ಅನಂತ ಹೇಳಿಕೆಗೆ ತೀವ್ರ ಆಕ್ರೋಶ

ಬೆಂಗಳೂರು: ಜಾತ್ಯತೀತರನ್ನು ಅಪ್ಪ-ಅಮ್ಮ ಇಲ್ಲದವರೆಂದು ಹಾಗೂ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಹೇಳಿಕೆಗೆ ಭಾರಿ ಟೀಕೆ, ಆಕ್ರೋಶಗಳು ವ್ಯಕ್ತವಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಹೋದ್ಯೋಗಿಗಳು ಹೆಗಡೆ ವಿರುದ್ಧ ಹರಿಹಾಯ್ದಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಒಬ್ಬ ಮನುವಾದಿ. ಅವರಿಗೆ ಸಂಸ್ಕೃತಿ ಇಲ್ಲ, ರಾಜಕೀಯ ಭಾಷೆ ಗೊತ್ತಿಲ್ಲ. ಸಂವಿಧಾನವೂ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿಕೆ ನೀಡಿರುವ ಹೆಗಡೆ ಸಂವಿಧಾನವನ್ನೇ ಓದಿಲ್ಲ. ಜಾತ್ಯತೀತ ರಾಷ್ಟ್ರ ಮಾಡುವುದು ಸಂವಿಧಾನದ ಉದ್ದೇಶ. ಭಾರತದಲ್ಲಿ ಎಲ್ಲ ಜಾತಿ, ಧರ್ಮದ ಜನರಿದ್ದಾರೆ. ಇದನ್ನು ಹಿಂದು ರಾಷ್ಟ್ರ ಮಾಡಲು ಆಗುವುದಿಲ್ಲ. ಇಲ್ಲಿ ಎಲ್ಲರೂ ಭಾರತೀಯರು ಎಂದರು.

ಹುಚ್ಚಾಸ್ಪತ್ರೆಯಲ್ಲಿ ಇರಬೇಕಿದ್ದವರು: ಹಾವೇರಿಯಲ್ಲಿ ಮಾತನಾಡಿದ ಸಚಿವ ರುದ್ರಪ್ಪ ಲಮಾಣಿ, ಹೆಗಡೆ ಅವರ ತಲೆ ಶುದ್ಧವಿದ್ದಂತೆ ಕಾಣುತ್ತಿಲ್ಲ. ಹುಚ್ಚಾಸ್ಪತ್ರೆಯಲ್ಲಿ ಇರಬೇಕಾದವರು ಮೋದಿಯವರ ಸಂಪುಟದಲ್ಲಿದ್ದಾರೆ ಎಂದು ಟೀಕಿಸಿದರು.

ಹೆಗಡೆ ಹೇಳಿಕೆ ಕೆಟ್ಟ ಅರ್ಥ ಕೊಡುತ್ತದೆ. ಒಬ್ಬ ಸಚಿವರಿಂದ ಇಂಥ ಮಾತು ಅಪೇಕ್ಷಿಸುವುದಿಲ್ಲ. ಕೂಡಲೇ ಅವರು ತಮ್ಮ ಮಾತುಗಳನ್ನು ವಾಪಸು ಪಡೆದು ಜನರ ಕ್ಷಮೆ ಕೋರಬೇಕು. ಇದು ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ. ಸಂವಿಧಾನ ಬದಲಿಸಲು ಹೋದರೆ ದೊಡ್ಡ ಆಂದೋಲನವೇ ಆದೀತು.

| ಡಾ.ಜಿ.ಪರಮೇಶ್ವರ ಕೆಪಿಸಿಸಿ ಅಧ್ಯಕ್ಷ

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಸಂಸ್ಕೃತಿಯ ಅರಿವಿದೆಯೋ, ಇಲ್ಲವೋ ಗೊತ್ತಿಲ್ಲ. ಸ್ಥಾನದ ಮಹತ್ವ ಅರಿಯದೆ ಕೀಳು ಮಟ್ಟದ ಭಾಷೆ ಬಳಸುತ್ತಾರೆ. ಈ ರೀತಿ ಮಾತನಾಡುವುದರಿಂದ ದೊಡ್ಡ ನಾಯಕರಾಗಬಹುದು ಎನ್ನುವ ಭ್ರಮೆಯಲ್ಲಿದ್ದಾರೆ. ಅಂಬೇಡ್ಕರ್ ವಿಶ್ವಕ್ಕೆ ಮಾದರಿಯಾದ ಸಾಮಾಜಿಕ ನ್ಯಾಯದ ಸಂವಿಧಾನ ನೀಡಿದ್ದಾರೆ. ಅದನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಒಂದು ವೇಳೆ ಕೈ ಹಾಕಿದರೂ ಅಧಃಪತನವಾಗುತ್ತಾರೆ.

| ಎಚ್. ಆಂಜನೇಯ ಸಮಾಜ ಕಲ್ಯಾಣ ಸಚಿವ

ಅನಂತಕುಮಾರ್ ಹೆಗಡೆ ಹೇಳಿಕೆ ಬಿಜೆಪಿ ಆಂತರಿಕ ಅಜೆಂಡಾದ ಪ್ರತೀಕ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಆಗಲೇ ಜನರ ಭಾವನೆಗಳನ್ನು ಕೆರಳಿಸುವ ರೀತಿಯಲ್ಲಿ ಹೇಳಿಕೆ ಬರುತ್ತಿವೆ. ಆಡಳಿತ ಪಡೆದುಕೊಂಡ ಬಳಿಕ ಅವರನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆಯೇ?

| ಎಂ.ವೀರಪ್ಪ ಮೊಯ್ಲಿ ಸಂಸದ

ಹೆಗಡೆ ಜನರ ಕೌಶಲ ಅಭಿವೃದ್ಧಿ ಮಾಡಲು ಸಚಿವರಾಗಿದ್ದಾರೋ, ದ್ವೇಷ ಹಚ್ಚಲೋ? ಅವರ ಮಾತುಗಳು ಬಿಜೆಪಿ ತತ್ವ ಸಿದ್ಧಾಂತ ಬಿಂಬಿಸುತ್ತದೆ. ನಾಡಿನಲ್ಲಿ ಬೆಂಕಿ ಹಚ್ಚಲು ಬಿಜೆಪಿ ಹೆಗಡೆಯನ್ನು ರಾಯಭಾರಿಯಾಗಿ ಮಾಡಿಕೊಂಡಿದೆ.

| ದಿನೇಶ್ ಗುಂಡೂರಾವ್ ಕೆಪಿಸಿಸಿ ಕಾರ್ಯಾಧ್ಯಕ್ಷ

ಡಿವಿಎಸ್ ಬೆಂಬಲ

ಬೆಂಗಳೂರು: ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗಿ ಸಂವಿಧಾನ ಬದಲಾಗಬೇಕೆಂಬ ಅನಂತಕುಮಾರ್ ಹೆಗಡೆ ಹೇಳಿಕೆಯನ್ನು ಕೇಂದ್ರ ಸಚಿವ ಸದಾನಂದಗೌಡ ಸಮರ್ಥಿಸಿಕೊಂಡಿದ್ದಾರೆ. ಒಬಿಸಿ ಬಿಲ್ ತಿದ್ದುಪಡಿಯಾದ ಹಾಗೆ ಕಾಲಕಾಲಕ್ಕೆ ಬದಲಾವಣೆ ಆಗಬೇಕು ಎಂದಿದ್ದಾರಷ್ಟೆ. ವಿವಾದ ಸೃಷ್ಟಿಸಬೇಕೆಂದು ನಮ್ಮವರು ಹೇಳಿಕೆ ನೀಡುವುದಿಲ್ಲ. ಕೆಲವರು ಇದನ್ನೇ ವಿವಾದ ಮಾಡುತ್ತಿದ್ದಾರೆ ಎಂದಿದ್ದಾರೆ.

Leave a Reply

Your email address will not be published. Required fields are marked *