ಅನರ್ಹತೆ ಮಾಡಿದ್ರೂ ಲೋಕಸಭೆಗೆ ಅನ್ವಯಿಸಲ್ಲ; ಡಾ. ಜಾಧವ್​

ಕಲಬುರಗಿ: ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಕಾನೂನು ಅಡ್ಡಿಗಳು ಬರುವುದಿಲ್ಲ. ಅಲ್ಲದೆ ನನ್ನನ್ನು ಅನರ್ಹತೆಗೊಳಿಸಿದರೂ ಅದು ಲೋಕಸಭೆಗೆ ಅನ್ವಯವಾಗಲ್ಲ. ಹೀಗಾಗಿ ಯಾವುದೇ ಕಾನೂನು ತೊಡಕುಗಳು ಉಂಟಾಗುವುದಿಲ್ಲ ಎಂದು ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಹೇಳಿದರು.

ಶಹಾಬಾದ ನಗರಸಭೆ ಜೆಡಿಎಸ್ ಸದಸ್ಯ ಜಬೀಖಾನ ಅವರನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರದ ಉಸ್ತುವಾರಿ ಎನ್.ರವಿಕುಮಾರ ಸಮ್ಮುಖದಲ್ಲಿ ಪಕ್ಷಕ್ಕೆ ಬರ ಮಾಡಿಕೊಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಬೆಂಗಳೂರಿನಿಂದ ಬರುವಾಗ ಕಾನೂನು ಪುಸ್ತಕಗಳನ್ನು ತಂದು ಓದಿದ್ದೇನೆ, ಯಾವುದೇ ಸಮಸ್ಯೆಯಾಗಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಪೀಕರ್ ರಮೇಶಕುಮಾರ ಒಳ್ಳೆಯವರು, ಚಿಂಚೋಳಿ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕರಿಸುತ್ತಾರೆ ಎಂಬ ನಂಬಿಕೆಯಿದೆ. 25ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ. ಅಂದು ಹೋಗಿ ಹಾಜರಾಗಿ ಹೇಳಿಕೆ ನೀಡುತ್ತೇನೆ. ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.

ರಾಜೀನಾಮೆ ಆಂಗೀಕಾರಗೊಳ್ಳದೆ ಇರುವುದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಉದ್ದೇಶ ಪೂರ್ವಕವಾಗಿಯೇ ನನಗೆ ತೊಂದರೆ ಕೊಡುತ್ತಿದ್ದಾರೆ. ಆದರೆ ಒಂದು ಮಾತು ಸತ್ಯ ಸ್ಪೀಕರ್ ಅವರು ಯಾರಿಗೋ ಖುಷಿ ಪಡಿಸುವಂತ ಕ್ರಮ ಕೈಗೊಳ್ಳುವುದಿಲ್ಲ ಎಂದು ಡಾ.ಉಮೇಶ ಜಾಧವ ನುಡಿದರು.

ಗುರು ಆಗಮನದಿಂದ ಗೆದ್ದಂತೆ ಆಗಿದೆ

ಮಾಜಿ ಸಚಿವರು ಹಾಗೂ ನನ್ನ ವೈದ್ಯ ವೃತ್ತಿಯ ಕಲಿಕೆಯಲ್ಲಿ ಗುರುಗಳು ಆಗಿರುವ ಡಾ.ಎ.ಬಿ.ಮಾಲಕರೆಡ್ಡಿ ಬಿಜೆಪಿ ಸೇರ್ಪಡೆಯಾಗಿರುವುದು ನನಗೆ ಗೆದ್ದಂತೆ ಭಾಸವಾಗುತ್ತಿದೆ. ಗೆಲುವಿನ ಅನುಭೂತಿಯಾಗಿದೆ. ಹೀಗಾಗಿ ನಾನು ಗೆದ್ದೇ ಗೆಲ್ಲುತ್ತೇನೆ. ಈ ಸಲ ಲೋಕಸಭೆಯಲ್ಲಿ ಕಲಬುರಗಿಯಿಂದಲೂ ಬಿಜೆಪಿ ಧ್ವಜ ಹಾರಲಿದೆ ಎಂದು ಡಾ.ಜಾಧವ ಹೇಳಿದರು.

ನನಗೆ ಒಳ್ಳೆಯದಾಗಬೇಕು, ನಮ್ಮ ಜನರಿಗೂ ಒಳ್ಳೆಯದಾಗುವ ಒಳ್ಳೆಯ ಮುಹೂರ್ತ ನೋಡಿ ನಾಮಪತ್ರ ಸಲ್ಲಿಸುತ್ತೇನೆ. ನಾನು ದೈವ ಭಕ್ತ. ಹಾಗಾಗಿ ಆ ದೇವರ ಬಳಿಗೆ ಹೋಗಿ ಪೂಜೆ ಮಾಡಿ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ತಿಳಿಸಿದರು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಅಧಿಕಾರಿಗಳೇ ಹಣ ಹಂಚಿದ್ದಾರೆ ಎಂದು ನಮ್ಮ ಕಾರ್ಯಕರ್ತರು ಹೇಳುತ್ತಿದ್ದಾರೆ. ಹೀಗಾಗಿ ಈ ಸಲ ಕಲಬುರಗಿಯಲ್ಲಿ ಕಾಂಗ್ರೆಸ್ನವರು ಆಡಳಿತ ಯಂತ್ರ ದುರುಪಯೋಗ ಪಡಿಸಿಕೊಳ್ಳುವ ಸಾದ್ಯತೆ ಇದೆ. ಹೀಗಾಗಿ ಮೇಲಧಿಕಾರಿಗಳು ನಿಗಾವಹಿಸಬೇಕು. ಅಲ್ಲದೆ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಿಕೊಂಡು ಹೋಗಲು ಕ್ರಮ ಕೈಗೊಳ್ಳಬೇಕು.
| ಡಾ.ಉಮೇಶ ಜಾಧವ ಕಲಬುರಗಿ ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ

One Reply to “ಅನರ್ಹತೆ ಮಾಡಿದ್ರೂ ಲೋಕಸಭೆಗೆ ಅನ್ವಯಿಸಲ್ಲ; ಡಾ. ಜಾಧವ್​”

  1. ಉಮೇಶ್ ಜಾಧವ್ ಒಳ್ಳೆಯ ಕೆಲಸ ಮಾಡಿದ್ದಾರೆ ಈ ಸಲ ಕಲಬುರ್ಗಿ ಕ್ಷೇತ್ರದಿಂದ ಉಮೇಶ್ ಯಾದವ್ ಆರಿಸಿ ಬರುವುದು ಖಚಿತ

Comments are closed.