ಅನನ್ಯ ಹರಿಭಕ್ತ ಮಹಿಪತಿದಾಸರು

| ನಾರಾಯಣ ಬಾಬಾನಗರ

ಕನ್ನಡ ಸಾರಸ್ವತ ಲೋಕಕ್ಕೆ ದಾಸಸಾಹಿತ್ಯದ ಕೊಡುಗೆ ಅನನ್ಯ. ಶಾಸ್ತ್ರವಿಚಾರಗಳನ್ನು ಸರಳವಾಗಿ ಪದ್ಯಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ದಾಸರಿಗೆ ಸಲ್ಲಬೇಕು. ಪುರಂದರ ಮತ್ತು ಕನಕದಾಸರ ನಂತರದ ಅವಧಿಯಲ್ಲಿ ವಿಜಯದಾಸರ ಕಾಲ ಪ್ರಾರಂಭವಾಗುವ ಮುನ್ನ ಜಯಪುರ ಜಿಲ್ಲೆ ಕಾಖಂಡಕಿಯ ಗ್ರಾಮದಲ್ಲಿ ವಾಸವಿದ್ದ ಮಹಿಪತಿದಾಸರು ಮತ್ತು ಅವರ ವಂಶಜರಿಂದ ದಾಸಸಾಹಿತ್ಯ ಸಮೃದ್ಧವಾಗಿ ಬೆಳೆಯಿತು.

ದಿವಾನ ಪದವಿಯಿಂದ ದಾಸತ್ವಕ್ಕೆ!

ಮಹಿಪತಿದಾಸರ ಹಿರಿಯರು ಬಾಗಲಕೋಟ ಮೂಲದವರು. ಸಂಚಾರ ಮಾಡುತ್ತ ವಿಜಯಪುರಕ್ಕೆ ಬಂದರು. ಅನಂತರ ಮಹಿಪತಿದಾಸರು ಕಾಖಂಡಕಿಗೆ ಬಂದು ನೆಲೆಸಿದರು. ಮಹಿಪತಿಯು ಮಹಿಪತಿದಾಸರಾದದ್ದರ ಹಿಂದೆ ರೋಚಕ ಇತಿಹಾಸವಿದೆ. ಆದಿಲ್​ಶಾಹಿ ಅರಸರು ವಿಜಯಪುರವನ್ನು ಆಳುತ್ತಿದ್ದ ಕಾಲ. ನರಸಿಂಹದೇಗುಲದಲ್ಲಿ ಪುರಾಣ ಹೇಳುತ್ತಿದ್ದ ಮಹಿಪತಿಯು ಅರಸನ ಕಣ್ಣಿಗೆ ಬಿದ್ದ. ತಮ್ಮ ಪಾಂಡಿತ್ಯದಿಂದ ಸಹಜವಾಗಿ ಆದಿಲ್​ಶಾಹಿ ಅರಸನ ಆಸ್ಥಾನದಲ್ಲಿ ದಿವಾನ ಹುದ್ದೆ ಅರಸಿ ಬಂತು. ಒಂದು ದಿನ ರಾಜನ ಆಸ್ಥಾನಕ್ಕೆ ತೆರಳುತ್ತಿದ್ದಾಗ ಅಣ್ಣ ತಂಗಿಯರಾಗಿದ್ದ ಶಾಹನುಂಗ ಮತ್ತು ಶಹಾನುಂಗಿ ಎಂಬ ಸೂಫಿ ಸಂತರ ಕಣ್ಣಿಗೆ ಬಿದ್ದರು. ಅವರೊಂದಿಗೆ ನಡೆದ ಸಂಭಾಷಣೆಯೇ ಬದುಕಿನ ದಿಕ್ಕಿನ ತಿರುವಾಯಿತು. ಸೂಫಿಸಂತರ ಸೂಚನೆಯ ಮೇರೆಗೆ ಮಹಿಪತಿದಾಸರು ವಿಜಯಪುರ ಸಮೀಪದ ಸಾರವಾಡ ಗ್ರಾಮದಲ್ಲಿ ವಾಸವಿದ್ದ ಭಾಸ್ಕರಸ್ವಾಮಿಗಳಲ್ಲಿಗೆ ಹೋಗಿ ಅವರನ್ನು ಗುರುಗಳನ್ನಾಗಿ ಮಾಡಿಕೊಂಡರು. ಅನಂತರ ಸಂಚಾರ ಮಾಡುತ್ತ ಹೋಗಿ ತಲುಪಿದ್ದು ಕಾಖಂಡಕಿಗೆ. ಕಾಖಂಡಕಿ ಗ್ರಾಮ ಅಗ್ರಹಾರವಾಗಿತ್ತು. ಇಲ್ಲಿಗೆ ಆಗಮಿಸಿದಾಗ ಊರ ಜನರಿಂದ ಭವ್ಯ ಸ್ವಾಗತ ದೊರಕಿತು. ಊರ ಹೊರಗಿನ ಹೊಲದಲ್ಲಿನ ಬನ್ನಿ ಗಿಡದ ಬುಡದಲ್ಲಿ ಯೋಗಾನುಷ್ಠಾನಕ್ಕೆ ತೊಡಗಿದರು. 11 ವರ್ಷಗಳ ಯೋಗಾನುಷ್ಠಾನವನ್ನು

11 ತಿಂಗಳಲ್ಲೇ ಮುಗಿಸಿದರು!

ಯೋಗಾನುಷ್ಠಾನದಿಂದ ಅಪರೋಕ್ಷ ಜ್ಞಾನದ ಗುರಿ ಮುಟ್ಟಿದರು. ಸ್ವಾನಂದವನ್ನು ಆನಂದಿಸಿದರು. ಅದರ ಅನುಭೂತಿಯನ್ನು ಪದ್ಯಗಳಲ್ಲಿ/ಕೀರ್ತನೆಗಳಲ್ಲಿ ಹಿಡಿದಿಟ್ಟರು. ಮಹಿಪತಿದಾಸರು ಒಟ್ಟು 14 ಅಂಕಿತಗಳಲ್ಲಿ ಪದ್ಯಗಳನ್ನು ಬರೆದಿದ್ದನ್ನು ಗುರುತಿಸಲಾಗಿದೆ. ಇನ್ನೊಂದು ವಿಶಿಷ್ಟ ಪ್ರಯೋಗವನ್ನು ದಾಸರು ಮಾಡಿದ್ದಾರೆ. ಒಂದೇ ಪದ್ಯದಲ್ಲಿ ಕನ್ನಡ, ಮರಾಠಿ, ಪಾರ್ಸಿ – ಹೀಗೆ ವಿವಿಧ ಭಾಷೆಯ ಪದಗಳನ್ನು ಬಳಸಿದ್ದಾರೆ.

ಮಹಿಪತಿದಾಸರಿಗೆ ಇಬ್ಬರು ಗಂಡುಮಕ್ಕಳು. ಹಿರಿಯವನ ಹೆಸರು ದೇವರಾಯ. ಎರಡನೆಯವನ ಹೆಸರು ಕೃಷ್ಣರಾಯ. ಹಿರಿಯ ಮಗ ದೇವರಾಯ ಸಿಂದಗಿ ತಾಲೂಕಿನ ಜಾಲವಾದಿಯ ಆಡಳಿತ ನಡೆಸಿದರೂ ಕೊನೆಗೆ ಅಲೌಕಿಕ ಬದುಕಿಗೆ ಬಂದಿರಬೇಕು. ಜಾಲವಾದಿಯಲ್ಲಿ ದೇವರಾಯರ ವೃಂದಾವನವಿದೆ. ಎರಡನೆಯ ಮಗ ಕೂಡ ತಂದೆಯ ದಾರಿಯಲ್ಲಿಯೇ ನಡೆದು ಕೃಷ್ಣದಾಸರೆನಿಸಿದರು. ತಂದೆಯನ್ನೇ ಗುರುವನ್ನಾಗಿಸಿಕೊಂಡು ನೂರಾರು ಕೃತಿಗಳನ್ನು ರಚಿಸಿದರು. ಮಹಿಪತಿದಾಸರ ಮನೆತನದಲ್ಲಿ ಅವರ ಮೊಮ್ಮಕ್ಕಳು, ಮರಿಮಕ್ಕಳು ಪದ್ಯಗಳನ್ನು ರಚಿಸಿದ್ದಾರೆ. ಮಹಿಪತಿದಾಸರು ಅನುಷ್ಠಾನ ಮಾಡಿದ ಕಾಖಂಡಕಿ ಗ್ರಾಮದಲ್ಲಿನ ಸ್ಥಳದಲ್ಲಿ ಶಾಲಿಗ್ರಾಮಗಳನ್ನು ಬಳಸಿ ನಿರ್ವಿುಸಿದ ವೃಂದಾವನವಿದೆ. ಮಹಿಪತಿದಾಸರು ಬಳಸಿದ ಯೋಗದಂಡವಿದೆ.

ಪ್ರತಿವರ್ಷ ಕಾರ್ತಿಕ ಕೃಷ್ಣ ದಶಮಿಯಿಂದ ಮಾರ್ಗಶೀರ್ಷ ಶುದ್ಧ ದ್ವಿತೀಯಾವರೆಗೆ ಶ್ರೀ ಲಕ್ಷಿ್ಮೕವೆಂಕಟೇಶ ದೇವರ ಉತ್ಸವದೊಂದಿಗೆ ಮಹಿಪತಿದಾಸರ ಆರಾಧನೆ ನಡೆಯುತ್ತದೆ. ಛಟ್ಟಿ ಅಮವಾಸ್ಯೆಯನ್ನು (ನ. 18) ಮಹಿಪತಿದಾಸರ ಪುಣ್ಯತಿಥಿಯಾಗಿ ಆಚರಿಸಲಾಗುತ್ತದೆ. ಗೋಪಾಳಕಾಲಾದೊಂದಿಗೆ ಉತ್ಸವ ಸಂಪನ್ನವಾಗುತ್ತದೆ.

Leave a Reply

Your email address will not be published. Required fields are marked *