More

  ಬಂದರು ನಾಡಿಗೆ ನ್ಯಾಮತಿ ತರಕಾರಿ

  ಧನಂಜಯ ಎಸ್. ಹಕಾರಿ ದಾವಣಗೆರೆ
  ಜಿಲ್ಲೆಯ ನ್ಯಾಮತಿ, ಹೊನ್ನಾಳಿ ಅವಳಿ ಭಾಗದ ತರಕಾರಿ ಬೆಳೆಗಾರರಿಗೆ ಇದೀಗ ಶುಕ್ರದೆಸೆ ಆರಂಭವಾಗಿದೆ.

  ಹೌದು.. ಇಡೀ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ತರಕಾರಿ ಬೆಳೆ ಅವಳಿ ತಾಲೂಕಿನಲ್ಲಿ ದೊರೆಯುತ್ತಿದ್ದು, ಕರ್ನಾಟಕದ ಅರ್ಧ ರಾಜ್ಯಕ್ಕೆ ಇಲ್ಲಿಂದಲೇ ಸರಬರಾಜಾಗುತ್ತಿದೆ.

  ದಕ್ಷಿಣ ಕನ್ನಡ, ಉತ್ತರ ಕರ್ನಾಟಕ, ಸಿಲಿಕಾನ್ ಸಿಟಿ ಸೇರಿ ಇತರ ಜಿಲ್ಲೆಗಳಿಂದ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಈ ಭಾಗದ ಬಹುತೇಕ ಗ್ರಾಮಗಳ ರೈತರು ತರಕಾರಿ ಬೆಳೆಯುವತ್ತ ಚಿತ್ತ ಹರಿಸಿದ್ದಾರೆ.

  ಟೊಮ್ಯಾಟೋಗೆ ಡಿಮ್ಯಾಂಡ್: ಹಲವು ರೈತರು ಟೊಮ್ಯಾಟೋ, ಹಸಿಮೆಣಸಿನಕಾಯಿ ಹೆಚ್ಚಾಗಿ ಬೆಳೆಯುತ್ತಾರೆ. ಜತೆಗೆ ಈರುಳ್ಳಿ, ಕ್ಯಾಬೇಜ್, ಕಾಲಿಫ್ಲವರ್, ಸಾಂಬಾರ್ ಸೌತೆ, ಸೋರೆಕಾಯಿ, ಮುಳ್ಳು ಸೌತೆ, ಬೀಟರೂಟ್, ನವಿಲುಕೋಸು, ಬೆಂಡೆಕಾಯಿ, ಡಬ್ಬಲ್ ಬೀನ್ಸ್, ಎಂ. ಜೆಡ್ ಬೀನ್ಸ್, ಹಾಗಲಕಾಯಿ, ಹಿರೇಕಾಯಿ, ಹಲಸಂದೆ, ಮೂಲಂಗಿ ಹೀಗೆ ತರಹೇವಾರಿ ತರಕಾರಿ ಬೆಳೆಯಲಾಗುತ್ತಿದೆ.

  ನ್ಯಾಮತಿ, ಕೋಡಿಕೊಪ್ಪ, ಕೆಂಚೇನಹಳ್ಳಿ, ಶೆಟ್ನಹಳ್ಳಿ, ಮಲ್ಲಾಪುರ, ಸವಳಂಗ, ಬೆಳಗುತ್ತಿ, ಸುರಹೊನ್ನೆ, ರಾಮೇಶ್ವರ, ಮಲ್ಲಿಗೇನಹಳ್ಳಿ, ಜೀನಹಳ್ಳಿ, ಆರುಂಡಿ, ಮಾದನಬಾವಿ, ದೊಡ್ಡೆತ್ತನಹಳ್ಳಿ ಹಾಗೂ ಕಂಕನಹಳ್ಳಿ ಭಾಗದ ರೈತರು ಕಳೆದ ಕೆಲ ವರ್ಷಗಳಿಂದ ತರಕಾರಿ ಬೆಳೆಗಳಿಂದ ಆರ್ಥಿಕ ಸಬಲತೆ ಸಾಧಿಸಿದ್ದಾರೆ.

  ಕೇವಲ ಭತ್ತ, ಮೆಕ್ಕೆಜೋಳ, ರಾಗಿಗಷ್ಟೇ ಸೀಮಿತವಾಗಿದ್ದ ಆರುಂಡಿ, ಕೆಂಚಿಕೊಪ್ಪ, ಸುರಹೊನ್ನೆ, ನ್ಯಾಮತಿ, ಕೋಡಿಕೊಪ್ಪ, ಬೆಳಗುತ್ತಿ, ಮಾದನಬಾವಿ ಭಾಗದ ಒಟ್ಟು 135 ಹೆಕ್ಟೇರ್ ಪ್ರದೇಶ ಇದೀಗ ತರಕಾರಿ ಬೆಳೆಯುವ ಜಮೀನುಗಳಾಗಿ ಪರಿವರ್ತನೆಗೊಂಡಿವೆ.

  ರಾಯಚೂರು, ಸಿಂಧನೂರಿಗೆ ರಫ್ತು: ಶಿವಮೊಗ್ಗ, ಮಂಗಳೂರು, ಉಡುಪಿ, ಕುಂದಾಪುರ, ಧರ್ಮಸ್ಥಳ, ಕಾರ್ಕಳ, ಕಮ್ಮರಡಿ, ಚಿಕ್ಕಮಗಳೂರು, ಬೆಂಗಳೂರು, ಹೊಸೂರು, ವಿಜಯಪುರ, ರಾಯಚೂರು, ಸಿಂಧನೂರು ಸೇರಿ ಇತರ ಭಾಗಗಳು ಇಲ್ಲಿಂದ ತರಕಾರಿ ತರಿಸಿಕೊಳ್ಳುತ್ತಿವೆ.

  See also  ನೇತ್ರದಾನ ಒಪ್ಪಿಗೆ ಪತ್ರಕ್ಕೆ ಸಹಿ

  ಜೂನ್ ತಿಂಗಳಲ್ಲೇ ಬೇಡಿಕೆ: ಸಮುದ್ರ ತೀರದ ಪ್ರದೇಶಗಳಾದ ಮಂಗಳೂರು, ಉಡುಪಿ ಭಾಗಗಳಲ್ಲಿ ಜೂನ್‌ನಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಗಾಳಿ ಹೆಚ್ಚಿರುವ ಕಾರಣದಿಂದ ಸಾಮಾನ್ಯವಾಗಿ ಬೋಟ್‌ಗಳು ನೀರಿಗೆ ಇಳಿಯಲ್ಲ. ಆ ಸಮಯದಲ್ಲಿ ಜನರು ಮೀನಿನ ಬದಲು ತರಕಾರಿ ಹೆಚ್ಚು ಸೇವಿಸುತ್ತಾರೆ. ಹೀಗಾಗಿ, ಇಲ್ಲಿನ ಜನರು ಇಷ್ಟಪಟ್ಟು ಸೇವಿಸುವ ಸಾಂಬಾರ್ ಸೌತೆ, ಕ್ಯಾಬೇಜ್, ಕಾಲಿಫ್ಲವರ್, ಬೀಟರೂಟ್‌ಗೆ ಬೇಡಿಕೆ ಹೆಚ್ಚಾಗಿರುತ್ತದೆ.

  ಯಾವ ತರಕಾರಿ ಎಷ್ಟೇಷ್ಟು?: ನ್ಯಾಮತಿ, ಹೊನ್ನಾಳಿ ಭಾಗದಲ್ಲಿ ಈರುಳ್ಳಿ 205 ಹೆ., ಟೊಮ್ಯಾಟೋ 160 ಹೆ., ಬೀಟ್‌ರೋಟ್ 7 ಹೆ., ಎಲೆಕೋಸು 24 ಹೆ., ಬದನೆಕಾಯಿ 5 ಹೆ., ಬೆಂಡೆಕಾಯಿ 10 ಹೆ., ಹೂ ಕೋಸು 5 ಹೆ., ಸೌತೆಕಾಯಿ 14 ಹೆ., ಸೋರೆಕಾಯಿ 1 ಹೆ., ಮೆಣಸಿನಕಾಯಿ – 17 ಹೆ. ಹಾಗೂ ಕೊತ್ತಂಬರಿ, ಹಾಗಲಕಾಯಿ 5 ಹೆ. ಸೇರಿ ಒಟ್ಟಾರೆ 453 ಹೆಕ್ಟೇರ್ ಭೂ ಪ್ರದೇಶದಲ್ಲಿ ತರಕಾರಿ ಬೆಳೆಯಲಾಗುತ್ತಿದೆ.

  ನ್ಯಾಮತಿ, ಹೊನ್ನಾಳಿ ಭಾಗ ಅರೆ ಮಲೆನಾಡು ಆಗಿರುವುದರಿಂದ ತರಕಾರಿ ಬೆಳೆಗೆ ಯೋಗ್ಯವಾದ ಕೃಷಿ ಭೂಮಿ ಇದೆ. ಉತ್ತಮ ಇಳುವರಿ ಬರುವುದರಿಂದ ರೈತರು ಪ್ರಸ್ತುತ ತರಕಾರಿ ಬೆಳೆಯತ್ತ ಆಕರ್ಷಿತರಾಗಿದ್ದಾರೆ. ಜತೆಗೆ, ರಾಜ್ಯದ ವಿವಿಧೆಡೆಯಿಂದ ಈ ಭಾಗದ ತರಕಾರಿಗೆ ಹೆಚ್ಚು ಬೇಡಿಕೆ ಇದೆ.
  ಸಿ.ಎಚ್. ರಾಘವೇಂದ್ರ ಪ್ರಸಾದ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ

  ನಮ್ಮ ಭಾಗದ ಹುಳಿ, ಸಿಹಿ ಟೊಮ್ಯಾಟೋ ಹಾಗೂ ಮೆಣಸಿನಕಾಯಿಗೆ ಉತ್ತಮ ಬೇಡಿಕೆ ಇದೆ. ತರಕಾರಿ ಬೆಳೆಗೆ ಹೆಚ್ಚಿನ ಬಂಡವಾಳ ಹೂಡುವ ಅಗತ್ಯವಿಲ್ಲ, ಜತೆಗೆ ಹಾಕಿದ ಬಂಡವಾಳಕ್ಕೆ ಮೋಸವಾಗುವುದು ಕಡಿಮೆ. ಹಾಗಾಗಿ, ತರಕಾರಿ ಬೆಳೆ ನಮ್ಮ ಕೈಹಿಡಿದಿದೆ.
  ಮಾಲತೇಶ್, ದೊಡ್ಡೆತ್ತಿನಹಳ್ಳಿ ರೈತ

  ಕಳೆದ 12 ವರ್ಷದಿಂದ ಟೊಮ್ಯಾಟೋ ಬೆಳೆಯುತ್ತಿದ್ದೇವೆ. ಆರಂಭದಲ್ಲಿ ಉತ್ತಮ ಇಳುವರಿ ದೊರಕಿತ್ತು. ಎಕರೆಗೆ ಸಾವಿರ ಬಾಕ್ಸ್ ಸಿಗುತ್ತಿತ್ತು. ಪ್ರಸ್ತುತ 600 ಬಾಕ್ಸ್ ಬೆಳೆ ತೆಗೆಯುತ್ತಿದ್ದೇವೆ. ಕೆಲವೊಮ್ಮೆ ದರ ಕುಸಿದು ನಷ್ಟ ಅನುಭವಿಸಿದ್ದೇವೆ. ಆದರೆ, ಇತರ ಬೆಳೆಗಳಂತೆ ದೊಡ್ಡ ಮಟ್ಟದ ನಷ್ಟ ಆಗುವುದಿಲ್ಲವೆಂಬುದೇ ಸಮಾಧಾನದ ಸಂಗತಿ.
  ಗವಿಸಿದ್ದಣ್ಣ, ಮಾದನಬಾವಿ ರೈತ

   ಸಿನಿಮಾ

   ಲೈಫ್‌ಸ್ಟೈಲ್

   ಟೆಕ್ನಾಲಜಿ

   Latest Posts