ಬಾಗಲಕೋಟೆ: ದೇಶ್ಯಾದ್ಯಂತ ಏಕಕಾಲಕ್ಕೆ ಆರಂಭಗೊAಡಿರುವ ನಕ್ಷಾ ಯೋಜನೆಗೆ ಸಾರ್ವಜನಿಕರು ಸಹಕಾರ ನೀಡಬೇಕು. ಈ ಯೋಜನೆಗೆ ಬಾಗಲಕೋಟೆ ನಗರವು ಆಯ್ಕೆಗೊಂಡಿದ್ದು, ಈ ಯೋಜನೆಯಿಂದ ಅನಗತ್ಯ ವ್ಯಾಜ್ಯಗಳು ದೂರವಾಗಿ ನೆಮ್ಮದಿ ಉಂಟಾಗಲಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ನಗರಸಭೆ ನೂತನ ಸಭಾಭವನದಲ್ಲಿ ಮಂಗಳವಾರ ಕಂದಾಯ ಇಲಾಖೆ, ಭೂಮಾಪನಾ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಹಾಗೂ ಪೌರಾಡಳಿತ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಕ್ಷಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಯೋಜನೆಯು ಕರ್ನಾಟಕ ರಾಜ್ಯದ ೧೦ ನಗರ, ಪಟ್ಟಣಗಳಲ್ಲಿ ಏಕ ಕಾಲಕ್ಕೆ ಚಾಲನೆಗೊಳ್ಳುತ್ತಿದ್ದು, ಬಾಗಲಕೋಟೆ ನಗರದ ಅಂದಾಜು ೭೦ ಸಾವಿರ ಆಸ್ತಿಗಳು ಸದರಿ ಯೋಜನೆಗೆ ಒಳಪಡುತ್ತೀವೆ ಎಂದರು.
ಸಾರ್ವಜನಿಕರು ಸಹಕಾರ ನೀಡಿ, ಸದರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಸದರಿ ಯೋಜನೆಯಡಿ ದಾಖಲೆಗಳನ್ನು ಪಡೆಯುವುದರಿಂದ ಮೋಸ, ವಂಚನೆ, ಅನವಶ್ಯಕ ವ್ಯಾಜ್ಯಗಳು ದೂರವಾಗಿ ನಾಗರಿಕರ ನೆಮ್ಮದಿಯ ಬದುಕಿಗೆ ಆಧಾರವಾಗುತ್ತದೆ ಎಂದು ತಿಳಿಸಿದರು.
ಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಮಾತನಾಡಿ, ಸಾರ್ವಜನಿಕರ ನೆಮ್ಮದಿಯ ಬದುಕಿಗೆ ಪೂರಕವಾಗಿರುವ ಇಂತಹ ಯೋಜನೆಗೆ ಯಾವುದೇ ಪಕ್ಷ ಬೇದ ಮರೆತು ಸಹಕಾರ ನೀಡಬೇಕು. ಬಾಗಲಕೋಟೆ ನಗರವು ಸದರಿ ಯೋಜನೆಗೆ ಆಯ್ಕೆಗೊಂಡಿದ್ದು, ಒಂದು ಸಂತಸದ ವಿಷಯವಾಗಿದೆ. ಇಂತಹ ಯೋಜನೆಗೆ ಯಾವಾಗಲೂ ನಮ್ಮ ಸಹಕಾರವಿದ್ದು, ನಾಗರಿಕರು ನಕ್ಷಾ ಯೋಜನೆ ಸಿಬ್ಬಂದಿಗಳಿಗೆ ಅಗತ್ಯ ಮಾಹಿತಿ, ಸಹಕಾರ ನೀಡಿ ತಮ್ಮ ಆಸ್ತಿಗಳನ್ನು ದಾಖಲಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷೆ ಸವಿತಾ ಲೆಂಕ್ಕೆನವರ, ಸಭಾಪತಿ ಯಲ್ಲಪ್ಪ ನಾರಾಯಣಿ, ಭೂದಾಖಲೆಗಳ ಉಪನಿರ್ದೇಶಕ ರವಿಕುಮಾರ ಎಂ, ನಗರಸಭೆ ಆಯುಕ್ತ ವಾಸಣ್ಣ ಆರ್. ಭೂದಾಖಲೆ ಸಹಾಯಕ ನಿರ್ದೇಶಕ ಮಹೇಶ ಪತ್ತಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.