More

    ಅನಾರೋಗ್ಯಕ್ಕೆ ನಮ್ಮ ಆಹಾರ ಪದ್ಧತಿ ಕಾರಣ

    ಪಾಂಡವಪುರ: ಆರೋಗ್ಯ ಸಮಸ್ಯೆ ಆರ್ಥಿಕ ಪ್ರಗತಿ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಜನ ಉತ್ತಮ ಆಹಾರ ಪದ್ಧತಿಯಿಂದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

    ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಕಸಾಪ ಆಯೋಜಿಸಿದ್ದ ವೈದ್ಯರ ದಿನಾಚರಣೆ ಪ್ರಯುಕ್ತ ಶನಿವಾರ ಆಯೋಜಿಸಿದ್ದ ಆರೋಗ್ಯ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ನಗರವಾಸಿಗಳು ಗ್ರಾಮೀಣ ಪ್ರದೇಶದ ಆಹಾರ ಹೊಂದಿಕೊಳ್ಳುತ್ತಿದ್ದರೆ, ಗ್ರಾಮೀಣ ಭಾಗದ ಜನರು ನಗರ ಪ್ರದೇಶದ ಆಹಾರ ಪದ್ಧತಿ ರೂಢಿಸಿಕೊಳ್ಳುತ್ತಿದ್ದಾರೆ. ಹಿಂದೆ ತಮಗೆ ಬೇಕಾದ ಆಹಾರ ಪದಾರ್ಥಗಳನ್ನು ತಾವೇ ಬೆಳೆದು ಸೇವಿಸುತ್ತಿದ್ದ ಕಾರಣ ದಷ್ಟಪುಷ್ಟವಾಗಿರುತ್ತಿದ್ದರು. ಇಂದು ತೂಕದ ಲೆಕ್ಕದಲ್ಲಿ ಆಹಾರ ಸೇವನೆ ಮಾಡಿದರೂ ಆರೋಗ್ಯ ಕಾಪಾಡಿಕೊಳ್ಳಲು ಆಗುತ್ತಿಲ್ಲ. ಇದಕ್ಕೆ ನಮ್ಮ ಆಹಾರ ಪದ್ಧತಿಯೇ ಕಾರಣವಾಗಿದೆ. ನಮ್ಮ ತಾತ, ಮುತ್ತಾತರ ಕಾಲದಿಂದಲೂ ಜಮೀನುಗಳಲ್ಲಿ ತಾವು ಬೆಳೆದ ತರಕಾರಿ, ದವಸ ಧಾನ್ಯಗಳಿಂದಲೇ ಅಡುಗೆ ಮಾಡಿ ಊಟ ಮಾಡುತ್ತಿದ್ದರು. ಜಮೀನುಗಳಲ್ಲಿ ಚೆನ್ನಾಗಿ ದುಡಿಮೆ ಮಾಡಿ ಶತಾಯುಷಿಗಳಾಗಿದ್ದರು. ಆದರೆ, ಇಂದು ನಮ್ಮ ಆಯಸ್ಸು 60 ವರ್ಷ ದಾಟುವುದೇ ಕಷ್ಟವಾಗುತ್ತಿದೆ ಎಂದು ಹೇಳಿದರು.

    ಚಿಕ್ಕ ವಯಸ್ಸಿಗೆ ಬಿಪಿ, ಮಧುಮೇಹ, ಹೃದಯಾಘಾತ ಸೇರಿದಂತೆ ಹತ್ತು ಹಲವಾರು ಕಾಯಿಲೆಗಳಿಗೆ ಬಾಧಿಸುತ್ತಿದೆ. ಯಾವ ಕಾರಣಕ್ಕೆ ಈ ರೀತಿ ಆಗುತ್ತಿದೆ ಎಂದು ಯಾರು ಯೋಚನೆ ಕೂಡ ಮಾಡುತ್ತಿಲ್ಲ. ಸಮಸ್ಯೆ ಪರಿಹಾರ ಹುಡುಕುವ ಬದಲು ಕಾಯಿಲೆ ಬಂದಾಗ ವೈದ್ಯರಿಗೆ ತೋರಿಸುವುದು, ಔಷಧಿ ಪಡೆದುಕೊಳ್ಳುವುದಷ್ಟೇ ಪರಿಹಾರವಾಗಿದೆ ಎಂದರು. ಪ್ರತಿ ವ್ಯಕ್ತಿಯು ಒಂದಲ್ಲ ಒಂದು ಕಾಯಿಲೆಗೆ ತುತ್ತಾಗಿ ದುಡಿದ ಅರ್ಧದಷ್ಟು ಹಣವನ್ನು ಔಷಧಿ ಮತ್ತು ಆಸ್ಪತ್ರೆಗೆ ಖರ್ಚು ಮಾಡುತ್ತಿದ್ದಾನೆ. ಇದು ಶಾಶ್ವತವಾದ ಪರಿಹಾರವಲ್ಲ. ಮೊದಲು ನಾವು ನಮ್ಮ ಆಹಾರ ಪದ್ಧತಿ ಬದಲಾಯಿಸಿಕೊಳ್ಳಬೇಕು ಎಂದರು.

    ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಧಿಕಾರಿ ಡಾ.ಸಿ.ಎ.ಅರವಿಂದ್, ಡಾ.ಎನ್.ಎಂ.ಶ್ಯಾಮಸುಂದರ, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್ , ಪ್ರಧಾನ ಕಾರ್ಯದರ್ಶಿ ನಂಜುಂಡಸ್ವಾಮಿ, ಜಿ.ಪಂ.ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ನಿವೃತ್ತ ಶಿಕ್ಷಕರಾದ ಮಲ್ಲಿಕಾರ್ಜುನಗೌಡ, ಚಂದ್ರಶೇಖರಯ್ಯ, ವಕೀಲ ಮುರುಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts