ಅನುದಾನ ಬಂದರೂ ನಿರ್ವಣಕ್ಕೆ ವಿಘ್ನ

ಕಾರವಾರ: ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್​ಗಾಗಿ 700 ಹಾಸಿಗೆಗಳ ಹೊಸ ಆಸ್ಪತ್ರೆ ನಿರ್ವಣಕ್ಕೆ ಒಟ್ಟು 319 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ ಮೊದಲ ಹಂತದಲ್ಲಿ ಸರ್ಕಾರ 150 ಕೋಟಿ ರೂ.ಗಳನ್ನು ಶುಕ್ರವಾರದ ಬಜೆಟ್​ನಲ್ಲಿ ಬಿಡುಗಡೆ ಮಾಡಿದೆ.

ಸದ್ಯ ಕಾಲೇಜ್​ನ ಜೊತೆ ಸೇರಿಕೊಂಡಿರುವ ಜಿಲ್ಲಾ ಆಸ್ಪತ್ರೆಯಲ್ಲಿ 300 ಹಾಸಿಗೆಗಳ ಸೌಲಭ್ಯವಿದೆ. ಮೆಡಿಕಲ್ ಕಾಲೇಜ್​ಗೆ ಭಾರತೀಯ ವಿಜ್ಞಾನ ಸಂಸ್ಥೆಯ ಅನುಮತಿ ಮುಂದುವರಿಯಬೇಕು ಎಂದರೆ 700 ಹಾಸಿಗೆಗಳ ಅನುಮತಿ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ತುರ್ತು ಅನುದಾನಕ್ಕಾಗಿ ಕಾಲೇಜ್ ಆಡಳಿತ ಪ್ರಸ್ತಾವನೆ ಸಲ್ಲಿಸಿತ್ತು.

ಯೋಜನೆಯಲ್ಲೇನಿದೆ..?: 715 ವಿದ್ಯಾರ್ಥಿಗಳ ಹಾಸ್ಟೆಲ್ ಸೌಲಭ್ಯಕ್ಕಾಗಿ 36.24 ಕೋಟಿ, ವೈದ್ಯರು, ತಂತ್ರಜ್ಞರು, ನರ್ಸ್​ಗಳಿಗಾಗಿ ವಸತಿಗೃಹಗಳ ಅಗತ್ಯವಿದ್ದು ಅದಕ್ಕಾಗಿ 38.9 ಕೋಟಿ, 700 ಹಾಸಿಗೆಗಳ ಆಸ್ಪತ್ರೆ ಕಟ್ಟಡಕ್ಕೆ 220 ಕೋಟಿ, 11 ಆಪರೇಶನ್ ಥಿಯೇಟರ್​ಗಳ ನಿರ್ವಣಕ್ಕಾಗಿ 33.6 ಲಕ್ಷ ರೂ, ವಿವಿಧ ವೈದ್ಯಕೀಯ ಸಾಮಗ್ರಿಗಳಿಗಾಗಿ 68 ಲಕ್ಷ ರೂ. ಹಾಗೂ ಸಿಬ್ಬಂದಿ ನೇಮಕಾತಿಗಾಗಿ 18.31 ಕೋಟಿ ರೂ. ಮತ್ತು ಅನಿರ್ಬಂಧಿತ ವಿದ್ಯುತ್ ಲೈನ್ ನಿರ್ವಣಕ್ಕಾಗಿ 4.8 ಕೋಟಿ ರೂ. ಬೇಕು ಎಂದು ಲೋಕೋಪಯೋಗಿ ಇಲಾಖೆಯ ಮೂಲಕ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

ಜೈಲು ಜಾಗದಿಂದ ತೊಂದರೆ: ಸರ್ಕಾರಿ ಮೆಡಿಕಲ್ ಕಾಲೇಜ್ ಆಡಳಿತದ ಬಳಿ 21 ಎಕರೆ ಜಾಗವಿದೆ. ಅದರಲ್ಲಿ 4 ಎಕರೆಯಷ್ಟು ಜಾಗ ಅತಿಕ್ರಮಣವಾಗಿದೆ. ಆದರೆ, ಇಷ್ಟೇ ಜಾಗದಲ್ಲಿ ಕಾಲೇಜ್​ಗೆ ಸಂಪೂರ್ಣ ಸೌಲಭ್ಯ ಕಲ್ಪಿಸುವುದು ಕಷ್ಟ ಎಂಬ ಕಾರಣಕ್ಕಾಗಿ ಜಿಲ್ಲಾ ಕಾರಾಗೃಹ ಸ್ಥಳಾಂತರಕ್ಕೆ ಪ್ರಸ್ತಾವನೆ ಕಳಿಸಲಾಗಿತ್ತು. 2016ರ ಬಜೆಟ್​ನಲ್ಲಿ ಕಾರಾಗೃಹ ಸ್ಥಳಾಂತರಕ್ಕೆ ಅನುದಾನವೂ ಬಿಡುಗಡೆಯಾಗಿತ್ತು. ಅಂಕೋಲಾ ತಾಲೂಕಿನ ಬೆಳಕೆ ಬಳಿ ಜೈಲು ನಿರ್ವಣಕ್ಕೆ ಜಾಗ ಗುರುತಿಸಲಾಗಿದೆ. ಈ ಸಂಬಂಧ ಬಂದೀಖಾನೆ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ, ಹೊಸ ಕಟ್ಟಡದ ನೀಲ ನಕ್ಷೆ ಇದುವರೆಗೂ ಸಿದ್ಧವಾಗಿಲ್ಲ. ಅಲ್ಲದೆ, ನಗರದಿಂದ ತುಂಬಾ ದೂರದಲ್ಲಿ ಜೈಲು ನಿರ್ಮಾಣ ಸಮರ್ಪಕವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ಸ್ಥಳಾಂತರ ಯೋಜನೆ ನೆನೆಗುದಿಗೆ ಬಿದ್ದಿದೆ.

ಎರಡು ಹಂತದ ಕಾಮಗಾರಿ..? : ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ 300 ಹಾಸಿಗೆಗಳ ಸೌಲಭ್ಯವಿದ್ದರೂ ಆಸ್ಪತ್ರೆಯ ಕಟ್ಟಡ ಹಾಳಾಗಿರುವುದರಿಂದ ಅದನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಆದರೆ, ಸಂಪೂರ್ಣ ಕಟ್ಟಡ ಕೆಡವಿದಲ್ಲಿ ಆಸ್ಪತ್ರೆಯ ಕಾರ್ಯನಿರ್ವಹಣೆಗೆ ಕಷ್ಟವಾಗಲಿದೆ. ಇದರಿಂದ ಎರಡು ಹಂತಗಳಲ್ಲಿ ಕಾಮಗಾರಿ ಮಾಡಲು ಯೋಜಿಸಿ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಮೊದಲ ಹಂತದಲ್ಲಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡಿದಲ್ಲಿ ಎರಡನೇ ಹಂತದಲ್ಲಿ 300 ಹಾಸಿಗೆಗಳ ಆಸ್ಪತ್ರೆಯನ್ನು ಕಟ್ಟಬಹುದು ಎಂದು ಕಾಲೇಜ್ ಆಡಳಿತದ ಯೋಚನೆಯಾಗಿದೆ.

ಪ್ರಸ್ತಾವನೆ ಕಳಿಸಿದ್ದು ತಾನೆಂದ ಮಾಜಿ ಸಚಿವ ಅಸ್ನೋಟಿಕರ್: ಸರ್ಕಾರಿ ಮೆಡಿಕಲ್ ಕಾಲೇಜ್ ಜೊತೆ ಅಗತ್ಯವಿರುವ ಆಸ್ಪತ್ರೆ ನಿರ್ವಣಕ್ಕಾಗಿ ತಾವು ಬೇಡಿಕೆ ಇಟ್ಟಿದ್ದಾಗಿ ಶಾಸಕಿ ರೂಪಾಲಿ ನಾಯ್ಕ ಹೇಳಿಕೆ ನೀಡಿದ್ದರು. ಶನಿವಾರ ಮಾಜಿ ಸಚಿವ ಆನಂದ ಅಸ್ನೋಟಿಕರ್ ಪತ್ರಿಕಾ ಹೇಳಿಕೆ ನೀಡಿ, ತಾವು ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಗೆ ಅರ್ಜಿ ಸಲ್ಲಿಸಿದ್ದಾಗಿ ಹೇಳಿಕೊಂಡಿದ್ದು, ದಾಖಲೆ ಬಿಡುಗಡೆ ಮಾಡಿದ್ದಾರೆ.