ಲಕ್ಷ್ಮೇಶ್ವರ: ಪುರಸಭೆ ವಾಣಿಜ್ಯ ಸಂಕೀರ್ಣದಲ್ಲಿನ ಚಿಕನ್ಶಾಪ್, ಸೋಮೇಶ್ವರ ದೇವಸ್ಥಾನ ಬಳಿಯ ಕುರಿ ಮಾಂಸದ ಮಾರ್ಕೆಟ್ಗೆ ಪುರಸಭೆ ಅಧಿಕಾರಿಗಳು ಬುಧವಾರ ಬೆಳಗ್ಗೆ ಬೀಗ ಜಡಿದರು. ಅಲ್ಲದೆ, ಅನಧಿಕೃತ ಚಿಕನ್ ಅಂಗಡಿಗಳನ್ನು ಬಂದ್ ಮಾಡಿಸಿ, ಇನ್ನುಳಿದ ಅಧಿಕೃತ ಮಾರಾಟಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
‘ಅಕ್ರಮ ಮಾಂಸ ಮಾರಾಟಕ್ಕೆ ಬೀಳಬೇಕು ಬ್ರೇಕ್’ ಮತ್ತು ‘ಕುಡುಕರ ಕಾರುಬಾರು ಜೋರು’ ಎಂಬ ಶೀರ್ಷಿಕೆಯಡಿ ಬುಧವಾರ ‘ವಿಜಯವಾಣಿ’ಯಲ್ಲಿ ಪ್ರಕಟಗೊಂಡ ವರದಿಗೆ ಸ್ಪಂದಿಸಿದ ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿ ಬೆಳ್ಳಂಬೆಳಗ್ಗೆ ಕಾರ್ಯಪೃವೃತ್ತರಾಗಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದರು.
ವಾಣಿಜ್ಯ ಮಳಿಗೆ, ಚಿಕನ್/ಮಟನ್ ಮಾರ್ಕೆಟ್ನಲ್ಲಿ ಅನಧಿಕೃತವಾಗಿ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೂ ಪುರಸಭೆ ಅಧಿಕಾರಿಗಳು ಬೀಗ ಜಡಿದರು. ಇನ್ನು ಪುರಸಭೆಯಿಂದ ಪರವಾನಗಿ ಪಡೆದ ಕೆಲವೇ ಅಂಗಡಿಗಳಿಗೆ ನಿಯಮಗಳನ್ನು ಪಾಲಿಸುವಂತೆ ಕಟ್ಟಳೆಗಳನ್ನು ವಿಧಿಸಿದರು.
ಇನ್ನು ಕುಡುಕರ ಹಾವಳಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಹಳೇ ಬಸ್ ನಿಲ್ದಾಣ, ಮೂತ್ರಿ, ಕೆರೆಯಂಗಳ, ರಸ್ತೆಯ ಸಂದಿಗೊಂದಿ ಸೇರಿ ಎಲ್ಲೆಂದರಲ್ಲಿ ಬಿದ್ದಿರುವ ತ್ಯಾಜ್ಯಗಳ ರಾಶಿಯನ್ನು ಪೌರ ಕಾರ್ವಿುಕರು ಸ್ವಚ್ಛಗೊಳಿಸಿದರು.
ಬುಧವಾರ ಬೆಳಗ್ಗೆ ಪುರಸಭೆ ವಾಣಿಜ್ಯ ಸಂಕೀರ್ಣದ ಮಳಿಗೆಯಲ್ಲಿ ಚಿಕನ್ ಮಾರಾಟದಂಗಡಿಗೆ, ಕುರಿ ಮಾಂಸದ ಅಡ್ಡೆಗೆ ಬೀಗ ಹಾಕಲಾಗಿದೆ. ಮಧ್ಯಾಹ್ನದ ವೇಳೆಗೆ ವ್ಯಾಪಾರಸ್ಥರು, ಜನಪ್ರತಿನಿಧಿಗಳ ಮನವಿ ಮೇರೆಗೆ ಮಾರ್ಕೆಟ್ ಬೇರೆಡೆ ಸ್ಥಳಾಂತರವಾಗುವವರೆಗೂ ಪರವಾನಗಿ ಪಡೆದ ವ್ಯಾಪಾರಸ್ಥರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಮಾಂಸದ ಮಾರ್ಕೆಟ್ಗೆ ಬೇರೆಡೆ ಸ್ಥಳ ಗುರುತಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಬಿದ್ದಿರುವ ಮದ್ಯದ ಖಾಲಿ ಪ್ಯಾಕೇಟ್, ಬಾಟಲ್ಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದೆ.
| ಆನಂದ ಬದಿ, ಪುರಸಭೆ ಪರಿಸರ ಇಂಜಿನಿಯರ್
ಸೋಮೇಶ್ವರ ದೇವಸ್ಥಾನ ಬಳಿಯ ಕುರಿ ಮಾಂಸದ ಮಾರ್ಕೆಟ್, ವಾಣಿಜ್ಯ ಸಂಕೀರ್ಣದಲ್ಲಿ ಚಿಕನ್ ಅಂಗಡಿ ಬಂದ್ ಮಾಡಿಸಿರುವುದು ಸ್ವಾಗತಾರ್ಹ. ಆದಷ್ಟು ಬೇಗ ಮಾರ್ಕೆಟ್ ಸ್ಥಳಾಂತರವಾಗಬೇಕು ಮತ್ತು ಅಕ್ರಮ ಮಾಂಸ ಮಾರಾಟ ನಿಲ್ಲಬೇಕು.
| ಪ್ರಕಾಶ ಮಾದನೂರ, ಶ್ರೀರಾಮ ಸೇನೆ ತಾಲೂಕಾಧ್ಯಕ್ಷ