.ಮಹಾಬಲೇಶ್ ತಿಳಿಸಿದರು.
ಶನಿವಾರ ಹಮ್ಮಿಕೊಂಡಿದ್ದ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಖಾಸಗಿ ಶಾಲಾ ಶಿಕ್ಷಕರನ್ನು ಗುರುತಿಸುವ ಕೆಲಸವಾಗುತ್ತಿಲ್ಲ. ವಿಶೇಷ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ, ಪ್ರತಿಭೆ ಹೊಂದಿರುವ ಶಿಕ್ಷಕರಿಗೆ ಹಾಗೂ ವಿವಿಧ ಕೌಶಲ ಇರುವ ಶಿಕ್ಷಕರನ್ನು ಸಂಘದಿಂದ ಗುರುತಿಸಿ ಮುನ್ನೆಲೆಗೆ ತರುವ ಪ್ರಯತ್ನ ಮಾಡಲಾಗುತ್ತದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಯಶೋದಾ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಅನುದಾನ ರಹಿತ ಖಾಸಗಿ ಶಾಲೆಗಳ ಪಾತ್ರ ಹೆಚ್ಚಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಫಲಿತಾಂಶವನ್ನು ಖಾಸಗಿ ಶಾಲೆಗಳು ನೀಡುತ್ತವೆ. ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರಿಗೆ ಸಂಘಟನೆಯ ಅನಿವಾರ್ಯವಿತ್ತು. ಸಂಘಟನೆ ಮೂಲಕ ಇನ್ನಷ್ಟು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜ್ಞಾನವಾಹಿನಿ ಶಿಕ್ಷಣ ಸಂಸ್ಥೆಯ ಪ್ರದೀಪ್, ಶಾರದಾ ವಿದ್ಯಾ ಮಂದಿರ ಶಾಲೆಯ ಶಶಿಕಿರಣ್, ವೆಂಕಟೇಶ್, ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯ ಛಾಯಾಪತಿ ಇತರರಿದ್ದರು.