ಸೋಮವಾರಪೇಟೆ: ಸಾವಿರಾರು ಮಕ್ಕಳಿಗೆ ವಿದ್ಯೆ ದಾನ ಮಾಡಿದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿಗಳ ಕನಸಿನ ಕೂಸಾದ ಶತಮಾನೋತ್ಸವ ಭವನ ಕಟ್ಟಡ ಅನುದಾನವಿಲ್ಲದೆ ಅಪೂರ್ಣಗೊಂಡು ಭೂತ ಬಂಗಲೆಯಂತಾಗಿದೆ.
ರಾಜಕೀಯ ದ್ವೇಷ ಮತ್ತು ಮೇಲಾಟದ ಪರಿಣಾಮ ಹಣಕಾಸು ನೆರವಿಲ್ಲದೆ ಕಳೆದ 15 ವರ್ಷಗಳಿಂದ ಅಪೂರ್ಣ ಕಟ್ಟಡ ಬಿಡಾಡಿ ದನಗಳ ಆಶ್ರಯತಾಣವಾಗಿದೆ. ಸೋಮವಾರಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ 118 ವರ್ಷಗಳಾಗಿದ್ದು, ಈ ಶಾಲೆಯಲ್ಲಿ ಓದಿದ ಅನೇಕರು ಉನ್ನತ ಸ್ಥಾನದಲ್ಲಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಸಾಧಕರಾಗಿದ್ದಾರೆ. ರಾಜಕೀಯ ಕ್ಷೇತ್ರದಲ್ಲೂ ಸ್ಥಾನವನ್ನು ಆಲಂಕರಿಸಿದ್ದಾರೆ.
ಶಾಲೆ ಶತಮಾನ ಪೂರೈಸಿದ ಹಿನ್ನೆಲೆಯಲ್ಲಿ ಹಳೇ ವಿದ್ಯಾರ್ಥಿಗಳು ಸೇರಿ, 2007 ರಲ್ಲಿ ಅಂದಿನ ಶಾಸಕರೂ ಆಗಿದ್ದ ಶಾಲೆಯ ಹಿರಿಯ ವಿದ್ಯಾರ್ಥಿ ಬಿ.ಎ.ಜೀವಿಜಯ ಶತಮಾನೋತ್ಸವ ಭವನ ನಿರ್ಮಿಸುವ ಕಾರ್ಯಕ್ಕೆ ಕೈಹಾಕಿದರು. 1.25ಕೋಟಿ ರೂ.ವೆಚ್ಚದಲ್ಲಿ ಭವನ ನಿರ್ಮಿಸಲು ಅಂದಾಜುಪಟ್ಟಿ ತಯಾರಿಸಲಾಯಿತು. ಜೀವಿಜಯ ತಮ್ಮ ಶಾಸಕರ ನಿಧಿಯಿಂದ 18ಲಕ್ಷ ರೂ. ಅನುದಾನ ನೀಡಿದರು. ನಂತರ ಬೇರೆ ಬೇರೆ ಮೂಲಗಳಿಂದ ಹಣ ಸಂಗ್ರಹವಾಯಿತು. ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ವಿವಿಧ ಹಂತಗಳಲ್ಲಿ 15ಲಕ್ಷ ರೂಗಳು, ರಾಜ್ಯ ಸಭಾ ಸದಸ್ಯ ರೆಹಮಾನ್ ಖಾನ್ ಕ್ಷೇತ್ರಾಭಿವೃದ್ಧಿ ನಿಧಿಯಿಂದ 4 ಲಕ್ಷ ರೂ. ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ಕ್ಷೇತ್ರಾಭಿವೃದ್ಧಿ ನಿಧಿಯಿಂದ 2.5ಲಕ್ಷ ರೂ., ವಿಧಾನಪರಿಷತ್ ಸದಸ್ಯೆ ಮೋಟಮ್ಮ 3 ಲಕ್ಷ ರೂ. ಒದಗಿಸಿದರು. ಈ ಹಣದಲ್ಲಿ ಕಾಮಗಾರಿ ಪ್ರಾರಂಭವಾಯಿತು.
ಶಾಸಕರಾಗಿದ್ದ ಬಿ.ಎ.ಜೀವಿಜಯ 2007ರಲ್ಲಿ ಉತ್ಸಾಹದಿಂದ ಭವನ ನಿರ್ಮಾಣಕ್ಕೆ ಚಾಲನೆ ನೀಡಿ, ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಿದ್ದರು. ಹಣ ಸಂಗ್ರಹದಲ್ಲಿ ತೊಡಗಿದ್ದ ಸಂದರ್ಭ, ಎದುರಾದ ವಿಧಾನಸಭೆ ವಿಸರ್ಜನೆ ಅವರ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಯಿತು. ನಂತರದ ವಿಧಾನಸಭಾ ಚುನಾವಣೆಯಲ್ಲಿ ಜೀವಿಜಯ ಪರಾಭವಗೊಂಡರು. ನಂತರ ಶತಮಾನ ಭವನಕ್ಕೆ ಅನುದಾನಕ್ಕೆ ಗ್ರಹಣ ಹಿಡಿಯಿತು. ಅಷ್ಟೊತ್ತಿಗಾಗಲೆ ಶೇ.50ರಷ್ಟು ಕಾಮಗಾರಿ ಪೂರ್ಣಗೊಂಡಿತ್ತು.
ನಂತರದ ಜನಪ್ರತಿನಿಧಿಗಳು ಜೀವಿಜಯ ಅವರ ಮೇಲಿನ ರಾಜಕೀಯ ದೇಷದಿಂದ ಶತಮಾನೋತ್ಸವ ಭವನದ ಕಡೆ ತಿರುಗಿಯೂ ನೋಡಲಿಲ್ಲ. ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಹಾಗು ಕಾಂಗ್ರೆಸ್ ಸರ್ಕಾರಗಳು, ಭವನ ಪೂರ್ಣಗೊಳಿಸಲು ವಿಶೇಷ ಅನುದಾನ ಕಲ್ಪಿಸಲಿಲ್ಲ. 2018ರಲ್ಲಿ ಜೆಡಿಎಸ್- ಕಾಂಗ್ರೆಸ್ ಸರ್ಕಾರವಿದ್ದಾಗ, ಜೀವಿಜಯ ಮತ್ತೊಮ್ಮೆ 3.20 ಕೋಟಿ ರೂ. ವೆಚ್ಚದಲ್ಲಿ ಮುಂದುವರಿದ ಕಾಮಗಾರಿಗೆ ಕ್ರಿಯಾಯೋಜನೆ ರೂಪಿಸಿದರು. ಒಂದೇ ವರ್ಷಕ್ಕೆ ಸಮ್ಮಿಶ್ರ ಸರ್ಕಾರ ಪತನಗೊಂಡು, ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯಿತು. ಶಾಸಕ ಅಪ್ಪಚ್ಚು ರಂಜನ್ ಶತಮಾನೋತ್ಸವ ಭವನದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.
ಮೇ 10ರಂದು ನಡೆದ ವಿಧಾನಸಭಾ ಚುನಾವಣೆಗೂ ಮುನ್ನಾ ಕಾಂಗ್ರೆಸ್‌ನಿಂದ ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೊಡಲಿಲ್ಲ ಎಂದು ಮುನಿಸಿಕೊಂಡ ಬಿ.ಎ.ಜೀವಿಜಯ ಅವರು ಬಿಜೆಪಿಯ ಎಂ.ಪಿ.ಅಪ್ಪಚ್ಚು ರಂಜನ್‌ಗೆ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದರು. ರಂಜನ್ ಅವರು ಗೆಲುವು ಸಾಧಿಸಿದರೆ, ಶತಮಾನೋತ್ಸವ ಭವನ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಜನರ ನಿರೀಕ್ಷೆಯಿತ್ತು. ಅದು ಹುಸಿಯಾಯಿತು. ಗೆಲುವು ಸಾಧಿಸಿರುವ ಕಾಂಗ್ರೆಸ್ ಶಾಸಕ ಡಾ.ಮಂಥರ್‌ಗೌಡ ಅವರಿಗೆ ಅನುದಾನಕ್ಕಾಗಿ ಮುಖಂಡರು ಮನವಿ ಮಾಡಿದ್ದಾರೆ.