ಕುಮಟಾ:ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ಅವಘಡಕ್ಕೆ ಸಂಬಂಧಿಸಿದಂತೆ ಹೋರಾಟದ ರೂಪುರೇಷೆ ನಿರ್ಧರಿಸಲು ಕುಮಟಾದ ವರದ್ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಮೀನುಗಾರಿಕೆ ಹಾಗೂ ಮೀನುಗಾರ ಸಮುದಾಯಗಳ ಪ್ರಮುಖರ ಜಿಲ್ಲಾಮಟ್ಟದ ಸಭೆ ನಡೆಯಿತು.
ಮೀನುಗಾರಿಕೆ ಸಹಕಾರಿ ಯೂನಿಯನ್ ಅಧ್ಯಕ್ಷ ಗಣಪತಿ ಮಾಂಗ್ರೆ ಮಾತನಾಡಿ, ಸುವರ್ಣ ತ್ರಿಭುಜ ಬೋಟ್ ಅವಘಡಕ್ಕೆ ನೇವಿಯ ಹಡಗು ಕಾರಣ ಎಂಬ ವದಂತಿ ಹಬ್ಬಿದೆ. ಈ ಘಟನೆಗೆ ಕಾರಣ ನೇವಿ ಹಡಗು ಎಂದಾದಲ್ಲಿ ರಾಷ್ಟ್ರಕ್ಕೆ ಅಪಮಾನ ಎಂಬ ಕಾರಣಕ್ಕೆ ವಿಷಯ ಮುಚ್ಚಿಟ್ಟಿರಬಹುದು. ಈಗ ಚುನಾವಣೆ ಮುಗಿಯುವ ಹಂತದಲ್ಲಿ ಸುವರ್ಣ ತ್ರಿಭುಜ ಬೋಟ್ನ ಪತ್ತೆ ಬಹಿರಂಗ ಪಡಿಸಿದ್ದಾರೆ. ಬೋಟ್ಅನ್ನು ಸರ್ಕಾರ ವಾರದೊಳಗೆ ಎತ್ತಬೇಕು. ಇಲ್ಲವಾದರೆ ನಮಗೆ ಅನುಮತಿ ಕೊಟ್ಟರೆ ನಾವೇ ಎತ್ತುತ್ತೇವೆ. ಇಲ್ಲವಾದರೆ ಉಗ್ರ ಹೋರಾಟ ಅನಿವಾರ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಹರಿಕಂತ್ರ ಸಮುದಾಯದ ಅಧ್ಯಕ್ಷ ಗಣಪತಿ ಉಳ್ವೇಕರ ಮಾತನಾಡಿ, ಸುವರ್ಣ ತ್ರಿಭುಜ ಬೋಟ್ ಪತ್ತೆಯಾಗಿ ಇಷ್ಟು ದಿನವಾದರೂ ಅದನ್ನು ಎತ್ತುವ ಕಾರ್ಯಾಚರಣೆ ಯಾಕೆ ಮಾಡಿಲ್ಲ. ಜೂನ್ ಮೊದಲ ವಾರದಲ್ಲಿ ಮಾನ್ಸೂನ್ ಬರುತ್ತದೆ. ಅದರೊಳಗೆ ಮುಳುಗಿರುವ ಬೋಟ್ ಅನ್ನು ಎತ್ತುವ ಕೆಲಸ ಆಗಬೇಕು ಎಂದರು. ಟಿ.ಬಿ. ಹರಿಕಂತ್ರ ಮಾತನಾಡಿ, ಮುಳುಗಿದ ಬೋಟ್ನಲ್ಲಿದ್ದ ಮೀನುಗಾರರು ಏನಾದರು ಎಂದು ನೇವಿಯವರು ಸ್ಪಷ್ಟಪಡಿಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರ ಪರಿಹಾರ ಕೊಡಬೇಕು ಎಂದರು.
ನಾಡದೋಣಿ ಹಾಗೂ ಸಾಂಪ್ರದಾಯಿಕ ಮೀನುಗಾರರ ಸಂಘದ ಜಿಲ್ಲಾಧ್ಯಕ್ಷ ಸದಾನಂದ ಹರಿಕಂತ್ರ ಮಾತನಾಡಿ, ಮೀನುಗಾರರಿಗೆ ಅನ್ಯಾಯವಾಗುತ್ತಿದೆ. ನೌಕಾಪಡೆಯ ಹಡಗಿನಿಂದ ಒಂದೊಮ್ಮೆ ಆಕಸ್ಮಿಕವಾಗಿ ಅವಘಡವಾಗಿ ಸುವರ್ಣ ತ್ರಿಭುಜ ಬೋಟ್ ಮುಳುಗಿದ್ದರೆ ಕನಿಷ್ಠ ಮಾನವೀಯ ಕನಿಕರವೂ ಇರಲಿಲ್ಲವೇ ಎಂದು ಪ್ರಶ್ನಿಸಿದರು. ಬುಧವಾರವೇ ಜಿಲ್ಲಾಧಿಕಾರಿಗೆ ನಮ್ಮ ಮನವಿ ಸಲ್ಲಿಸೋಣ ಎಂದರು.
ಶಾಂತಾರಾಮ ಹರಿಕಂತ್ರ ಮಾತನಾಡಿ, ಸಮುದ್ರದಲ್ಲಿ ನಾಪತ್ತೆಯಾದರೆ, ಹೆಣ ಸಿಕ್ಕರೆ ಮಾತ್ರ ಸತ್ತಂತೆ. ಇಲ್ಲದಿದ್ದರೆ ಅತಂತ್ರವೇ ಆಗುವುದರಿಂದ ಸರ್ಕಾರ ಈ ಬಗ್ಗೆ ವಿಶೇಷ ನಿಯಮ ರೂಪಿಸಬೇಕು ಎಂದರು.
ಸಭೆಯಲ್ಲಿ ಕೊಂಕಣ ಖಾರ್ವಿ ಸಮಾಜದ ಅಧ್ಯಕ್ಷ ಉಮೇಶ ಮೇಸ್ತ, ಗಾಬಿತ ಸಮಾಜದ ಪ್ರತಿನಿಧಿ ಬಾಬು ಕುಬಾಲ, ಅಂಬಿಗ ಸಮಾಜದ ಮಾಜಿ ಅಧ್ಯಕ್ಷ ಗಣೇಶ ಅಂಬಿಗ ಮಿರ್ಜಾನ, ಜಗದೀಶ ಹರಿಕಂತ್ರ, ನಾಗರಾಜ ಹರಿಕಂತ್ರ ವನ್ನಳ್ಳಿ, ಅಶೋಕ ಕಾಸರಕೋಡ, ಸುಧಾಕರ ತಾರಿ, ಶ್ರೀಕಾಂತ ಅಂಕೋಲಾ, ಈಶ್ವರ ನಾಗಪ್ಪ ಹರಿಕಂತ್ರ ಮಾದನಗೇರಿ ಮಾತನಾಡಿದರು. ಗೋಪಾಲ ಹೊಸ್ಕಟ್ಟಾ, ಶಿವರಾಮ ಹರಿಕಂತ್ರ, ಅನಿತಾ ಮಾಪಾರಿ, ಸುರೇಶ ಹರಿಕಂತ್ರ, ಉಮಾಕಾಂತ ಹೊಸ್ಕಟ್ಟಾ ಇತರರು ಇದ್ದರು.
ಕೈಗೊಂಡ ನಿರ್ಣಯ
ಮಾನ್ಸೂನ್ ಆಗಮನದ ಒಳಗೆ ಸುವರ್ಣ ತ್ರಿಭುಜ ಬೋಟ್ ಅನ್ನು ಮೇಲೆತ್ತಿ ತನಿಖೆ ನಡೆಸಬೇಕು. ಒಂದೊಮ್ಮೆ ಸರ್ಕಾರ ಅಥವಾ ನೇವಿಯವರಿಂದ ಈಗ ಬೋಟ್ ಮೇಲೆತ್ತಲಾಗದಿದ್ದಲ್ಲಿ ನಮಗೆ ಎತ್ತಲು ಅನುಮತಿ ಕೊಡಬೇಕು. ಬೋಟ್ ಮುಳುಗಲು ಕಾರಣವಾದ ಅಂಶಗಳನ್ನು ಪತ್ತೆ ಹಚ್ಚಿ ಬಹಿರಂಗ ಪಡಿಸಬೇಕು. ಅವಘಡದಲ್ಲಿ ಕಾಣೆಯಾದವರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ಕೊಡಿಸುವುದು, ಮೀನುಗಾರರು ಮೃತರೆಂದು ಘೊಷಣೆಯಾದಲ್ಲಿ ಅನುಕಂಪದ ಆಧಾರದಲ್ಲಿ ಅವರ ಕುಟುಂಬದವರಿಗೆ ನೌಕಾ ನೆಲೆಯಲ್ಲಿ ಉದ್ಯೋಗ ಕೊಡಬೇಕು. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಶೀಘ್ರ ಕ್ರಮಕ್ಕೆ ಒತ್ತಾಯಿಸಬೇಕು. ಸಮುದ್ರದಲ್ಲಿ ನಾಪತ್ತೆಯಾದವರು ಮೃತರೆಂದು ಘೊಷಿಸಲು ವಿಶೇಷ ನಿಯಮ ರೂಪಿಸಬೇಕು. ಈ ಎಲ್ಲ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಮೇ 22ರಂದು ಸಲ್ಲಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.